ದೊಡ್ಡಬಳ್ಳಾಪುರ :ಕೋವಿಡ್ 19 ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಕಾರಣ ಸಮಸ್ಯೆಗೆ ಒಳಗಾಗಿರುವ ಮಡಿವಾಳ ಜನಾಂಗದವರಿಗೆ ರಾಜ್ಯ ಮಡಿವಾಳ ಸಂಘ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಹಾರಧಾನ್ಯದ ಕಿಟ್ ಗಳನ್ನು ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ ಭಾಗವಹಿಸಿ ಮಾತನಾಡಿ,ಮಡಿವಾಳ ಸಮಾಜವು ಬಹಳ ಹಿಂದುಳಿದ ಸಮಾಜವಾಗಿದೆ.ಹಾಗೂ ಕರೊನಾ ವಾರಿಯರ್ಸ್ ರೀತಿ ಬಟ್ಟೆ ತೊಳೆಯುವ ಕಾರ್ಯನಿರ್ವಹಿಸುತ್ತಿದ್ದು,ಮಡಿವಾಳರು ತಮ್ಮ ವೃತ್ತಿಯನ್ನು ನಿರ್ವಹಿಸುವಾಗ ಬಹಳ ಮುನ್ನೆಚ್ಚರಿಕಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಕರೊನಾ ವೈರಸ್ ತಡೆಯಲು ಕಡ್ಡಾಯವಾಗಿ ಎಲ್ಲರೂ ಮಾಸ್ಕ ಧರಿಸಿ ಕೈ ಚೀಲಗಳನ್ನು ಬಳಸಿ ಬಟ್ಟೆ ಶುಚಿ ಮಾಡುವ ಕಾರ್ಯವನ್ನು ನಿರ್ವಹಿಸಬೇಕು ಎಂದರು.
ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಮಾತನಾಡಿ,ನಮ್ಮ ಸಮಾಜವು ಆಸ್ಪತ್ರೆ ಹೋಟೆಲ್ ಸೇರಿದಂತೆ ಎಲ್ಲಾ ಸಮಾಜದವರ ಬಟ್ಟೆಗಳನ್ನು ಶುಚಿತ್ವ ಮಾಡುವ ಕರ್ತವ್ಯ ನಿರ್ವಹಿಸುತ್ತಾರೆ.ಆದರೆ ಸರ್ಕಾರ ನಮ್ಮ ವೃತ್ತಿ ಬಾಂಧವರಿಗೆ ಇದುವರೆಗೂ ಯಾವುದೇ ತರಹದ ಸುರಕ್ಷತಾ ಕಿಟ್ ಗಳನ್ನು ವಿತರಿಸಿಲ್ಲ. ದೋಬಿ ಘಾಟ್ ಗಳಲ್ಲಿ ದಿನನಿತ್ಯ ಸಾವಿರಾರು ಜನ ಮಡಿವಾಳ ಸಮಾಜದವರು ತಮ್ಮ ಕಾಯಕವನ್ನು ನಂಬಿ ಬದುಕುತ್ತಿದ್ದಾರೆ ಆದ್ದರಿಂದ ಸರ್ಕಾರ ಅವರನ್ನು ಗುರುತಿಸಿ ಸುರಕ್ಷತಾ ಕಿಟ್ ಗಳನ್ನು ವಿತರಿಸಬೇಕು ಸರ್ಕಾರ ಸಹಾಯಧನ ಘೋಷಿಸಿರುವುದು ಸ್ವಾಗತಾರ್ಹ.ಆದರೆ,ಕೇವಲ 60 ಸಾವಿರ ಮಡಿವಾಳರಿಗೆ ಮಾತ್ರ ಸಹಾಯಧನ ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯಧನ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ಎಚ್.ಆರ್.ಮುನಿಶಾಮಯ್ಯ ಮಾತನಾಡಿ,ನಮ್ಮ ಸಮಾಜ ರಾಜಕೀಯವಾಗಿ ಆರ್ಥಿಕವಾಗಿ ಬಹಳ ಹಿಂದುಳಿದ ಸಮಾಜವಾಗಿದೆ.ಆದ್ದರಿಂದ ಪ್ರತಿಯೊಬ್ಬರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶ್ರಮಿಸಬೇಕು.ಮಕ್ಕಳು ವಿದ್ಯಾವಂತರಾದರೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನಗಳು ಸಮಾಜದಲ್ಲಿ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿಆರ್ ಯಲ್ಲಪ್ಪ,ಉಪಾಧ್ಯಕ್ಷರಾದ ಆರ್.ವಿ.ರಾಜಣ್ಣ,ಖಜಾಂಚಿ ಆರ್.ಮಂಜುನಾಥ್,ತಾಲೂಕು ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ದೊಡ್ಡರಂಗಯ್ಯ,ಉಪಾಧ್ಯಕ್ಷ ವೆಂಕಟಾಚಲ,ಕಾರ್ಯದರ್ಶಿ ಡಿ.ಎಲ್.ಗಂಗಾಧರ್,ಖಜಾಂಚಿ ನರಸಿಂಹಮೂರ್ತಿ, ನಿರ್ದೇಶಕರುಗಳಾದ ಮುತ್ತರಾಜು,ಎಂ. ಚಿಕ್ಕಪಾಪಯ್ಯ,ಗಂಗರಾಜು,ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.