ದೊಡ್ಡಬಳ್ಳಾಪುರ: 6ನೇ ವೇತನ ಆಯೋಗದ ಕುರಿತು ಸರ್ಕಾರ ಹಾಗೂ ಸಾರಿಗೆ ಇಲಾಖೆ ನೌಕರರ ಹಗ್ಗಜಗ್ಗಾಟ ನಡುವೆ ಮುಷ್ಕರ ಯುಗಾದಿ ಹಬ್ಬವಾದ ಇಂದಿಗೆ ಏಳು ದಿನ ಕಳೆದಿದ್ದು, ಇಂದು ಸಹ ಮುಂದುವರೆದಿದೆ. ಇದರ ನಡುವೆಯು ದೊಡ್ಡಬಳ್ಳಾಪುರ ಡಿಪೋದಿಂದ ಹತ್ತು ಬಸ್ ರಸ್ತೆಗಿಳಿದು ಸಂಚಾರ ನಡೆಸಿವೆ.
ಮುಷ್ಕರದ ಕಾರಣ ದೊಡ್ಡಬಳ್ಳಾಪುರ ಡಿಪೋದಿಂದ ನಿರ್ವಹಣೆ ಮಾಡಲಾಗುತ್ತಿದ್ದ 92 ರೂಟ್ ಗಳ ಸಾರಿಗೆ ಬಸ್ ಸಂಚಾರ ಸ್ಥಗಿತವಾಗಿತ್ತು. ಇದರ ನಡುವೆಯೂ ಕೆಲ ದಿನಗಳಿಂದ ಸಂಚಾರ ಆರಂಭವಾಗುತ್ತಿದ್ದು, ಇಂದು ಹತ್ತು ಸಾರಿಗೆ ಬಸ್ಸುಗಳು ರಸ್ತೆಗೆ ಇಳಿದವು ಎಂದು ಡಿಪೋ ವ್ಯವಸ್ಥಾಪಕ ಆನಂದ್ ಹರಿತಲೇಖನಿಗೆ ತಿಳಿಸಿದ್ದಾರೆ.
ಯುಗಾದಿ ಹಬ್ಬದ ಕಾರಣ ಇಂದು ಮುಂಜಾನೆಯಿಂದ ಹೆಚ್ಚಿನ ಪ್ರಯಾಣಿಕರು ಊರುಗಳಿಗೆ ತೆರಳಲು ಖಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ. ಅಲ್ಲದೆ ಆಟೋ, ಮಿನಿ ಬಸ್, ಟಿಟಿ, ಕಾರುಗಳ ಸಂಚಾರ ತೀವ್ರಗತಿಯಲ್ಲಿ ಓಡಾಟ ಮುಂದುವರೆದಿದೆ.
ಡಿಪೋ ಅಧಿಕಾರಿಗಳು ಸಿಬ್ಬಂದಿಗಳ ಮನವೊಲಿಸಿ ಪೊಲೀಸ್ ಭದ್ರತೆಯಲ್ಲಿ ಹತ್ತು ಸಾರಿಗೆ ಬಸ್ ಸಂಚಾರ ಆರಂಭಿಸಿದೆ. ದೊಡ್ಡಬಳ್ಳಾಪುರ – ದಾಬಸ್ ಪೇಟೆ 3, ದೊಡ್ಡಬಳ್ಳಾಪುರ – ದೇವನಹಳ್ಳಿ 2, ದೊಡ್ಡಬಳ್ಳಾಪುರ – ನೆಲಮಂಗಲ 2, ದೊಡ್ಡಬಳ್ಳಾಪುರ – ಚಿಕ್ಕಬಳ್ಳಾಪುರ 1 ಹಾಗೂ ಗೌರಿಬಿದನೂರಿಗೆ ಒಂದು ಬಸ್ ಸಂಚರಿಸಿದೆ.
ಸೋಮವಾರ ಸಾರಿಗೆ ನೌಕರರ ಕುಟುಂಬ ಸದಸ್ಯರ ಪ್ರತಿಭಟನೆ ವೇಳೆ ಕೆಲವೆಡೆ ಅಹಿತಕರ ಘಟನೆಗಳು ನಡೆದ ಹಿನ್ನಲೆಯಲ್ಲಿ, ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಕೆ.ವೆಂಕಟೇಶ್ ಡಿಪೋಗೆ ಭೇಟಿ ನೀಡಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಎನ್ನಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….