ಬೆಂಗಳೂರು: ರಾಜ್ಯದ ವಿವಿಧ ಕೈಗಾರಿಕಾ ಮತ್ತು ಆರ್ & ಡಿ ವಲಯಗಳಲ್ಲಿ ತಮ್ಮ ದೇಶದ ನಾನಾ ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ಹೊಂದಿವೆ ಎಂದು ನೆದರ್ಲೆಂಡ್ಸ್ ಕಾನ್ಸುಲ್ ಜನರಲ್ ಇವೋಟ್ ಡಿ ವಿಟ್ಸರ್ವ್ಸ್ (Ivot D. Vitzervz) ಹೇಳಿದ್ದಾರೆ.
ಅವರು ಗುರುವಾರ ವಿಧಾನಸೌಧದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ (MB Patila) ಅವರನ್ನು ಭೇಟಿ ಮಾಡಿ, ವಿಚಾರ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಯೂರೋಪ್ ರೋಡ್-ಶೋ ನಡೆಸಲಾಗಿತ್ತು.
ಆ ಸಂದರ್ಭದಲ್ಲಿ ಎನ್ಎಕ್ಸ್ ಪಿ ಸೆಮಿಕಂಡಕ್ಟರ್ಸ್ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆರ್ & ಡಿ ಚಟುವಟಿಕೆಗಳಿಗೆ 1 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಆಸಕ್ತಿ ತೋರಿತ್ತು. ಈ ಸಂಬಂಧ ಮುಂದಿನ ದಿನಗಳಲ್ಲಿ ಮತ್ತಷ್ಟು ಅನುಸರಣಾ ಸಭೆಗಳನ್ನು ನಡೆಸಲಾಗುವುದು ಎಂದಿದ್ದಾರೆ.
ನೆದರ್ಲೆಂಡ್ಸ್ ಕಂಪನಿಗಳು ಭಾರತದಲ್ಲಿ ಮಾಡಿರುವ ಹೂಡಿಕೆಯಲ್ಲಿ ಶೇ.9ರಷ್ಟು ರಾಜ್ಯದಲ್ಲೇ ಆಗಿದೆ. ಫಿಲಿಪ್ಸ್ ಕಂಪನಿಯು ಯಲಹಂಕದ ತನ್ನ ನೂತನ ಕ್ಯಾಂಪಸ್ಸಿಗೆ 50 ಮಿಲಿಯನ್ ಯೂರೋ ಬಂಡವಾಳ ಹೂಡಿದೆ ಎಂದು ಅವರು ತಿಳಿಸಿದ್ದಾರೆ.
ನೆದರ್ಲೆಂಡ್ಸ್ ದೇಶದ ಕಂಪನಿಗಳಾದ ಶೆಲ್, ಆ್ಯಕ್ಸೋ ನೊಬೆಲ್, ಟಿಎನ್ ಟಿ ಎಕ್ಸ್‌ಪ್ರೆಸ್ ಮುಂತಾದ ಕಂಪನಿಗಳು ನಮ್ಮಲ್ಲಿವೆ. ಡಾಬಸಪೇಟೆ ಬಳಿ ಅಸ್ತಿತ್ವಕ್ಕೆ ಬರುತ್ತಿರುವ ಕ್ವಿನ್ ಸಿಟಿ ಯೋಜನೆಯಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ಕಾನ್ಸುಲ್ ಜನರಲ್ ಗಮನಕ್ಕೆ ತರಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದ ನಂತರ ನಾವು ವಿರಮಿಸಿಲ್ಲ. ನಿರಂತರ ಅನುಸರಣ ಸಭೆಗಳನ್ನು ನಡೆಸುತ್ತಿದ್ದೇವೆ. ಒಡಂಬಡಿಕೆ ಮತ್ತು ಹೂಡಿಕೆ ಆಸಕ್ತಿಗಳನ್ನು ನೈಜ ಹೂಡಿಕೆ ಆಗುವಂತೆ ನೋಡಿಕೊಳ್ಳಲು ಆದ್ಯತೆ ನೀಡಿದ್ದೇವೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಜರಿದ್ದರು.
Ivot D. Vitzervz, Consul General of the Netherlands, stated on Thursday that several Dutch companies are eager to invest in various Research & Development (R&D) sectors in Karnataka.