ದೊಡ್ಡಬಳ್ಳಾಪುರ: ಕರೊನಾ ಸಂದರ್ಭದಿಂದ ಇಲ್ಲಿಯವರೆಗೂ ಖಾಸಗಿ ಶಾಲೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೆರವಿಗೆ ಬಾರದೆ, ಶಾಲೆಗಳ ಆರಂಭದ ಕುರಿತು ವಿಳಂಬ ಮಾಡುತ್ತಾ, ಶುಲ್ಕದ ಕುರಿತು ಗೊಂದಲ ಸೃಷ್ಟಿಸಿ ಶಾಲೆಗಳ ಆಡಳಿತ ಮಂಡಳಿ ವಿರುದ್ದ ಪೋಷಕರನ್ನು ಎತ್ತಿ ಕಟ್ಟುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದಿಂದ ಫೆ.23ರಂದು ಪ್ರತಿಭಟನೆ ನಡೆಸಲಾಗುವುದೆಂದು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಎ.ಸುಬ್ರಮಣ್ಯ, ಕಾರ್ಯದರ್ಶಿ ಎಸ್.ಆರ್.ರಮೇಶ್ ತಿಳಿಸಿದರು.
ನಗರದ ವಿದ್ಯಾನಿಕೇತನ ಶಾಲೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾತನಾಡಿದರು.
ಕೋವಿಡ್-19 ತಡೆಗಟ್ಟಲು ಘೋಷಿಸಲಾದ ಲಾಕ್‌ಡೌನ್ ಸಮಯದಿಂದ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗಳ ಜೀವನ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇತರೆ ಕ್ಷೇತ್ರಗಳಿಗೆ ನೆರವು ನೀಡಿದ ಸರ್ಕಾರ ಇತ್ತ ಗಮನ ಹರಿಸದೆ ಸಂಪೂರ್ಣವಾಗಿ ಕಡೆಗಣಿಸಿದೆ. ಶಾಲೆಗಳ ಆಡಳಿತ ಮಂಡಳಿಗಳು ಪೋಷಕರು ಶುಲ್ಕ ಕಟ್ಟದೆ ಇದ್ದರೂ ಕೈಲಾದ ನೆರವನ್ನು ನೀಡುತ್ತಿದ್ದಾರೆ, ಆದರೂ ಸರ್ಕಾರ ನೆರವಿಗೆ ಬರುತ್ತಿಲ್ಲ. ಕೋವಿಡ್ ಕಡಿಮೆಯಾಗಿ ಈ ವೇಳೆ ಸರ್ಕಾರ ಎಲ್ಲಾ ಕ್ಷೇತ್ರಗಳಿಗೆ ಆರಂಭಕ್ಕೆ ಅನುಮತಿ ನೀಡಿದೆ. ಇತರೆ ರಾಜ್ಯಗಳಲ್ಲಿ ಶಾಲೆಗಳ ಆರಂಭಿಸಲಾಗಿದೆ ಹಾಗೂ ನಮ್ಮ ರಾಜ್ಯದಲ್ಲಿ ಅಂಗನವಾಡಿಗಳನ್ನು ತೆರೆಯಲು ಸಿದ್ದತೆ ನಡೆಸುತ್ತಿದ್ದರು ಸಹ ಪೂರ್ಣ ಪ್ರಮಾಣದಲ್ಲಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡದೆ ವಿಳಂಬ ಮಾಡಿ ಮತ್ತೆ ಶಿಕ್ಷಕರ ಜೀವನವನ್ನು ಹಾಳುಮಾಡುತ್ತಿದೆ.
ಈಗಾಗಲೆ ಶೈಕ್ಷಣಿಕ ಜೀವನ ಏರು ಪೇರಾಗಿರುವ ವರದಿಗಳ ಜೊತೆಗೆ ಮಕ್ಕಳು ಬಾಲ ಕಾರ್ಮಿಕರಾಗುತ್ತಿರುವ ಆತಂಕಕಾರಿ ಘಟನೆಗಳು ಹಲವು ಕಡೆ ಕಂಡು ಬಂದಿದ್ದರೂ ಶಿಕ್ಷಣ ಸಚಿವರು ಮಾತ್ರ ಜವಬ್ದಾರಿಯಿಂದ ವರ್ತಿಸುತ್ತಿಲ್ಲ.
ಇದರ ಬೆನ್ನಲ್ಲೆ, ಗಾಯದ ಮೇಲೆ ಬರೆ ಎಳೆದಂತೆ ಸುಮಾರು ಮೂವತ್ತು ವರ್ಷಗಳ ಹಿಂದೆ ಅನುಮತಿ ಪಡೆದ ಶಾಲೆಗಳಿಗೆ ಈಗ ಹೊಸದಾಗಿ ಸುರಕ್ಷತಾ ಅನುಮತಿ ಪಡೆಯುವಂತೆ ಸೂಚಿಸಿರುವುದು ಸರ್ಕಾರದ ದ್ವಂದ್ವ ನಿಲುವನ್ನು ತೋರುತ್ತದೆ. ನೂತನ ಶಾಲೆಗಳಿಗೆ ಅನುಮತಿ ಕಡ್ಡಾಯ ಮಾಡಲಿ ಅದು ಬಿಟ್ಟು, ಈ ಮುಂಚೆ ಅನುಮತಿ ಪಡೆದ ಶಾಲೆಗಳಿಗೆ ಹೊಸ ಹೊಸ ಕಾನೂನು ಮಾಡುವುದು ಖಂಡನೀಯ.ಹಾಗೊಂದು ವೇಳೆ ಮಾಡುವುದಾದರೆ ಸರ್ಕಾರಿ ಶಾಲೆಗಳಿಗೂ ಮಾಡಲಿ. ಈಗಾಗಲೇ ಅನೇಕ ಸರ್ಕಾರಿ ಶಾಲೆಗಳು ಬೀಳುವ ಮಟ್ಟದಲ್ಲಿವೆ ಅದು ಬಿಟ್ಟು ಖಾಸಗಿ ಶಾಲೆಗಳ ಮೇಲೆ ಶಿಕ್ಷಣ ಸಚಿವರ ಮಲತಾಯಿ ಧೋರಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸರ್ಕಾರದ ಈ ಎಲ್ಲಾ ನಿಲುವುಗಳನ್ನು ವಿರೋಧಿಸಿ ಫೆ.23ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಅಂದು ತಾಲೂಕಿನ ಸುಮಾರು 54 ಅನುದಾನ ರಹಿತ ಶಾಲೆಗಳು ರಜೆ ಘೋಷಿಸಿ ಶಿಕ್ಷಕರು ಹಾಗೂ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಖಜಾಂಚಿ ಕೆ.ಜಿ.ಶ್ರೀನಿವಾಸ್ ಮೂರ್ತಿ, ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯ ವ್ಯವಸ್ಥಾಪಕ ಎಸ್.ರವಿಕುಮಾರ್ ಸೇರಿದಂತೆ ವಿವಿಧ ಖಾಸಗಿ ಶಾಲೆಗಳ ಮುಖ್ಯಸ್ಥರು, ಕಾರ್ಯದರ್ಶಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…