ದೊಡ್ಡಬಳ್ಳಾಪುರ: ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ಎನ್.ಎ.ಹ್ಯಾರಿಸ್ ಅವರು ವರನಟ ಡಾ.ರಾಜ್‌ಕುಮಾರ್ ಪ್ರತಿಮೆ ಸ್ಥಾಪನೆ ಕುರಿತು ನೀಡಿರುವ ವಿವಾದಿತ ಹೇಳಿಕೆಯನ್ನು ಖಂಡಿಸಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ರಾಜ್ ಕುಮಾರ್ ಸಂಘದ ತಾಲ್ಲೂಕು ಅಧ್ಯಕ್ಷ ಸು.ನರಸಿಂಹಮೂರ್ತಿ, ನಾಡಿನ ಕೆಲ ನೀಚ ರಾಜಕಾರಣಿಗಳಿಗೆ ಕನ್ನಡದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲವಾಗಿದೆ. ಶಾಸಕ ಹ್ಯಾರಿಸ್ ಮೇರುನಟ ಡಾ.ರಾಜ್ ಕುಮಾರ್ ಅವರ ಸಾಧನೆ ಬಗ್ಗೆ ತಿಳಿಯದೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ರಾಜ್ ಕುಮಾರ್ ರವರ ಸಾಧನೆ ಮತ್ತು ಕನ್ನಡ ಪರ ಹೋರಾಟಗಳು ಕನ್ನಡ ಭಾಷೆಗೆ ಅವರು ಕೊಟ್ಟ ಕೊಡುಗೆ ಅಪಾರ. ಇಡೀ ವಿಶ್ವಕ್ಕೆ ಕನ್ನಡದ ನಾಡು ನುಡಿಯ ಬಗ್ಗೆ ತಿಳಿಸಿಕೊಟ್ಟ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಹ್ಯಾರಿಸ್ ಗೆ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಸುರೇಶ್ ರಾವ್, ಖಜಾಂಚಿ ತಿಮ್ಮರಾಜು, ಸಂಘಟನಾ ಕಾರ್ಯದರ್ಶಿ ವಿ.ಪರಮೇಶ್ ಮಾತನಾಡಿ, ಶಾಸಕ ಹ್ಯಾರಿಸ್ ಕೇರಳದಲ್ಲಿ ಹುಟ್ಟಿ ಕರ್ನಾಟಕ್ಕೆ ಬಂದು ಕನ್ನಡದ ಮೇರು ನಟನ ಬಗ್ಗೆ ಅವಹೇಳನವಾಗಿ ಮಾತನಾಡುತ್ತಿದ್ದಾರೆ ಎಂದರೆ ನಮ್ಮ ಸರ್ಕಾರ ಮತ್ತು ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದರ್ಥ. ಈ ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.
ಇದೇ ವೇಳೆ ಅಗತ್ಯ ವಸ್ತುಗಳಾದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ವಿರುದ್ದ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಜನ ಸಾಮಾನ್ಯರಿಗೆ ಒಳಿತು ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ, ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಬಡ ಹಾಗೂ ಮದ್ಯಮ ವರ್ಗದವರ ಬದುಕಿನ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕೂಡಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ನಗರ ಉಪಾಧ್ಯಕ್ಷ ಕೆ.ಕೆ.ವೆಂಕಟೇಶ್, ಉಪಾಧ್ಯಕ್ಷ ವಿಠಲ್ ರಾವ್, ಸಂಚಾಲಕ ಆನಂದ್, ಸಂಘಟನಾ ಸಂಚಾಲಕ ಕನ್ನಡ ಸೋಮು ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…