ಬೆಂ.ಗ್ರಾ.ಜಿಲ್ಲೆ; ಅಧಿಕೃತ ರಸಗೊಬ್ಬರ ಮಾರಾಟ ಪರವಾನಿಗೆ ಇಲ್ಲದೆ ರಸಗೊಬ್ಬರಗಳನ್ನು(Fertilizer) ಕಾಳಸಂತೆಯಲ್ಲಿ ದಾಸ್ತಾನು ಹಾಗೂ ಮಾರಾಟ ಮಾಡಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದ್ದಾರೆ.
ರಸಗೊಬ್ಬರ ದಾಸ್ತಾನು ಮತ್ತು ಗರಿಷ್ಟ ಮಾರಾಟ (ಎಂ.ಆರ್.ಪಿ) ದರದ ವಿವರಗಳನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರಮುಖವಾದ ಸ್ಥಳದಲ್ಲಿ ಪ್ರದರ್ಶಿಸಬೇಕು. ಗರಿಷ್ಟ ಮಾರಾಟ ದರಗಳಿಗಿಂತ ಹೆಚ್ಚಿನ ಬೆಲೆಗೆ ಯಾವುದೇ ರಸಗೊಬ್ಬರಗಳನ್ನು ಮಾರಾಟ ಮಾಡಿದರೆ ಅಂತವರ ವಿರುದ್ಧವು ಕೂಡ ಕ್ರಮ ಕೈಗೊಳ್ಳಲಾಗುವುದು.
ರಸಗೊಬ್ಬರ ಮಿತ ಬಳಕೆ ಇರಲಿ
ಅತಿಯಾದ ಯೂರಿಯಾ ರಸಗೊಬ್ಬರದ ಬಳಕೆಯಿಂದ ಸಸ್ಯಗಳ ಬೆಳವಣಿಗೆ ದುರ್ಬಲವಾಗಿ, ಹೂವು ಮತ್ತು ಹಣ್ಣಿನ ಇಳುವರಿಯಲ್ಲಿ ಕುಂಠಿತವಾಗುತ್ತದೆ ಹಾಗೂ ಕೀಟ ಮತ್ತು ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತದೆ. ಅಲ್ಲದೇ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ವೈವಿಧ್ಯತೆ ಮತ್ತು ಪರಿಸರದ ಮೇಲೆ ಗಮನಾರ್ಹವಾದ ಪರಿಣಾಮ ಬೀರುತ್ತದೆ ಹಾಗಾಗಿ ಯೂರಿಯ ರಸಗೊಬ್ಬರ ಬಳಕೆ ಮಿತಿ ಇರಲಿ.
ಯೂರಿಯಾ ಗೊಬ್ಬರವು ರೂಪಾಂತರ ಗೊಳ್ಳುವಾಗ ಬಿಡುಗಡೆಯಾಗುವ ನೈಟ್ರೇಟ್‌ಗಳು ಅಂತರ್ಜಲ ಸೇರಿ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಯೂರಿಯಾ ಬಳಕೆಯ ಪರಿಣಾಮಕತ್ವವನ್ನು ಹೆಚ್ಚಿಸಲು ಮತ್ತು ಪರಿಸರದ ಮೇಲಿನ ದುಷ್ಪರಿಣಾಮವನ್ನು ಕಡಿಮೆ ಮಾಡಲು ಎಚ್ಚರಿಕೆಯಿಂದ ನಿರ್ವಹಿಸುವುದು ಹಾಗೂ ಇತರೆ ಪರ್ಯಾಯ ಮಾರ್ಗಗಳನ್ನು ಅನುಸರಿಸುವುದು ಸೂಕ್ತ.
ಕೊಟ್ಟಿಗೆ, ಸಾವಯವ ಗೊಬ್ಬರ ಬಳಕೆಗೆ ಕೃಷಿ ಇಲಾಖೆ ಸಲಹೆ
ರೈತರು 3 ವರ್ಷಗಳಿಗೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಿ, ತಮ್ಮ ಜಮೀನಿನ ಮಣ್ಣಿನಲ್ಲಿರುವ ಪೋಷಕಾಂಶಗಳ ಬಗ್ಗೆ ಮಾಹಿತಿ ಪಡೆಯಿರಿ, ಪ್ರತಿ ವರ್ಷ ಇಲ್ಲವಾದಲ್ಲಿ ಎರಡು ವರ್ಷಳಿಗೊಮ್ಮೆ ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರ ನೀಡಿ.
ಮುಖ್ಯ ಬೆಳೆ ಬಿತ್ತನೆಗೆ ಒಂದೆರಡು ತಿಂಗಳ ಮೊದಲೇ ಹಸಿರು ಗೊಬ್ಬರ ಬೀಜಗಳಾದ ವೆಲೈಟ್ ಬೀನ್ಸ್, ಅಲಸಂದೆ, ಹುರುಳಿ, ಅಪ್ಪಣಬು, ಡಯಾಂಚ ಇಂತಹ ಬೆಳೆಗಳನ್ನು ಹೂವಾಡುವವರೆಗೂ ಬೆಳೆಸಿ, ಮಣ್ಣಿಗೇ ಸೇರಿಸಿ. ಶೇ 50 ರಷ್ಟು ಸಾರಜನಕವನ್ನು ಯೂರಿಯಾ ರೂಪದಲ್ಲಿ ನೀಡಿ.
ನೀರಾವರಿ ಇದ್ದಲಿ ಬೆಳವಣಿಗೆ ಹಂತದಲ್ಲಿ ಅವಶ್ಯವಿದ್ದಲ್ಲಿ ಶೇಖಡ 100% ನೀರಿನಲ್ಲಿ ಕರಗುವ ಸಂಯುಕ್ತ ರಸಗೊಬ್ಬರಗಳು ಅಥವಾ ನ್ಯಾನೋ ಯೂರಿಯಾ/ನ್ಯಾನೋ ಡಿಎಪಿ ಸಿಂಪರಣೆ ಮಾಡಿಸಲು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.