ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಜು.30 ಮತ್ತು 31 ರಂದು ನಡೆಯುವ ಸಾಮಾನ್ಯ ಪರೀಕ್ಷೆಗೆ ದೊಡ್ಡಬಳ್ಳಾಪುರ,ನೆಲಮಂಗಲ ಮತ್ತು ಹೊಸಕೋಟೆ ಪರೀಕ್ಷಾ ಕೇಂದ್ರಗಳಾಗಿವೆ.ಇದುವರೆವಿಗೂ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಮಾತ್ರ ಸಿಇಟಿ ಪರೀಕ್ಷಾ ಕೇಂದ್ರವಿತ್ತು. ಈ ವರ್ಷ ಕೋವಿಡ್ -19 ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಾರಂಭಿಸುತ್ತಿದೆ.
ಇದರಿಂದಾಗಿ ಜಿಲ್ಲೆಯ ನೆಲಮಂಗಲ ಮತ್ತು ಹೊಸಕೋಟೆಗೆ ಹೆಚ್ಚುವರಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ದೊರಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೋವಿಡ್ 19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮೀಪ ಸ್ಥಳಗಳಲ್ಲೆ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡುತ್ತಿದೆ. ಇದಕ್ಕಾಗಿ ಹೊಸದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 75 ಹೆಚ್ಚುವರಿ ಪರೀಕ್ಷಾ ಸ್ಥಳಗಳನ್ನು ಹೊಸದಾಗಿ ಪರೀಕ್ಷಾ ಕೇಂದ್ರಗಳಾಗಿ ನಿಗದಿಪಡಿಸಿದೆ. ಹೊಸ ಪರೀಕ್ಷಾ ಕೇಂದ್ರಗಳಲ್ಲಿ ನೆಲಮಂಗಲ ತಾಲೂಕಿನ ಬಸವೇಶ್ವರ ಬಾಲಕಿಯ ಪದವಿ ಪೂರ್ವ ಕಾಲೇಜು ಮತ್ತು ಹೊಸಕೋಟೆ ತಾಲೂಕಿನ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಸರಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜು ಸೇರಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಲ್ಲಿ ಜು.30 ಮತ್ತು 31 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಒಟ್ಟು 2088 ವಿದ್ಯಾರ್ಥಿಗಳು ಬರೆಯಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರೆ ಉಪನಿರ್ದೇಶಕ ಎಂ.ರಾಮಕೃಷ್ಣ ತಿಳಿಸಿದ್ದಾರೆ. ಅವರು ಸಾಮಾನ್ಯ ಪ್ರವೇಶ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೂರು ಪರೀಕ್ಷಾ ಕೇಂದ್ರಗಳಲ್ಲಿ 1152 ವಿದ್ಯಾರ್ಥಿಗಳು, ಹೊಸಕೋಟೆ ತಾಲೂಕಿನ ಎರಡು ಪರೀಕ್ಷಾ ಕೇಂದ್ರಗಳಲ್ಲಿ 528 ವಿದ್ಯಾರ್ಥಿಗಳು ಮತ್ತು ನೆಲಮಂಗಲ ತಾಲೂಕಿನ ಒಂದು ಪರೀಕ್ಷಾ ಕೇಂದ್ರದಲ್ಲಿ 408 ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಬರೆಯಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಪ್ರತಿ ಸಿಇಟಿ ಪರೀಕ್ಷಾ ಕೇಂದ್ರದಲ್ಲೂ ವಿದ್ಯಾರ್ಥಿಗಳಿಗೆ ಶುಚ್ಫಿತ್ವ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿದೆ. ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಪರೀಕ್ಷಾ ಕೇಂದ್ರ ಮುಂಭಾಗದಲ್ಲಿ ಕರ್ನಾಟಕ ಪರೀಕ್ಷಾ ಪ್ರಧಿಕಾರ ಪ್ರಕಟಿಸುತ್ತಿದೆ. ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್ ವ್ಯವಸ್ಥೆ ಇರುತ್ತದೆ.ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸಿ ಬರುವಂತೆ ಸೂಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವೈದ್ಯಕೀಯ ನೆರವಿನ ವ್ಯವಸ್ಥೆ ಇದೆ. ಆರೋಗ್ಯ ಸಹಾಯಕರು ಪರೀಕ್ಷೆ ಪ್ರಾರಂಭದಿಂದ ಕೊನೆಯ ತನಕ ಅಗತ್ಯ ಔಷಧ ಮತ್ತು ಪ್ರಥಮ ಚಿಕಿತ್ಸೆ ಸಲಕರಣೆಯೊಂದಿಗೆ ಕಾರ್‍ಯನಿರ್ವಹಿಸಲಿದ್ದಾರೆ ಎಂದರು.
ತಾಲೂಕು ಮಟ್ಟದ ಸಮಿತಿಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳಲ್ಲಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಿದ್ದಾರೆ.
ಉಪವಿಭಾಗಾಧಿಕಾರಿಗಳು ಅಧ್ಯಕ್ಷರಾಗಿರುವ ತಾಲೂಕು ಸಮಿತಿಯಲ್ಲಿ ಆಯಾ ತಾಲೂಕಿನ ತಹಶೀಲ್ದಾರ್,ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ,ವೃತ್ತ ನಿರೀಕ್ಷಕ ಆರಕ್ಷಕರು, ಸದಸ್ಯರುಗಳಾಗಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸದಸ್ಯ ಕಾರ್ಯದರ್ಶಿ ಕಾರ್ಯನಿರ್ವಹಿಸುತ್ತಿದ್ದಾರೆ.ಮೂರು ತಾಲೂಕುಗಳ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು,ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರಾಗಿರುತ್ತಾರೆ.ಅಯಾ ತಾಲೂಕಿನ ತಹಶೀಲ್ದಾರ್,ಕ್ಷೇತ್ರಶಿಕ್ಷಣಾಧಿಕಾರಿ ಮತ್ತು ಒಬ್ಬರು ಪ್ರಾಂಶುಪಾಲರು ತ್ರಿಸದಸ್ಯ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗ್ರಾಮಾಂತರ ಪ್ರದೇಶದ ಅನುಕೂಲ
ದೊಡ್ಡಬಳ್ಳಾಪುರ, ನೆಲಮಂಲ ಮತ್ತು ಹೊಸಕೋಟೆ ತಾಲೂಕಿನ ಸಿಇಟಿ ಪರೀಕ್ಷೆ ನಡೆಯುತ್ತಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಕೋವಿಡ್ 19 ಪರಿಸ್ಥಿತಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳು ಬೆಂಗಳೂರಿಗೆ ಹೋಗಿ ಸಿಇಟಿ ಪರೀಕ್ಷೆ ಬರೆಯಲು ಕಷ್ಟವಾಗುತ್ತಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿನ ಸಿಇಟಿ ಕೇಂದ್ರಗಳಿಗೆ ಹೋಗಲು ತುಂಬಾ ತೊಂದರೆಯಾಗುತ್ತಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದೊಡ್ಡಬಳ್ಳಾಪುರ ಪರೀಕ್ಷಾ ಕೇಂದ್ರದ ಜೊತೆಗೆ ನೆಲಮಂಗಲ ಮತ್ತು ಹೊಸಕೋಟೆ ತಾಲೂಕಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ಈ ವರ್ಷದಿಂದ ಆರಂಭಿಸುತ್ತಿರುವುದು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಕಾರಿ ಆಗಿದೆ.
ದೊಡ್ಡಬಳ್ಳಾಪುರ :
ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು : 648
ಶ್ರೀದೇವರಾಜ ಅರಸು ಪದವಿ ಪೂರ್ವ ಕಾಲೇಜು : 288
ಸರಕಾರಿ ಪದವಿ ಪೂರ್ವ ಕಾಲೇಜು : 216
ಹೊಸಕೋಟೆ
ಸರಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜು : 264
ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು : 264
ನೆಲಮಂಗಲ
ಬಸವೇಶ್ವರ ಬಾಲಕಿಯ ಪದವಿ ಪೂರ್ವ ಕಾಲೇಜು : 408