ಚನ್ನಪಟ್ಟಣ; “ಇಡೀ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಲು ಆದೇಶ ಹೊರಡಿಸಿ. ಈ ಸಂಘಗಳಿಂದ ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಆಗುತ್ತದೆ. ಇದಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ಡಾ. ವೆಂಕಟಪ್ಪ ಅವರು ತಮ್ಮ ಕಣ್ವ ಫೌಂಡೇಶನ್ ನಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆ ನೂತನ ಕಟ್ಟಡವನ್ನು ಶಿವಕುಮಾರ್ ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

“ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಮಟ್ಟಕ್ಕೆ ಬೆಳೆದಿರುವವರು ಆ ಶಾಲೆಯ ಕಲ್ಯಾಣಕ್ಕೆ ಅಗತ್ಯ ನೆರವು ನೀಡುತ್ತಾರೆ. ಇದಕ್ಕೆ ಅಗತ್ಯ ಸಂಘಟನೆ ಆಗಬೇಕು. ವೆಂಕಟಪ್ಪನವರು ಮಾಡಿರುವ ಸಾಹಸಕ್ಕೆ ಇನ್ನು ಹೆಚ್ಚಿನ ಜನ ಕೈ ಹಾಕಬೇಕು. ಇಂತಹ ಕೆಲಸಗಳು ಸಮಾಜದಲ್ಲಿ ಅವರ ಹೆಸರುಗಳನ್ನು ಶಾಶ್ವತವಾಗಿ ಉಳಿಸುತ್ತವೆ” ಎಂದು ತಿಳಿಸಿದರು.
“ಮಕ್ಕಳ ಕೈಯಲ್ಲಿ ಈ ಶಾಲೆ ಉದ್ಘಾಟನೆ ಮಾಡಿಸಿದ್ದೇವೆ. ನನ್ನಂತೆಯೇ ಈ ಊರಿನ ಮಕ್ಕಳು ಬೆಳೆಯಬೇಕು ಎಂಬ ವೆಂಕಟಪ್ಪನವರ ದೂರದೃಷ್ಟಿಯಿಂದ ಈ ಜ್ಯೋತಿಯನ್ನು ಬೆಳಗಿಸಲಾಗಿದೆ. ಶುಭಂ ಕರೋತಿ ಕಲ್ಯಾಣಂ ಆರೋಗ್ಯ, ಧನಸಂಪದಂ. ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಃ ಎಂಬ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಮಂಗಳವಾಗಲಿ ಎಂದು ಇಲ್ಲಿರುವ ಎಲ್ಲಾ ಹಿರಿಯರು ಆಶೀರ್ವಾದ ಮಾಡಿದ್ದೇವೆ.
“ದೀಪದಿಂದ ಜ್ಯೋತಿ ಬೆಳಗುತ್ತಿದ್ದು, ಅಕ್ಷರದಿಂದ ಬದುಕು ಬೆಳಗುತ್ತದೆ. ನಿಮ್ಮ ಶಿಕ್ಷಕರು ಹೇಳಿಕೊಟ್ಟ ಅಕ್ಷರದಿಂದ ನಿಮ್ಮ ಬದುಕು ಬೆಳಗಲಿ. ಎದೆಯೊಳಗೆ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ. ನಾವು ಎಷ್ಟೇ ದೊಡ್ಡವರಾದರೂ ಕೊನೆಗೆ ಶಿಕ್ಷಕರಿಗೆ ಕೊಡುವ ಸ್ಥಾನಮಾನವನ್ನು ಬೇರೆಯವರಿಗೆ ನೀಡುವುದಿಲ್ಲ. ಅನ್ನ ಹೊಟ್ಟೆ ತುಂಬಿಸುತ್ತದೆ. ಆದರೆ ಅಕ್ಷರ ಹೊಟ್ಟೆ ತುಂಬಿಸಲು ಮಾರ್ಗದರ್ಶನ ನೀಡುತ್ತದೆ. ಇಡೀ ರಾಜ್ಯದಲ್ಲಿ 2 ಸಾವಿರ ಸಿಎಸ್ಆರ್ ಶಾಲೆ ನಿರ್ಮಿಸಲು ಸರ್ಕಾರ ಸಂಕಲ್ಪ ಮಾಡಿದೆ. ಶಿಕ್ಷಣ ನನ್ನ ನೆಚ್ಚಿನ ಕ್ಷೇತ್ರ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣ ಪ್ರೇಮಿ, ಆಸಕ್ತಿಯಲ್ಲಿ ರಾಜಕಾರಣಿ ಎಂದು ಹೇಳುತ್ತಿರುತ್ತೇನೆ. ನನಗೆ ಉತ್ತಮ ಶಿಕ್ಷಣ ಕೊಡಿಸಲು ನಮ್ಮ ತಂದೆ ತಾಯಿ ನನ್ನನ್ನು ಬೆಂಗಳೂರಿನಲ್ಲಿ ಶಾಲೆಗೆ ಸೇರಿಸಿದರು. ನಾನು ಕಲಿತ ಸ್ವಲ್ಪ ವಿದ್ಯೆಯಿಂದ ಇಲ್ಲಿಯವರೆಗೂ ಬೆಳೆದಿದ್ದೇನೆ” ಎಂದರು.
“ಸಿಎಸ್ಆರ್ ಶಾಲೆ ನಿರ್ಮಿಸಬೇಕು ಎಂದು ಸಚಿವ ಸಂಪುಟ ಉಪ ಸಮಿತಿ ಮಾಡಿ ನನ್ನದೇ ಆದ ರೂಪುರೇಷೆಗಳನ್ನು ನೀಡಿದ್ದೇನೆ. ಮನಮೋಹನ್ ಸಿಂಗ್ ಅವರ ಸರ್ಕಾರ ದೊಡ್ಡ ಕಂಪನಿಗಳಿಗೆ ವಾರ್ಷಿಕವಾಗಿ ಶೇ.2ರಷ್ಟು ಹಣವನ್ನು ಸಿಎಸ್ಆರ್ ಕಾರ್ಯಕ್ರಮ ರೂಪಿಸುವಂತೆ ಮಾಡಿದರು. ಮಹಾಭಾರತದಲ್ಲಿ ಭೀಷ್ಮ, ಧರ್ಮರಾಯನಿಗೆ ಒಂದು ಮಾತು ಹೇಳುತ್ತಾನೆ. ಮನುಷ್ಯ ಹುಟ್ಟುವಾಗ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ಅದು ತಂದೆ ತಾಯಿ ಋಣ, ದೇವರ ಋಣ, ಗುರುವಿನ ಋಣ, ಸಮಾಜದ ಋಣ. ಈ ಋಣಗಳನ್ನು ಧರ್ಮದಿಂದ ತೀರಿಸಬೇಕು ಎಂದು ಹೇಳುತ್ತಾನೆ. ಅದೇ ರೀತಿ ವೆಂಕಟಪ್ಪನವರು ಹಾಗೂ ಅವರ ಕುಟುಂಬದವರು ಈ ಎಲ್ಲಾ ಋಣವನ್ನು ಧರ್ಮದಿಂದ ತೀರಿಸುತ್ತಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಹೇಳಿದರು.
“ಬೆಂಗಳೂರು, ಚನ್ನಪಟ್ಟಣದ ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಕೆಂಗಲ್ ಹನುಮಂತಯ್ಯ ಅವರು ನಗರಸಭೆ ಅಧ್ಯಕ್ಷರಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 6 ಲಕ್ಷ ಮಾತ್ರ ಇತ್ತು. ಇಂದು 1.40 ಕೋಟಿಗೆ ಏರಿದೆ. ಇದನ್ನು ನಿಯಂತ್ರಿಸಬೇಕು. ಜನ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡಿದರೆ ಈ ವಲಸೆ ತಪ್ಪಿಸಬಹುದು” ಎಂದು ತಿಳಿಸಿದರು.
“ನೀವು ಉದ್ಯೋಗದ ಬಗ್ಗೆ ಮಾತ್ರ ಚಿಂತಿಸಬೇಡಿ. ನೀವೇ ಉದ್ಯಮಿಯಾಗಿ ನೂರಾರು ಜನರಿಗೆ ಉದ್ಯೋಗ ನೀಡುವ ಬಗ್ಗೆ ಚಿಂತನೆ ಮಾಡಬೇಕು. ನಮ್ಮ ಸರ್ಕಾರ ಸಿಎಸ್ಆರ್ ನಿಧಿಯಿಂದ ಗ್ರಾಮೀಣ ಭಾಗದಲ್ಲಿ ಶಾಲೆ ನಿರ್ಮಾಣಕ್ಕೆ ನಮ್ಮ ಜಿಲ್ಲೆ ಸಾಕಷ್ಟು ಮುಂದಿದೆ. ಇಡೀ ರಾಜ್ಯದಲ್ಲಿ ಇದು ದೊಡ್ಡ ಯೋಜನೆಯಾಗಿದೆ. ಸಿಎಸ್ಆರ್ ನಿಧಿ ಮೂಲಕ ಕನಕಪುರದಲ್ಲಿ 9, ಚನ್ನಪಟ್ಟಣದಲ್ಲಿ 5, ಮಾಗಡಿ 3, ರಾಮನಗರ 4, ಹಾರೋಹಳ್ಳಿಯಲ್ಲಿ 4 ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 24 ಶಾಲೆಗಳನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ. ಆಮೂಲಕ ಶಿಕ್ಷಣ ಕ್ರಾಂತಿಗೆ ಕೈಹಾಕಿದ್ದೇವೆ” ಎಂದು ಹೇಳಿದರು.
“ನೀವೆಲ್ಲರೂ ಬೆಂಗಳೂರಿನ ಜಿಲ್ಲೆಯವರು. ನಾವು ಮೂಲತಃ ಬೆಂಗಳೂರಿನವರು. ನಿಮ್ಮ ಸ್ವಾಭಿಮಾನದ ಬದುಕು, ಆಸ್ತಿ ಮೌಲ್ಯ ಅಭಿವೃದ್ಧಿಗೆ, ನಮ್ಮ ಗುರುತಿಗೆ ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮಾಡಿದ್ದೇವೆ. ಇಡೀ ವಿಶ್ವ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ಕೆಂಪೇಗೋಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ವೇಳೆ ಬೆಂಗಳೂರಿಗೆ ಆಗಮಿಸಿದ್ದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಇಷ್ಟು ದಿನ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದರು. ಇನ್ನುಮುಂದೆ ಮೊದಲು ಬೆಂಗಳೂರಿಗೆ ಬಂದು ನಂತರ ಇತರ ನಗರಗಳಿಗೆ ಹೋಗುತ್ತಾರೆ ಎಂದು ಹೇಳಿದ್ದರು” ಎಂದರು.
“ನಾವು ವೇದಗಳನ್ನು ಓದಿ ದೊಡ್ಡವರಾಗುವುದಕ್ಕಿಂತ ಜನರ ವೇದನೆಗಳನ್ನು ಅರಿತು ಕೆಲಸ ಮಾಡಬೇಕು. ಆಗ ನಮ್ಮ ಬದುಕಿಗೆ ಸಾರ್ಥಕತೆ ಬರುತ್ತದೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ವೆಂಕಟಪ್ಪನವರು ಇಂದು ಮಾಡಿರುವ ಕೆಲಸ ಅವರು ಮತ್ತು ಅವರ ಕುಟುಂಬ ಇಂತಿಹಾಸ ಪುಟ ಸೇರಿದ್ದಾರೆ” ಎಂದು ಶ್ಲಾಘಿಸಿದರು.
“ಈ ಜಾಗವನ್ನು ಈ ಊರಿನ ದಿವಂಗತ ಶ್ರೀನಿವಾಸ ಗೌಡರು 4 ಎಕರೆ ಜಾಗವನ್ನು ದಾನ ಮಾಡಿದ್ದಾರೆ. ಅವರನ್ನು ನಾನು ಸ್ಮರಿಸಿಕೊಳ್ಳಬೇಕು. ವೆಂಕಟಪ್ಪನವರ ಕುಟುಂಬ ಇಂದು 14 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಶಾಲೆ ನಿರ್ಮಿಸಿದ್ದಾರೆ. ಅವರು ಇಂದು ಬಿತ್ತಿರುವ ಬೀಜ ಮುಂದೆ ಹೆಮ್ಮರವಾಗಿ ಬೆಳೆದು ಚನ್ನಪಟ್ಟಣ ಹಾಗೂ ಇಡೀ ರಾಜ್ಯಕ್ಕೆ ಮಾದರಿಯಾಗಲಿ. ಮನೆ ಮನೆಯಲ್ಲೂ ವ್ಯಕ್ತಿ ಜನಿಸುತ್ತಾರೆ. ಆದರೆ ವ್ಯಕ್ತಿತ್ವ ಕೆಲವರಲ್ಲಿ ಮಾತ್ರ ಬೆಳೆಯುತ್ತದೆ. ಈ ಕುಟುಂಬದ ವ್ಯಕ್ತಿತ್ವ ಇಡೀ ಸಮಾಜಕ್ಕೆ ಮಾದರಿಯಾಗಿದೆ” ಎಂದರು.
ಮಾಧ್ಯಮ ಪ್ರತಿಕ್ರಿಯೆ
ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. “ನಾವು ಶಾಲೆಗಳಿಗಾಗಿ ಕೆಲವು ಜಾಗ ದಾನ ಮಾಡಿದ್ದೇವೆ. ಆದರೆ ವೆಂಕಟಪ್ಪನವರು ನಿಸ್ವಾರ್ಥದಿಂದ ಸರ್ಕಾರಿ ಶಾಲೆ ನಿರ್ಮಾಣಕ್ಕೆ 14 ಕೋಟಿ ವೆಚ್ಚ ಮಾಡಿರುವುದು ನಿಜಕ್ಕೂ ಶ್ಲಾಘನೀಯ” ಎಂದರು.
ಪ್ರತಿ ಶಾಸಕರ ಕ್ಷೇತ್ರಕ್ಕೆ ಸಿಎಂ 50 ಕೋಟಿ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ಕೇಳಿದಾಗ, “ನಾವು ಬಜೆಟ್ ನಲ್ಲಿ ಈ ತೀರ್ಮಾನ ಮಾಡಿದ್ದೆವು. ಇದಕ್ಕಾಗಿ ಸುಮಾರು 8 ಸಾವಿರ ಕೋಟಿಯಷ್ಟು ಅನುದಾನ ಮೀಸಲಿಡಲಾಗಿತ್ತು. ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರಿಗೆ ಈ ಅನುದಾನ ನೀಡುತ್ತೇವೆ. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಶಾಸಕರ ವಿವೇಚನೆಗೆ ಅವಕಾಶ ನೀಡಿ ಅನುದಾನ ನೀಡಲಾಗಿದೆ” ಎಂದರು.
ಬಿಜೆಪಿ ಶಾಸಕರಿಗೆ ಅನುದಾನ ನೀಡಿಲ್ಲ ಎಂದು ಕೇಳಿದಾಗ, “ಈಗಷ್ಟೇ ಅನುದಾನ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಎಲ್ಲರೂ ತಾಳ್ಮೆಯಿಂದ ಇರಬೇಕು. ಅವರ ಕಾಲದಲ್ಲಿ ಅವರು ಎಷ್ಟು ಕೊಟ್ಟಿದ್ದರು ಎಂದು ಹೇಳಲಿ. ನನ್ನ ಕ್ಷೇತ್ರಕ್ಕೆ ನಿಗದಿಯಾಗಿದ್ದ ಮೆಡಿಕಲ್ ಕಾಲೇಜನ್ನು ಅವರು ಕಿತ್ತುಕೊಂಡರು. ಅವರು ಅದನ್ನು ಮರೆತಿದ್ದಾರಾ? ನಾವು ಆ ಕೆಲಸ ಮಾಡುವುದಿಲ್ಲ” ಎಂದು ತಿಳಿಸಿದರು.
ಬೆಂಗಳೂರಿನ 40 ಶಾಲೆಗಳಿಗೆ ಹುಸಿ ಬಾಂಬ್ ಕರೆ ಬಂದಿರುವ ಬಗ್ಗೆ ಕೇಳಿದಾಗ, “ಯಾರೂ ಈ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ. ನಮ್ಮ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿದ್ದಾರೆ” ಎಂದು ತಿಳಿಸಿದರು.
ನಾಳೆ ಮೈಸೂರಿನಲ್ಲಿ ಸಾಧನಾ ಸಮಾವೇಶ ನಡೆಯುತ್ತಿದ್ದು, “ಅದು ನಮ್ಮ ಸರ್ಕಾರದ ಕಾರ್ಯಕ್ರಮ, ನಾನು ಹೋಗುತ್ತೇನೆ” ಎಂದು ತಿಳಿಸಿದರು.
ಸಣ್ಣ ವ್ಯಾಪಾರಿಗಳಿಗೆ ಜಿಎಸ್ ಟಿ ನೋಟೀಸ್ ನೀಡಿರುವ ಬಗ್ಗೆ ಕೇಳಿದಾಗ, “ನಾನು ಈ ವಿಚಾರದ ಬಗ್ಗೆ ಅಧ್ಯಯನ ಮಾಡುತ್ತಿದ್ದು, ನಂತರ ಇದಕ್ಕೆ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.