ದೊಡ್ಡಬಳ್ಳಾಪುರ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯ ಭಗತ್‌ಸಿಂಗ್ ಕ್ರೀಡಾಂಗಣದ ಮುಂಭಾಗದಲ್ಲಿದ್ದ ಮೇ ಪ್ಲವರ್ ಮರವೊಂದು ಉರುಳಿ ಬಿದ್ದ ಪರಿಣಾಮ ಎರಡು ಆಟೋಗಳು ಜಖಂ ಗೊಂಡಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜು ಆಟೋ ನಿಲ್ದಾಣದಲ್ಲಿ ಮಧ್ಯಾಹ್ನ ೩.೩೦ರ ವೇಳೆಯಲ್ಲಿ ಆಟೋ ಚಾಲಕರು ಎಂದಿನಂತೆ ಆಟೋ ನಿಲ್ಲಿಸಿ, ಹೊರಗಡೆ ಕುಳಿತಿದ್ದರು. ನೋಡು ನೋಡುತ್ತಿದ್ದಂತೆಯೇ ದೊಡ್ಡ ಮೇಪ್ಲವರ್ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ.
ಅಸ್ಲಾಂ ಪಾಷಾ ಅವರಿಗೆ ಸೇರಿದ ಆಟೋ ಪೂರ್ಣ ಜಖಂ ಆಗಿದ್ದು, ಚಾಂದ್ ಅವರ ಆಟೋಗೆ ಸ್ಪಲ್ಪ ಮಟ್ಟಿನ ಹಾನಿಯಾಗಿದೆ ತಕ್ಷಣವೇ ಆಟೋ ಚಾಲಕರು ಸ್ಥಳದಿಂದ ಓಡಿ ಹೋಗಿದ್ದರಿಂದ ಆಗಬಹುದಾದ ಪ್ರಾಣ ಹಾನಿ ತಪ್ಪಿದೆ. ಮಳೆ ಅಥವಾ ಗಾಳಿ ಬೀಸದಿದ್ದರೂ ಬೃಹತ್ ಮರವೊಂದು ಉರುಳಿ ಬಿದ್ದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಮರದ ಬುಡ ಗೆದ್ದಲು ತಿಂದಿದ್ದು, ಮರದಲ್ಲಿ ಯಾವುದೇ ಸತ್ವವಿಲ್ಲದೇ ಉರುಳಿ ಬಿದ್ದಿದೆ.
ನಗರದಲ್ಲಿ ಈ ರೀತಿಯ ಒಣಗಿದ ಅಥವಾ ಸತ್ವ ಹೀನ ಮರಗಳನ್ನು ಗುರುತಿಸಿ ಸ್ಥಳೀಯ ಆಡಳಿತ ಹಾಗೂ ಅರಣ್ಯ ಇಲಾಖೆ ತೆರವು ಮಾಡುವಂತೆ ಮನವಿ ಮಾಡಿದ್ದರೂ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.