ನ್ಯಾಯಮೂರ್ತಿಗಳು ಸರ್ವಜ್ಞರಲ್ಲ ಎಂದಿದ್ದ ಸಿ.ಟಿ.ರವಿ ಹಾಗೂ ಲಸಿಕೆ ಉತ್ಪಾದನೆ ಆಗದಿದ್ದರೆ ನಾವೇನು ನೇಣು ಹಾಕಿಕೊಳ್ಳಬೇಕಾ ಎಂದಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಹೇಳಿಕೆಗಳ ಕುರಿತು ನ್ಯಾಯವಾದಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ನ್ಯಾಯಾಂಗವನ್ನು ಟೀಕಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿಗಳ ಕುರಿತು ಪ್ರತಿಕ್ರಿಯಿಸಲು ನ್ಯಾಯಾಲಯಕ್ಕೆ ಸಮಯವಿಲ್ಲ ಎಂದು ಹೈಕೋರ್ಟ್ ಈಗಾಗಲೇ ಹೇಳಿದೆ. ಆಗಾದರೆ ನ್ಯಾಯಾಂಗ ನಿಂದನೆ ಎಂದರೇನು ತಿಳಿಯೋಣ ಬನ್ನಿ.
ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ನ್ಯಾಯಾಲಯ ನಿಂದನೆ ಆಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪುಗಳಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಅವಹೇಳನಕಾರಿ ಎಂದು ಹೇಳುವ ಮಾತುಗಳು ಯಾವುವು ಎಂದು ಕೂಡ ಪರಿಶೀಲಿಸಬೇಕಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳುತ್ತದೆ.
ನ್ಯಾಯಮೂರ್ತಿಗಳು ಸರ್ವಜ್ಞರಲ್ಲ ಎಂದಿದ್ದ ಸಿ.ಟಿ.ರವಿ ನ್ಯಾಯಾಧೀಶರು ಸರ್ವಜ್ಞನರಲ್ಲ” ಅಂದಿರುವ ಮಾತು ಕಾನೂನು ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನ್ಯಾಯಾಲಯ ನಿಂದನೆ ಎಂದರೇನು?: ನ್ಯಾಯಾಲಯಗಳ ನಿಂದನೆ ಕಾಯ್ದೆ, 1971 ರ ಸೆಕ್ಷನ್ 2(ಎ) ಪ್ರಕಾರ ನ್ಯಾಯಾಲಯ ನಿಂದನೆ ಎಂದರೆ ಸಿವಿಲ್ ಅಥವಾ ಕ್ರಿಮಿನಲ್ ನಿಂದನೆ.
ಸೆಕ್ಷನ್ 2(ಬಿ) ಪ್ರಕಾರ ಸಿವಿಲ್ ನಿಂದನೆ ಎಂದರೆ ನ್ಯಾಯಾಲಯದ ತೀರ್ಪು, ನಿರ್ದೇಶನ, ಆದೇಶ, ರಿಟ್, ಸಲ್ಲಿಸಿದ ಪ್ರಮಾಣಪತ್ರ ಮತ್ತಿತರೆ ಪ್ರಕ್ರಿಯೆ ಉದ್ದೇಶಪೂರ್ವಕವಾಗಿ ಅಸಹಕಾರ ತೋರುವುದು.
ಸೆಕ್ಷನ್ 2(ಸಿ) ಪ್ರಕಾರ ಕ್ರಿಮಿನಲ್ ನಿಂದನೆ ಎಂದರೆ ಬರವಣಿಗೆಯ ಮುಖಾಂತರ ಅಥವಾ ಮಾತುಗಳಿಂದ, ಸೊನ್ನೆಯ ಮುಖಾಂತರವಾಗಲಿ, ಗೋಚರವಾಗುವಂತೆ ಯಾವುದೇ ವಿಷಯವನ್ನು ಪ್ರಕಟಿಸಿ ಅಥವಾ ನಡೆವಳಿಕೆ ಮಾಡಿ ನ್ಯಾಯಾಲಯಕ್ಕೆ ಅವಮಾನ ಮಾಡುವುದು, ನ್ಯಾಯಾಲಯದ ಅಧಿಕಾರಕ್ಕೆ, ಘನತೆಗೆ ಭಂಗ ತರುವುದು,
ನ್ಯಾಯಾಲಯದ ಕಲಾಪಗಳಿಗೆ ಚ್ಯುತಿ ತರುವುದು, ನ್ಯಾಯಾಲಯದ ನಡವಳಿಕೆಗಳಿಗೆ ಹಸ್ತಕ್ಷೇಪ ಮಾಡುವುದು, ಅಡಚಣೆ ತರುವುದು.
ಕ್ರಿಮಿನಲ್ ನಿಂದನೆ ವಿಚಾರಕ್ಕೆ ಬಂದಾಗ ಮೇಲೆ ಹೇಳಿದ ಎಲ್ಲಾ ಅಂಶಗಳು ಪ್ರತಿಯೊಂದು ವಿವಾದಗಳಲ್ಲಿ ವಿಭಿನ್ನವಾಗಿರುತ್ತವೆ. ಆದ್ದರಿಂದ ನ್ಯಾಯಾಲಯಗಳು ಈ ನಡವಳಿಕೆ, ಹೇಳಿಕೆ, ನಡತೆಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕಾಗುತ್ತದೆ. ಆದರೆ ಕ್ರಿಮಿನಲ್ ನಿಂದನೆ ವಿಚಾರ ಬಂದಾಗ ಯಾವುದೇ ವ್ಯಕ್ತಿ ನೇರವಾಗಿ ದೂರು ನೀಡುವಂತಿಲ್ಲ. ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ನೀಡಲು ಅಟಾರ್ನಿ ಜನರಲ್ ಮತ್ತು ಉಚ್ಚ ನ್ಯಾಯಾಲಯಕ್ಕೆ ದೂರು ನೀಡಲು ಅಡ್ವೋಕೇಟ್ ಜನರಲ್ ರವರ ಅನುಮತಿ ಪಡೆಯಬೇಕಾಗುತ್ತದೆ. ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯ ಕೂಡ ಸ್ವಂತ ಅಧಿಕಾರದಿಂದ ನಿಂದನೆ ಪ್ರಕರಣ ಕೈಗೆತ್ತಿಳ್ಳಬಹುದಾಗಿದೆ.
ಈಗ ಸರ್ವೋಚ್ಚ ನ್ಯಾಯಾಲಯದ ಕೆಲವೊಂದು ತೀರ್ಪುಗಳನ್ನು ನೋಡೋಣ: ನ್ಯಾಯಾಲಯ ನಿಂದನೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಮಹತ್ತರವಾದ ತೀರ್ಪು ಎಂದರೆ ಇ.ಎಂ.ಎಸ್ ನಂಬೂದರಿಪಾದ್ ವರ್ಸಸ್ ನಾರಾಯಣ ನಂಬಿಯಾರ್. (1970) 2 ಎಸ್. ಸಿ. ಸಿ 325 ರಲ್ಲಿ ಪ್ರಕಟಿಸಿದೆ. 1970 ರಲ್ಲಿ ನೀಡಿದಂತಹ ಈ ತೀರ್ಪು ನ್ಯಾಯಾಲಯ ನಿಂದನೆ ವಿಚಾರದಲ್ಲಿ ಅತ್ಯಂತ ನಿರ್ದಿಷ್ಟವಾದ ಕಾನೂನಿನ ಚೌಕಟ್ಟನ್ನು ಪ್ರತಿಪಾದಿಸುತ್ತದೆ. ಈ ವಿಚಾರದಲ್ಲಿ ಕೇರಳ ರಾಜ್ಯದ ಮುಖ್ಯಮಂತ್ರಿ ನಂಬೂದರಿಪಾದ್ ಆಡಿದ ಮಾತುಗಳನ್ನು ಪರಿಗಣಿಸಿ ಸರ್ವೋಚ್ಚನ್ಯಾಯಾಲಯವು ನಂಬೂದರಿಪಾದ್ ಗೆ ಶಿಕ್ಷೆ ವಿಧಿಸಿತು. ನಂಬೂದರಿಪಾದ್ ಆಡಿದ ಮಾತುಗಳು ನ್ಯಾಯಾಲಯದ ಘನತೆ ಮತ್ತು ಕಾರ್ಯವೈಖರಿಗೆ ಚ್ಯುತಿ ತರುವಂತಹ ವಿಷಯಗಳಾಗಿವೆ ಎಂದು ಮುಖ್ಯ ನ್ಯಾಯಮೂರ್ತಿರವರು ಹೇಳಿದರು. ಈ ತೀರ್ಪಿನಲ್ಲಿ ಕಾರ್ಲ ಮಾರ್ಕ್ಸ್ ವಾದದ ನಿಜವಾದ ಅಂಶಗಳನ್ನು ಪ್ರತಿಪಾದಿಸುತ್ತಿದ್ದೇನೆ ಎಂದು ಇ.ಎಂ.ಎಸ್ ನಂಬೂದಿರಿಪಾದ್ ಹೇಳಿದ ತೆಗೆದುಕೊಂಡಂತಹ ವಾದವನ್ನು ಸರ್ವೋಚ್ಚನ್ಯಾಯಾಲಯ ತಳ್ಳಿಹಾಕಿತು.
ನಂಬೂದರಿಪಾದ್ ಆಡಿದ ಮಾತುಗಳು ಈ ರೀತಿ ಇದ್ದವು. “ಮಾರ್ಕ್ಸ್ ಮತ್ತು ಎಂಗಲ್ಸ್ ನ್ಯಾಯಾಂಗವನ್ನು ದಬ್ಬಾಳಿಕೆಯ ಸಾಧನವೆಂದು ಪರಿಗಣಿಸಿದ್ದಾರೆ ಮತ್ತು ಇಂದಿಗೂ ನ್ಯಾಯಾಂಗವು ಯಾವುದೇ ಬದಲಾವಣೆಗೆ ಒಳಗಾಗದೆ ಅದನ್ನೇ ಮುಂದುವರೆಸಿದೆ. ನ್ಯಾಯಾಧೀಶರು ವರ್ಗ ದ್ವೇಷ, ವರ್ಗ ಹಿತಾಸಕ್ತಿಗಳು ಮತ್ತು ವರ್ಗ ಪೂರ್ವಾಗ್ರಹಗಳಿಂದ ಮಾರ್ಗದರ್ಶಿಸಲ್ಪಡುತ್ತಾರೆ ಮತ್ತು ಪ್ರಾಬಲ್ಯ ಹೊಂದಿದ್ದಾರೆ. ಉತ್ತಮ ಉಡುಪಿನ ದೊಡ್ಡ ಹೊಟ್ಟೆಯ ಶ್ರೀಮಂತ ವ್ಯಕ್ತಿ ಮತ್ತು ಕಳಪೆ ಕೆಟ್ಟ ಉಡುಪಿನ ಮತ್ತು ಅನಕ್ಷರಸ್ಥ ವ್ಯಕ್ತಿಯ ನಡುವೆ ಸಾಕ್ಷ್ಯಗಳು ಸಮತೋಲನದಲ್ಲಿದ್ದರೆ ನ್ಯಾಯಾಧೀಶರು ಸಹಜವಾಗಿಯೇ ಶ್ರೀಮಂತ ವ್ಯಕ್ತಿಗೆ ಒಲವು ತೋರುತ್ತಾರೆ. ನ್ಯಾಯಾಧೀಶರ ಚುನಾವಣೆ ಉತ್ತಮ ವ್ಯವಸ್ಥೆ. ಆದರೆ ಮೂಲಭೂತ ರಾಜ್ಯ ಸ್ಥಾಪನೆಯನ್ನು ಬದಲಾಯಿಸದಿದ್ದರೆ, ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ.
ಸಂವಿಧಾನದ ಪ್ರತಿಯೊಂದು ಪದ ಮತ್ತು ಪ್ರತಿಯೊಂದು ಷರತ್ತು ಪವಿತ್ರ ಎಂದು ನಾನು ಯಾವುದೇ ಪ್ರಮಾಣವಚನ ಸ್ವೀಕರಿಸಿಲ್ಲ. ನ್ಯಾಯಾಂಗವು ಆಡಳಿತ ವರ್ಗಗಳ ಭಾಗವಾಗಿದೆ. ನ್ಯಾಯಾಂಗದ ಪಾವಿತ್ರ್ಯಕ್ಕೆ ಮಿತಿಗಳಿವೆ. ನ್ಯಾಯಾಂಗವನ್ನು ಕಾರ್ಮಿಕರು, ರೈತರು ಮತ್ತು ಕಾರ್ಮಿಕ ವರ್ಗದ ಇತರ ವರ್ಗಗಳ ವಿರುದ್ಧ ತೂಗಿಸಲಾಗುತ್ತದೆ. ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯು ಮುಖ್ಯವಾಗಿ ಶೋಷಿಸುವ ವರ್ಗಗಳಿಗೆ ಸೇವೆ ಸಲ್ಲಿಸುತ್ತದೆ. ನ್ಯಾಯಾಂಗವನ್ನು ಕಾರ್ಯಕಾರಿಣಿಯಿಂದ ಬೇರ್ಪಡಿಸಿದರೂ ಸಹ ಅದು ಕಾರ್ಯಕಾರಿಣಿಯ ಪ್ರಭಾವ ಮತ್ತು ಒತ್ತಡಕ್ಕೆ ಒಳಪಟ್ಟಿರುತ್ತದೆ. ಇದನ್ನು ಹೇಳುವುದು ತಪ್ಪಲ್ಲ. ರಾಷ್ಟ್ರಪತಿ ಕೂಡ ದೋಷಾರೋಪಣೆಗೆ ಒಳಗಾಗುತ್ತಾರೆ. ಸಾರ್ವಭೌಮತ್ವವು ಯಾರೊಂದಿಗೂ ಅಲ್ಲ, ಜನರೊಂದಿಗೆ ಉಳಿದಿದೆ. ನ್ಯಾಯಾಧೀಶರಿಗೆ ಸಂಬಂಧಿಸಿದಂತೆ ಗೌಪ್ಯ ದಾಖಲೆಗಳನ್ನು ಏಕೆ ಇಡಲಾಗಿದೆ? ನ್ಯಾಯಾಧೀಶರು ತಮ್ಮದೇ ಆದ ವೈಚಾರಿಕತೆ ಮತ್ತು ಪೂರ್ವಾಗ್ರಹಗಳಿಗೆ ಒಳಪಟ್ಟಿರುತ್ತಾರೆ. ಅವರು ವೈಯಕ್ತಿಕ ವಿಲಕ್ಷಣ ವ್ಯಕ್ತಿಗಳಿಂದ ಮಾರ್ಗದರ್ಶಿಸಲ್ಪಡುತ್ತಾರೆ. ವರ್ಗ ಹಿತಾಸಕ್ತಿಗಳು, ವರ್ಗ ದ್ವೇಷ, ಮತ್ತು ವರ್ಗ ಪೂರ್ವಾಗ್ರಹಗಳಿಂದ ಮಾರ್ಗದರ್ಶಿಸಲ್ಪಡುತ್ತಾರೆ ಮತ್ತು ಪ್ರಾಬಲ್ಯ ಹೊಂದಿದ್ದಾರೆ. ಈ ಪರಿಸ್ಥಿತಿಗಳಲ್ಲಿ ನಾವು ನ್ಯಾಯಾಂಗವನ್ನು ಅಥವಾ ವೈಯಕ್ತಿಕ ತೀರ್ಪುಗಳನ್ನು ಟೀಕಿಸುವುದಿಲ್ಲ ಎಂದು ನಾನೇನು ಪ್ರತಿಜ್ಞೆ ಮಾಡಿಲ್ಲ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಬಯಸಿದರೆ ನನ್ನ ಮೇಲೆ ಕ್ರಮ ಕೈಗೊಳ್ಳಬಹುದು ಎಂದಿದ್ದರು.
ಈ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿರವರು ನೀಡಿದಂತಹ ತೀರ್ಪು ಅತ್ಯಂತ ಪ್ರಮುಖವಾಗಿದೆ. ಕಾರ್ಲ್ ಮಾರ್ಕ್, ಲೆನಿನ್ ಮಾತು ಏಂಜಲ್ ಸಿದ್ದಾಂತಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ನಂತರ ನಂಬೂದರಿಪಾದ್ ಆಡಿದ ಮಾತುಗಳ ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿ ರವರು ಈ ರೀತಿ ಹೇಳುತ್ತಾರೆ.
“ಈ ಎಲ್ಲಾ ಬರಹಗಳಲ್ಲಿ (ಕಾರ್ಲ್ ಮಾರ್ಕ್, ಲೆನಿನ್ ಮಾತು ಏಂಜಲ್) ನ್ಯಾಯಾಧೀಶರ ಬಗ್ಗೆ ಎಲ್ಲೂ ಹೇಳಿಲ್ಲ ಎಂದು ಗಮನಿಸಬಹುದು. ಈ ವಿಚಾರ ನಂಬೂದರಿಪಾದ್ ಗೆ ಒಂದೋ ತಿಳಿದಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಮಾರ್ಕ್ಸ್, ಎಂಗಲ್ಸ್ ಮತ್ತು ಲೆನಿನ್ ಅವರ ಬರಹಗಳನ್ನು ತನ್ನ ಸ್ವಂತ ಉದ್ದೇಶಕ್ಕಾಗಿ ವಿರೂಪಗೊಳಿಸಿದ್ದಾರೆ. ನ್ಯಾಯದ ಆಡಳಿತವು ಕಾನೂನನ್ನು ಬದಲಾಯಿಸಬೇಕು ಮತ್ತು ಸಮಾಜದಲ್ಲಿ ಬದಲಾಗಬೇಕು ಎಂದು ಮಾರ್ಕ್ಸ್ ಮತ್ತು ಎಂಗಲ್ಸ್ಗೆ ತಿಳಿದಿತ್ತು. ಆದ್ದರಿಂದ ನಂಬೂದರಿಪಾದ್ ಗೆ ನ್ಯಾಯಾಂಗ ವ್ಯವಸ್ಥೆಯನ್ನು ಹೀಯಾಳಿಸುವ ಅಗತ್ಯವಿರಲಿಲ್ಲ.”
ಈ ವಿಚಾರದಲ್ಲಿ ಇತ್ತೀಚಿನ ತೀರ್ಪು ಎಂದರೆ ಎಮ್.ವಿ.ಜಯರಾಜನ್ ವರ್ಸಸ್ ಕೇರಳ ಉಚ್ಚ ನ್ಯಾಯಾಲಯ, (2015) 4 ಎಸ್.ಸಿ.ಸಿ. 81 ರಲ್ಲಿ ಪ್ರಕಟವಾಗಿದೆ. ಇದರಲ್ಲಿ ವಕೀಲ ಹಾಗೂ ಮಾಜಿ ಶಾಸಕ ವಿಜಯರಾಜ್ ಕೇರಳ ಉಚ್ಚ ನ್ಯಾಯಾಲಯ ತೀರ್ಪನ್ನು ಪ್ರತಿಭಟಿಸಿ ಈ ರೀತಿ ಹೇಳಿದ್ದರು.
‘ನ್ಯಾಯಾಧೀಶರು ಮತ್ತು ಅವರ ತೀರ್ಪುಗಳನ್ನು ಉಲ್ಲಂಘಿಸಿ, ಕೇರಳದ ಉದ್ದ ಮತ್ತು ಅಗಲದಾದ್ಯಂತ ಜನರು ಇಂದು ಸಾರ್ವಜನಿಕ ಸಭೆಗಳು ಮತ್ತು ರಾಲಿಗಳನ್ನು ಆಯೋಜಿಸುತ್ತಿದ್ದಾರೆ. ಆ ನ್ಯಾಯಾಧೀಶರು ಗಾಜಿನ ಮನೆಗಳಲ್ಲಿ ಕುಳಿತು ತೀರ್ಪುಗಳನ್ನು ಏಕೆ ನೀಡಬೇಕು? ಅವರಿಗೆ ಯಾವುದೇ ಸ್ವಾಭಿಮಾನ ಇದ್ದರೆ ಅವರು ರಾಜೀನಾಮೆ ನೀಡಿ ತಮ್ಮ ಕಚೇರಿಯಿಂದ ಕೆಳಗಿಳಿಯಬೇಕು. ತೀರ್ಪುಗಳನ್ನು ದೇಶವು ಅಂಗೀಕರಿಸಿದಾಗ ಮತ್ತು ಜನರಿಂದ ಪಾಲಿಸಲ್ಪಟ್ಟಾಗ ಮಾತ್ರ ನ್ಯಾಯಾಂಗವು ಶ್ರೇಷ್ಠತೆಯನ್ನು ಸಾಧಿಸಬಹುದು. ಇಂದು ನ್ಯಾಯಾಂಗವು ಸಾರ್ವಜನಿಕರಿಗೆ ಆಶ್ರಯವಾಗಿದೆ. ಶಾಸಕಾಂಗವು ತನ್ನ ಮಿತಿಗಳನ್ನು ಮೀರಿದರೆ ನ್ಯಾಯಾಂಗವು ಜನರ ರಕ್ಷಣೆಗೆ ಬರುತ್ತದೆ. ಆದರೆ ನ್ಯಾಯಾಂಗವು ತನ್ನ ಮಿತಿಯನ್ನು ಮೀರಿದರೆ ಯಾರು ನ್ಯಾಯಾಂಗವನ್ನು ಕಟ್ಟಿಹಾಕುತ್ತಾರೆ? ಪ್ರಜಾಪ್ರಭುತ್ವದಲ್ಲಿ ಜನರು ಸರ್ವೋಚ್ಚರು. ನ್ಯಾಯಾಧೀಶರು ಕಾನೂನುಗಳನ್ನು ವ್ಯಾಖ್ಯಾನಿಸುತ್ತಾರೆ ಮತ್ತು ಕಾನೂನುಗಳ ಆಶಯವನ್ನು ವ್ಯಾಖ್ಯಾನಿಸಿ ಅದಕ್ಕೆ ಅನುಗುಣವಾಗಿ ಆದೇಶಗಳನ್ನು ನೀಡಬೇಕು. ದುರದೃಷ್ಟವಶಾತ್, ಕೆಲವು ಈಡಿಯಟ್ಸ್ (ಮೂರ್ಖರು) ನಮ್ಮ ನ್ಯಾಯದ ಸ್ಥಾನವನ್ನು ಆಕ್ರಮಿಸಿಕೊಂಡಿರುವುದು ಬೇರೆ ಏನೂ ಅಲ್ಲ ಎಂದಿದ್ದರು.
ಈ ಎರಡೂ ವಿವಾದಗಳಲ್ಲಿ ಮೇಲೆ ಹೇಳಿದ ವ್ಯಕ್ತಿಗಳು ಆಡಿದ ಮಾತುಗಳು ನ್ಯಾಯಾಲಯ ನಿಂದನೆ ಮಾಡಿವೆ ಎಂದು ಸರ್ವೋಚ್ಚನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದು ನ್ಯಾಯಾಲಯ ನಿಂದನೆ ಆಗುತ್ತದೆಯೋ ಇಲ್ಲವೋ ಎಂಬುದು ಕಾನೂನು ತಜ್ಞರಿಗೆ ಸೇರಿದ್ದು. ಆದರೆ ಈ ಮಾತು ನ್ಯಾಯಾಲಯಕ್ಕೆ ಅವಮಾನ ಮಾಡುತ್ತದೆಯೋ, ನ್ಯಾಯಾಲಯದ ಅಧಿಕಾರಕ್ಕೆ ಘನತೆಗೆ ಭಂಗ ತರುವುದೊ, ನ್ಯಾಯಾಲಯದ ಕಲಾಪಗಳಿಗೆ ಚ್ಯುತಿ ತರುವುದೋ, ನ್ಯಾಯಾಲಯದ ನಡವಳಿಕೆಗಳಿಗೆ ಹಸ್ತಕ್ಷೇಪ ಮತ್ತು ಅಡಚಣೆ ಮಾಡುತ್ತದೆಯೋ ಎಂಬ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ @ಟಿ.ಕೆ.ಹನುಮಂತರಾಜು
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….