ದೊಡ್ಡಬಳ್ಳಾಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬೂದಿಹಾಳ ಗ್ರಾಮದ ಅನಿಲ್ ಇಂಗಳಗಿ ಎಂಬ ದಲಿತ ಯುವಕನ ಕೊಲೆ ಘಟನೆ ಖಂಡಿಸಿ ಪ್ರಜಾ ವಿಮೋಚನ ಚಳವಳಿ ಹಾಗೂ ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿವಿಸಿ ರಾಜ್ಯ ಅಧ್ಯಕ್ಷ ಮುನಿ ಆಂಜಿನಪ್ಪ, ಪ್ರಗತಿಪರ ಒಕ್ಕೂಟದ ಮುಖಂಡರಾದ ಆರ್.ಚಂದ್ರತೇಜಸ್ವಿ,ಡಿ.ಪಿ.ಆಂಜನೇಯ, ರಾಜುಸಣ್ಣಕ್ಕಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರು ಸಮಾನರು ಎನ್ನುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಕೆಲ ಪಾಳೇಗಾರಿಕೆ ಮನಸ್ಸಿನ ಜನ ಇಂದಿಗೂ ಸಾರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಕಾನೂನಿನ ಮುಂದೆ ಎಲ್ಲರು ಸಮಾನರು.ಪುಂಡಾಟಿಕೆ ವರ್ತನೆಯನ್ನು ತೋರಿ ಅನಿಲ್ ಕೊಲೆಗೆ ಕಾರಣರಾಗಿರ ಆರೋಪಿಗಳ ವಿರುದ್ದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿರುವ ಈ ಸಂದರ್ಭದಲ್ಲೂ ಸಹ ಸಮಾನಾಂತರವಾಗಿ ಕುಳಿತುಕೊಳ್ಳುವ ಹಕ್ಕು ಇಲ್ಲದಂತೆ ದಲಿತ ಸಮುದಾಯ ಬದುಕುವ ಸ್ಥಿತಿ ಶೋಚನೀಯ. ಈ ಪ್ರಕರಣ ಇಡೀ ಮನುಕುಲವೇ ತಲೆತಗ್ಗಿಸುವಂತಹದ್ದಾಗಿದೆ. ಅನಿಲ್ ಕೊಲೆಯಿಂದಾಗಿ ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವ ಎನ್ನುವ ಪ್ರಶ್ನೆ ಕೇಳಿಕೊಳ್ಳುವಂತಾಗಿದೆ. ಅನಿಲ್ ಪ್ರಕರಣದಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಜಾತಿ ವ್ಯವಸ್ಥೆಯನ್ನು ಪೋಷಿಸಿದಂತೆ ಆಗಲಿದೆ. ದಲಿತರ ಮೇಲಿನ ದೌರ್ಜನ್ಯಗಳು ಮತ್ತಷ್ಟು ಹೆಚ್ಚಾಗುವ ಅಪಾಯಗಳಿವೆ. ಅನಿಲ್ ಕೊಲೆ ಪ್ರಕರಣದಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಶಾಮೀಲಾಗಿರುವ ಎಲ್ಲರ ವಿರುದ್ದವು ದೌರ್ಜನ್ಯ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ರಾಜ್ಯದಲ್ಲಿ ಮರುಕಳಿಸಂದಂತೆ ಎಚ್ಚರವಹಿಸಬೇಕಿದೆ. ಅನಿಲ್ ಇಂಗಳಗಿ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಪೊಲೀಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತುರ್ತಾಗಿ ತನಿಖೆಯನ್ನು ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪಿವಿಸಿ ತಾಲ್ಲೂಕು ಘಟಕದ ಅಧ್ಯಕ್ಷ ತಳಗವಾರ ಪುನೀತ್, ಜಿಲ್ಲಾ ಅಧ್ಯಕ್ಷ ಗೂಳ್ಯ ಹನುಮಣ್ಣ,ಉಪಾಧ್ಯಕ್ಷ ಕೊನಘಟ್ಟ ಬೈರಪ್ಪ,ಸಂಘಟನ ಕಾರ್ಯದರ್ಶಿ ಕಾಕೋಳು ಚನ್ನಮರಿಯಪ್ಪ, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ತಾಲ್ಲೂಕು ಸಂಘಟನ ಕಾರ್ಯದರ್ಶಿ ನೆಲ್ಲುಕುಂಟೆ ಮೂರ್ತಿ,ಉಪಾಧ್ಯಕ್ಷ ರಾಜಶೇಖರ ವಡ್ಡನಹಳ್ಳಿ, ಮುಖಂಡರಾದ ಮಂಜುನಾಥ್, ಮುನಿಕೃಷ್ಣ ಇದ್ದರು.