ದೊಡ್ಡಬಳ್ಳಾಪುರ: ಯುಗಾದಿ ಸಂಭ್ರಮದಲ್ಲಿರುವ ಜನತೆಗೆ ಆಗಸದಲ್ಲಿ ವಿಸ್ಮಯಕಾರಿ ವಿದ್ಯಮಾನವೊಂದು ಕಂಡುಬರುತ್ತಿದೆ.
ವೃತ್ತದ ಆಕೃತಿಯೊಂದು ಸೂರ್ಯನ ಸುತ್ತಲೂ ಆವರಿಸಿ ಜನರನ್ನು ಚಕಿತರನ್ನಾಗಿಸಿತು. ಈ ಅಪರೂಪದ ವಿದ್ಯಮಾನವನ್ನು ನೋಡಿದ ಜನರು ಪುಳಕಿತ ಭಾವ ಅನುಭವಿಸುತ್ತಿದ್ದಾರೆ.
ಸುಮಾರು 11 ಗಂಟೆ ಸುಮಾರಿಗೆ ಆರಂಭವಾದ ಈ ವಿದ್ಯಮಾನ ಸುಮಾರು 1 ಕಾಲು ಗಂಟೆಗೂ ಹೆಚ್ಚು ಕಾಲ ಗೋಚರಿಸಿತು. ಈ ಘಟನೆಯನ್ನು ಹಲವರು ಮೋಬೈಲ್ ಕ್ಯಾಮೆರಾದಲ್ಲೂ ಸೆರೆ ಹಿಡಿದಿದ್ದಾರೆ. ವಾಟ್ಸ್ಯಾಪ್ ಗ್ರೂಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರಗಳು ವೈರಲ್ ಆಗುತ್ತಿವೆ.
ಈ ವಿದ್ಯಮಾನಕ್ಕೆ ಕಾರಣವೇನು..?: ಸೂರ್ಯನ ಸುತ್ತಲೂ ಆವರಿಸಿರುವ ಮೋಡದಲ್ಲಿ ಹುದುಗಿರುವ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಹರಿದ ಪರಿಣಾಮ ಆಕರ್ಷಕ ವೃತ್ತ ಗೋಚರಿಸಿದೆ. ಕಾಮನಬಿಲ್ಲು ಸೃಷ್ಟಿಯಾದಂತೆ ನಡೆದ ವಿದ್ಯಮಾನ ಇದಾಗಿದ್ದು ಬಣ್ಣಗಳಲ್ಲಿ ಮಾತ್ರ ವ್ಯತ್ಯಾಸ ಕಂಡುಬಂದಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚು ಇರುವ ಮತ್ತು ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ.
ಮೋಡಗಳಲ್ಲಿರುವ ಮಂಜುಗಡ್ಡೆ ಹರಳುಗಳು ಸೂರ್ಯನಿಗೆ 22 ಡಿಗ್ರಿ ಅಥವಾ ಹೆಚ್ಚಿನ ಕೋನದಲ್ಲಿ ವಕ್ರೀಭವನಕ್ಕೀಡಾಗುತ್ತವೆ. ಸೂರ್ಯನ ಸುತ್ತ ವೃತ್ತಾಕಾರವಾಗಿ ಹರಡಿಕೊಳ್ಳುತ್ತವೆ. ಈ ಹರಳುಗಳ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ, ಕಿರಣವು ಕಾಮನಬಿಲ್ಲಿನ ಏಳು ಬಣ್ಣಗಳಾಗಿ ಚದುರಿ, ಆಕರ್ಷಕ ಕಾಮನಬಿಲ್ಲು ಗೋಚರಿಸುತ್ತದೆ. ಇದು ತೀರಾ ಅಪರೂಪವೇನಲ್ಲ ಎನ್ನುತ್ತಾರೆ ವಿಜ್ಞಾನಿಗಳು. ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಸಮಯದಲ್ಲಿ ಇದು ಗೋಚರಿಸುತ್ತದೆ ಎನ್ನಲಾಗುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..