ದೊಡ್ಡಬಳ್ಳಾಪುರ : ಪ್ರಸ್ತುತ ಭಾರತ ಸರ್ಕಾರವು ತಿದ್ದುಪಡಿ ಮಾಡಿ ಜಾರಿಗೆ ತರಲು ಹೊರಟಿರುವ ಎಪಿಎಂಸಿ ಕಾಯ್ದೆ ಉದ್ಯಮಿಗಳ ಪರವಾಗಿದ್ದು, ರೈತರ ಪರವಾಗಿದ್ದ ಕೃಷಿ ಮಾರುಕಟ್ಟೆಯನ್ನು ಬಂಡವಾಳ ಶಾಹಿಗಳ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅದ್ಯಕ್ಷ ಪ್ರಸನ್ನ ಆರೋಪಿಸಿದರು.
ಅವರು ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
1926 ರಲ್ಲಿ ರಾಯಲ್ ಅಗ್ರಿಕಲ್ಚರ್ ಕಮಿಷನ್ ವರದಿಯ ಆಧಾರದಲ್ಲಿ ಕೃಷಿ ಮಾರುಕಟ್ಟೆ ( ಎಪಿಎಂಸಿ ) ಕಾಯ್ದೆಯನ್ನು ಜಾರಿಗೆ ತಂದಿತ್ತು ನಂತರದಲ್ಲಿ 1955 ರಲ್ಲಿ ಅದಕ್ಕೆ ತಿದ್ದುಪಡಿ ತಂದು ಕೃಷಿ ಉತ್ಪನ್ನ ಮಾರುಕಟ್ಟೆ ರೈತರ ಹಿಡಿತದಲ್ಲಿ ಇರುವಂತೆ ಮತ್ತು 11 ಜನ ಸದಸ್ಯರನ್ನು ಒಳಗೊಂಡು ಒಬ್ಬರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳುವ ರೈತಪರ ನೀತಿಯನ್ನು ಜಾರಿಗೆ ತರಲಾಯಿತು, ಈ ಕಾಯ್ದೆಯಲ್ಲಿ ಎಲ್ಲಾ ಬೆಳೆಗಳಿಗೂ ಮಾರುಕಟ್ಟೆಯನ್ನು ಕಲ್ಪಿಸಲಾಗಿತ್ತು, ರೈತನು ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಾಗ ತೂಕ ಮತ್ತು ಅಳತೆ ಎಲ್ಲವನ್ನೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೋಡಿಕೊಂಡು ರೈತನಿಗೆ ಉತ್ತಮ ಬೆಲೆ ಕೊಡಿಸುವ ಕೆಲಸ ಮಾಡುತ್ತದೆ, ಇಂದು ಆ ಎಲ್ಲಾ ರೈತಪರ ನೀತಿಗಳನ್ನು ಗಾಳಿಗೆ ತೂರಿ ಸಂವಿಧಾನ ವಿರೋದಿಯಾದ ಉದ್ಯಮಿಗಳು ಮತ್ತು ಬಂಡವಾಳ ಶಾಹಿಗಳಿಗೆ ಅನುಕೂಲವಾಗುವಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರದ ಹಿಡಿತದಲ್ಲಿರುವ ಮಾರುಕಟ್ಟೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ರಾಜ್ಯಪಾಲರ ಮೂಲಕ ಸುಗ್ರೀವಾಜ್ಙೆ ಜಾರಿ ಮಾಡುವ ಹುನ್ನಾರದಲ್ಲಿದೆ, ಒಂದು ಶತಮಾನ ಹಳೆಯದಾದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸುಧಾರಿಸಿ ದೇಶ ಇಂದು ಅಂತರಾಷ್ಟ್ರೀಯ ಮಾರುಕಟ್ಟೆ ಒದಗಿಸಿ ಕೃಷಿಕನಿಗೆ ಸ್ಪರ್ಧಾತ್ಮಕವಾದ ಬೆಲೆ ಕೊಡಿಸಲು ಸರ್ಕಾರಗಳು ಯೋಜನೆಯನ್ನು ರೂಪಿಸಬೇಕಿತ್ತು ಬದಲಿಗೆ ಅಂತ ರಾಷ್ಟ್ರೀಯ ವ್ಯಾಪಾರಿಗಳು ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಒದಗಿಸಿ ಕೊಡಲು ತುದಿಗಾಲಲ್ಲಿ ನಿಂತಿದೆ, ಈ ಕಾಯ್ದೆಯಿಂದ ಯಾವುದೇ ಖರೀದಿದಾರರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ಖರೀದಿ ಮಾಡಬಹುದು ಅವನಿಗೆ ಕೃಷಿ ಮಾರುಕಟ್ಟೆ ನೀತಿಗಳು ಅನ್ವಯ ಆಗುವುದಿಲ್ಲ, ಅವರು ಖಾಸಗಿ ಮಾರುಕಟ್ಟೆಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ, ಅವರು ಯಾವುದೇ ಸರ್ಕಾರಗಳಿಗೆ ತೆರಿಗೆ ತುಂಬಬೇಕಿಲ್ಲ ರೈತರ ಉತ್ಪಾದನೆಗಳಿಗೆ ಕನಿಷ್ಟ ಬೆಲೆ ನಿಗದಿಯಾಗುವುದು ಎಪಿಎಂಸಿ ಮಾರುಕಟ್ಟೆಯ ಮೂಲಕ. ಒಂದು ವೇಳೆ ಖಾಸಗಿ ಮಾರುಕಟ್ಟೆ ಪ್ರಾರಂಭಗೊಂಡರೆ ಸರ್ಕಾರದ ಕೃಷಿ ಉತ್ಪನ್ನ ಮಾರುಕಟ್ಟೆಗಳು ಸಂಪೂರ್ಣ ನಾಶವಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ ಅವರು ರೈತರಿಗೆ ಮರಣ ಶಾಸನವಾದ ಈ ಕಾಯ್ದೆಯನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಜಗದೀಶ್ ನಾಯ್ಕ್ ಅವರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ವಕೀಲರಾದ ಸತೀಶ್, ಹಸಿರು ಸೇನೆಯ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಕಾಡನೂರು ಹನುಮೆಗೌಡ,ವಸಂತ್, ಸೇರಿದಂತೆ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.