ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರದ ಹೆಸರಿನ ವಿವಾದ ಎದ್ದಿರುವ ಬೆನ್ನಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ನವ ಬೆಂಗಳೂರು ಎಂದು ಘೋಷಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಆರಂಭವಾಗಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ಜಿ.ಎನ್.ಪ್ರದೀಪ್, ಬೆಂಗಳೂರು ನಗರದ ಅಭಿವೃದ್ಧಿ ಹೆಸರಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಬೀಳುತ್ತಿದೆ. ಒಂದು ಕಡೆಯಿಂದ ಗಿಡ ನೆಟ್ಟರೆ ಅದೇ ಗಿಡವನ್ನು ಕಿತ್ತು ರಸ್ತೆ ಹಾಕುತ್ತಾರೆ. ಮತ್ತೆ ಅದೇ ರಸ್ತೆಯನ್ನು ಕಿತ್ತು ಜಲಮಂಡಲಿ ಪೈಪ್‌ಗಳನ್ನು ಅಳವಡಿಸುತ್ತಾರೆ. ಈ ಮೂಲಕ ಬೆಂಗಳೂರು ಅಭಿವೃದ್ಧಿಯಲ್ಲಿ ಗೊಂದಲ ನಿರ್ಮಾಣವಾಗುವ ಮೂಲಕ ಅಭಿವೃದ್ಧಿ ಕುಂಟಿತವಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕೈಗಾರಿಕಾ ಪ್ರದೇಶಗಳು ನಿರ್ಮಾಣವಾಗುತ್ತಿವೆ. ಇದರೊಂದಿಗೆ ದೊಡ್ಡಬಳ್ಳಾಪುರದ ಲಿಂಗನಹಳ್ಳಿ ಸುತ್ತು ಮತ್ತು 12 ಸಾವಿರ ಎಕರೆಯಲ್ಲಿ ಐಟಿ ಪಾರ್ಕ್ ಪ್ರಸ್ತಾವನೆ ಸೇರಿದಂತೆ ಹುಲಿಕುಂಟೆ ಸಮೀಪ ಕೈಗಾರಿಕಾ ಪ್ರದೇಶ ನಿರ್ಮಾಣ ಪ್ರಗತಿ, ಹಾಗು ತಾಲೂಕಿನ ಸರಹದ್ದಿನಲ್ಲೆ ಇರುವ ಬೈರಗೊಂಡಲು ಬಫರ್ ಡ್ಯಾಂ ನಿರ್ಮಾಣ ಹೀಗೆ ಹತ್ತು ಹಲವು ರೀತಿಯಲ್ಲಿ ಜಿಲ್ಲೆ ಬೆಳೆಯುತ್ತಿದೆ. ಅಲ್ಲದೆ ಜಿಲ್ಲೆಯ ವಿವಿಧ ತಾಲೂಕುಗಳ ಮೂಕವೇ ಮುಖ್ಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾದು ಹೋಗುತ್ತಿವೆ. ಹೀಗಾಗಿ ಜಿಲ್ಲೆಯನ್ನು ನವ ಬೆಂಗಳೂರು ಎಂದು ಸರ್ಕಾರ ಘೋಷಣೆ ಮಾಡಿದರೆ ಬೆಂಗಳೂರು ನಗರದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
ಇದರೊಂದಿಗೆ ಬೆಂ.ಗ್ರಾ ಜಿಲ್ಲೆಯೂ ಪೂರಕ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನವ ಬೆಂಗಳೂರು ಎಂದು ಘೋಷಿಸಿದರೆ ಹೆಚ್ಚಿನ ಹೊರೆ ಇಲ್ಲದೆ ಈಗಾಗಲೆ ಅಭಿವೃದ್ಧಿ ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯೂ ಬೆಂಗಳೂರು ನಗರಕ್ಕೆ ಪರ್ಯಾಯ ನಗರ ಆಗುವುದರಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ತಿಳಿಸಿದರು.
ನಾಲ್ಕೂ ತಾಲೂಕುಗಳು ಒಂದೇ ವೇದಿಕೆಗೆ ಬರಲಿ: ನವ ಬೆಂಗಳೂರು ನಿರ್ಮಾಣದ ಹಂತದಲ್ಲಿ ನಾಲ್ಕೂ ತಾಲೂಕುಗಳ ರಾಜಕೀಯ ಸಾಮ್ಯತೆ ಅಗತ್ಯವಾಗಿದೆ. ಇದರೊಂದಿಗೆ ಎಲ್ಲಾ ಸಂಘಟನೆಗಳು, ಜನಪ್ರತಿನಿಧಿಗಳು ಒಂದೇ ವೇದಿಕೆಗೆ ಬಂದರೆ ನಮ್ಮ ನವ ಬೆಂಗಳೂರು ಕನಸು ಈಡೇರಲಿದೆ. ಈ ಕರಿತು ಸಭೆಯಲ್ಲಿ ರಾಜಕೀಯ ಮುಖಂಡರು, ಸಂಘಟನೆಗಳು ಕೈಜೊಡಿಬೇಕು ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಸತ್ಯಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ”ನಮ್ಮ ತಾಲ್ಲೂಕು ನಮ್ಮ ತಾಲ್ಲೂಕು ಅಂತ ಘರ್ಷಣೆ ಏರ್ಪಟ್ಟು ವೈಷಮ್ಯ ಸಾಧಿಸುವುದಕ್ಕಿಂತ ನಮ್ಮ ಜಿಲ್ಲೆಗೆ ಒಳ್ಳೆಯದಾಗಲಿ ಎಂದು ಒತ್ತಾಯಿಸುವ ಹೋರಾಟ ನಡೆಸುವುದು ಜಿಲ್ಲೆಯ ಭವಿಷ್ಯದ ಹಿತದೃಷ್ಟಿಯಿಂದ ಹೋರಾಟಗಾರ ಪ್ರದೀಪ್ ರವರ “ನವ ಬೆಂಗಳೂರು” ಪರಿಕಲ್ಪನೆ ಸರ್ವದೃಷ್ಟಿಯಿಂದಲೂ ಸಕಾರಾತ್ಮಕವಾಗಿದೆ. ಆದ್ದರಿಂದ ನಮ್ಮ ಜಿಲ್ಲೆಯ ಪರವಾಗಿ ನಾವು ನವ ಬೆಂಗಳೂರು ಪರಿಕಲ್ಪನೆಯು ಸಾಕಾರವಾಗಲು ಕಾಯಾ ವಾಚಾ ಮನಸಾ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.”
ಸಭೆಯಲ್ಲಿ ಪರಿಸರ ಅರವಿಂದ್, ಜೆಡಿಎಸ್ ಮುಖಂಡ ಎಂ.ಹರ್ಷ, ಗ್ರಾಪಂ ಸದಸ್ಯ ಆರ್.ಎಲ್.ಆರಾಧ್ಯ, ಕನ್ನಡ ಪಕ್ಷದ ಮಂಜುನಾಥ್, ಮುಖಂಡ ದೊಡ್ಡತುಮಕೂರು ಆನಂದ್, ರವಿ ನಾಯಕ್(ಚಿನ್ನಿ), ರಮೇಶ್, ಶಿವಪುರ ರಮೇಶ್ ಸೇರಿದಂತೆ ಇತರೆ ಮುಖಂಡರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…