ಬೆಂಗಳೂರು: ಅಶ್ಲೀಲ ಸಂದೇಶ ಕಳಿಸಿದ ಕಾರಣ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ.
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದು ಅವರಿಗೆ ತಕ್ಷಣವೇ ಆಪರೇಷನ್ ಮಾಡಿಸುವ ಅಗತ್ಯವಿದೆ ಎಂದು ದರ್ಶನ್ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು.
ಇದನ್ನು ಪುರಸ್ಕರಿಸಿದ್ದ ಕೋರ್ಟ್, ದರ್ಶನ್ ಅವರ ಮೆಡಿಕಲ್ ರಿಪೋರ್ಟ್ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಇಂದು ಹೈಕೋರ್ಟ್‌ಗೆ ಬಳ್ಳಾರಿ ಜೈಲು ಅಧಿಕಾರಿಗಳು ದರ್ಶನ್ ಬೆನ್ನುನೋವಿಗೆ ಸಂಬಂಧಿಸಿದ ಎಂಆರ್‌ಐ ವರದಿಯನ್ನ ಸಲ್ಲಿಸಿದ್ದರು.
ಈ ವೇಳೆ ದರ್ಶನ್ ಪರ ಹಿರಿಯ ವಕೀಲ ಸಿ. ವಿ. ನಾಗೇಶ್ ವಾದ ಮಂಡಿಸಿ, ದರ್ಶನ್ ಅವರು ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದು, ವಿಜಯನಗರ ವೈದ್ಯಕೀಯ ಸಂಸ್ಥೆಯು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದೆ. ಶಸ್ತ್ರಚಿಕಿತ್ಸೆ ಮಾಡದಿದ್ದರೆ ಮೂತ್ರಪಿಂಡ ಸೇರಿದಂತೆ ಮತ್ತಿತರ ಅಂಗಾಂಗಳಿಗೆ ಸಮಸ್ಯೆಯಾಗಲಿದೆ. ಬಳ್ಳಾರಿಯಲ್ಲಿ ಸೌಲಭ್ಯದ ಕೊರತೆ ಇರುವುದರಿಂದ ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅನುಮತಿಸಬೇಕು ಎಂದು ಹೇಳಿದರು.
ವಿಶೇಷ ಸರ್ಕಾರಿ ಅಭಿಯೋಜಕಾದ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿ, ದರ್ಶನ್ ಅವರ ವೈದ್ಯಕೀಯ ವರದಿಯ ಪ್ರತಿಯನ್ನು ನಮಗೆ ನೀಡಬೇಕು. ಅದನ್ನು ಪರಿಶೀಲಿಸಿ, ಅಗತ್ಯಬಿದ್ದರೆ ಆಕ್ಷೇಪಣೆ ಸಲ್ಲಿಸಲಾಗುವುದು. ಆನಂತರ ವಾದ ಮಂಡಿಸಲಾಗುವುದು ಎಂದರು.
ವಾದ ಆಲಿಸಿದ ಪೀಠವು ವೈದ್ಯಕೀಯ ವರದಿಯ ಪ್ರತಿಯನ್ನು ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೀಡಬೇಕು. ಅದನ್ನು ಪರಿಶೀಲಿಸಿ ಅವರು ವಾದ ಮಂಡನೆ ಮಾಡಲಿದ್ದಾರೆ ಎಂದು ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತು.