ದೊಡ್ಡಬಳ್ಳಾಪುರ: ವಿಧಾನ ಪರಿಷತ್ ಸಭಾಪತಿಗಳ ರಾಜೀನಾಮೆ, ಆ ನಂತರದ ಬೆಳವಣಿಗಳಿಂದ ಜನರಲ್ಲಿ ವಿಧಾನ ಪರಿಷತ್ ಹಾಗೂ ಸಭಾಪತಿ ಸ್ಥಾನದ ಬಗ್ಗೆ ಇದ್ದ ನಂಬಿಕೆಗೆ ಧಕ್ಕೆಯಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿ ತೋರಿಸುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಹಟ್ಟಿ ಹೇಳಿದರು.
ಅವರು ಬುಧವಾರ ಸಂಜೆ ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, 114 ವರ್ಷಗಳ ಇತಿಹಾಸವನ್ನು ಹೊಂದಿರುವ ರಾಜ್ಯದ ವಿಧಾನ ಪರಿಷತ್ತಿನ ಗೌರವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಪರಿಷತ್ನ ಎಲ್ಲಾ 75 ಜನ ಸದಸ್ಯರೊಂದಿಗು ಮಾತನಾಡಿದ್ದೇನೆ. ಸದನವನ್ನು ಉತ್ತಮ ರೀತಿಯಲ್ಲಿ ನಡೆಯುವಂತೆ ಮಾಡಲಾಗುವುದು. ಕಲಾಪ ನಡೆಯುವ ಸಂದರ್ಭದಲ್ಲಿ ಸದಸ್ಯರು ಮೊಬೈಲ್ಗಳನ್ನು ಒಳಗೆ ತರದಂತೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಸದನದ ಒಳಗೆ ಬರುವ ಮುನ್ನ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಇಟ್ಟು ಕೊಳ್ಳಲು ಪ್ರತ್ಯೇಕ ಲಾಕರ್ಗಳನ್ನು ಮಾಡಿಸಲಾಗುತ್ತಿದೆ. ಮಂಗಳವಾರ, ಬುಧವಾರ ಹಾಗೂ ಗುರುವಾರ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.
ನಾನು ಯಾವ ಮೂಲ ಅಥವಾ ಪಕ್ಷದಿಂದ ಬೆಳೆದು ಬಂದಿದ್ದೇನೆ ಎನ್ನುವುದಕ್ಕಿಂತಲು ನಾನು ಬಲಪಂಥೀಯ, ಎಡಪಂಥೀಯ ಎರಡೂ ಅಲ್ಲದೆ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಸರ್ಕಾರದ ತಪ್ಪುಗಳಿದ್ದರು ಸಹ ಯಾವುದೇ ಅಂಜಿಕೆ ಇಲ್ಲದೆ ತಿಳಿ ಹೇಳುವೆ. ಪಕ್ಷಪಾತ ಇಲ್ಲದೆ ಕೆಲಸ ಮಾಡುವುದನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ನೋಡಬಹುದಾಗಿದೆ. ನನಗೆ ದೇವರು ಬುದ್ದಿ ನೀಡಿದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದರು.
‘ಜೆಡಿಎಸ್ ಸಂಘಟನೆ ಹಿಂದುಳಿದಿರುವ ಈ ಸಂದರ್ಭದಲ್ಲಿ ತಾವು ಸಭಾಪತಿ ಸ್ಥಾನದಲ್ಲಿ ಕುಳಿತರೆ ಪಕ್ಷ ಸಂಘಟನೆಗೆ ಹಿನ್ನಡೆಯಾಗುವುದಿಲ್ಲವೇ’ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಹೊರಹಟ್ಟಿ, ಸಂವಿಧಾನಾತ್ಮಕವಾಗಿ ರಾಜ್ಯಪಾಲರ ನಂತರದ ಹುದ್ದೆ ವಿಧಾನ ಪರಿಷತ್ ಸಭಾಪತಿಗಳದ್ದು. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಾಗಿದೆ. ನ್ಯಾಯಾಧೀಶರ ಮಗ, ಮಗಳು ತಪ್ಪು ಮಾಡಿದರು ಪ್ರೀತಿ ನೋಡುವಂತಿಲ್ಲ. ಆ ಸ್ಥಾನದ ಗೌರಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಪಕ್ಷದ ಮೇಲಿನ ಪ್ರೀತಿ ಇದ್ದರು ಸಹ ಅದನ್ನು ನುಂಗಿಕೊಂಡು ಸಭಾಪತಿಗಳ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕಿದೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…