ದೊಡ್ಡಬಳ್ಳಾಪುರ: ಕರೊನಾ ನಿಯಂತ್ರಣಕ್ಕೆ ಆರೂಢಿಯಲ್ಲಿ ಘೋಷಿಸಲಾಗಿದ್ದ 15 ದಿನಗಳ ಸಂಪೂರ್ಣ ಲಾಕ್‌ಡೌನ್ ಅನ್ನು ಜೂನ್.8 ರಿಂದ ತೆರವು ಮಾಡಲಾಗುತ್ತಿದ್ದು, ಸರ್ಕಾರದ ಲಾಕ್‌ಡೌನ್ ಮುಂದುವರೆಯಲಿದೆ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಮ್ಮಪ್ರಭು ತಿಳಿಸಿದರು.
ತಾಲೂಕಿನ ಆರೂಢಿ ಗ್ರಾಮಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್-19 ಸೋಂಕು ನಿಗ್ರಹಕ್ಕಾಗಿ ಘೋಷಿಸಲಾಗಿದ್ದ 15 ದಿನಗಳ 24 ಗಂಟೆಗಳ ಸಂಪೂರ್ಣ ಲಾಕ್‌ಡೌನ್ ನಿಂದಾಗಿ 58 ರಷ್ಟಿದ್ದ ಸೋಂಕಿತ ಪ್ರಕರಣಗಳು, ಪ್ರಸ್ತುತ 5ಕ್ಕೆ ಇಳಿದಿದ್ದು ಅಲ್ಪಮಟ್ಟದ ನೆಮ್ಮದಿ ತಂದಿದೆ. ಈ ನಿಟ್ಟಿನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆ ತಪ್ಪಿಸಲು ಲಾಕ್‍ಡೌನ್ ತೆರವು ಮಾಡಲಾಗುತ್ತಿದೆ. ಆದಾಗ್ಯೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕಿದೆ, ಸರ್ಕಾರದ ಮಾರ್ಗಸೂಚಿ ಅನ್ವಯ ಕರೊನಾ ನಿಯಂತ್ರಣಕ್ಕೆ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದರು.
ಈ ನಿಟ್ಟಿನಲ್ಲಿ ಗ್ರಾಮಪಂಚಾಯಿತಿವತಿಯಿಂದ ಸುಮಾರು 35 ಸಾವಿರ ಮೌಲ್ಯದ ಕರೊನಾ ತಡೆ ಪರಿಕರಗಳನ್ನು ಕೋವಿಡ್ ಸೊಂಕಿತ ಕುಟುಂಬಗಳಿಗೆ, ಕರೊನಾ ವಾರಿಯರ್ಸ್ ಗೆ ನೀಡಲಾಗುತ್ತಿದೆ ಎಂದು ಜಯಮ್ಮಪ್ರಭು ತಿಳಿಸಿದರು.
ಪಿಡಿಒ ಸೌಭಾಗ್ಯಮ್ಮ ಮಾತನಾಡಿ, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಪಡೆಯಲು ಮುಂದಾಗದವರಿಗೆ ಆಶಾ ಕಾರ್ಯಕರ್ತೆಯರು ಹೆಚ್ಚಿನ ಒತ್ತು ನೀಡಬೇಕಿದೆ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕಿದೆ. ಜೂ.22ರಂದು ಕೋವಿಡ್ ಲಸಿಕೆ ಅಭಿಯಾನವನ್ನು ಆರೂಢಿಯಲ್ಲಿ ಆಯೋಜಿಸಲಾಗಿದ್ದು, ಸರ್ಕಾರ ಗುರುತಿಸಿರುವ ಅರ್ಹರಿಗೆ ಪಂಚಾಯಿತಿ ವತಿಯಿಂದ ಅನುಮತಿ ಪತ್ರ ನೀಡಲಾಗುವುದು, ಆ ಮೂಲಕ ಕರೊನಾ ಸೋಂಕು ನಿಗ್ರಹಕ್ಕೆ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕಿದೆ ಎಂದರು.
ಆಶಾ ಕಾರ್ಯಕರ್ತೆ ವನಿತಾಲಕ್ಷ್ಮೀ ಮಾತನಾಡಿ, ಗ್ರಾಮಪಂಚಾಯಿತಿ ವ್ಯಾಪ್ತಿಯ ದೊಡ್ಡಗುಂಡಪ್ಪನಾಯಕನಹಳ್ಳಿ ವ್ಯಾಪ್ತಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರು, ಗ್ರಾಮಪಂಚಾಯಿತಿ ಸೂಕ್ತವಾಗಿ ಸ್ಪಂದಿಸಲಿಲ್ಲ, ಸೋಂಕು ತೀವ್ರವಾಗಿದ್ದರು ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಭೆ ನಡೆಸಿಲ್ಲವಲ್ಲದೆ ಸ್ಯಾನಿಟೈಸ್ ಕೂಡ ಮಾಡಿಸಿಲ್ಲ. ಕೋವಿಡ್ ಮಾಹಿತಿ ನೀಡಲು ಪಿಡಿಒಗೆ ಕರೆ ಮಾಡಿದರು ಕರೆ ಸ್ವೀಕರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಉಪ ತಹಶಿಲ್ದಾರ್ ಮುನಿರಾಜಪ್ಪ ಸೇರಿದಂತೆ ಗ್ರಾಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….