ರಾಷ್ಟ್ರೀಯ ಶಿಕ್ಷಣ ನೀತಿಯದ್ದೆ ಈಗ ಎಲ್ಲೆಡೆ ಚರ್ಚೆ. ದೇಶದ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸುವ ಈ ಕ್ರಾಂತಿಕಾರಿ ನೀತಿಯಲ್ಲಿ ಏನಿದೆ ಎಂಬ ಕುತೂಹಲ ವಿದ್ಯಾರ್ಥಿಗಳಿಂದ ಹಿಡಿದು ಶಿಕ್ಷಣ ತಜ್ಞರ ವರೆಗೂ ಇದೆ. ಈ ಕುರಿತು ದೊಡ್ಡಬಳ್ಳಾಪುರದ ಶ್ರೀ ದೇವರಾಜ್ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಚಿಕ್ಕಣ್ಣ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸ್ವಾಗತವೇ ಆದರೆ.. ನಾಲ್ಕು ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಭೋದನೆಯನ್ನು ಕೇವಲ ಒಂದು ವರ್ಷಕ್ಕೆ ಅಂದರೆ ಎರಡು ಸೆಮಿಸ್ಟರ್ ಗಳಿಗೆ ಮಾತ್ರ ಸೀಮಿತಗೊಳಿಸಿರುವುದು, ಕನ್ನಡ ಭಾಷೆಗೆ, ಕನ್ನಡ ಕಲಿಯುವ ಪ್ರತಿಭೆಗಳಿಗೆ ಹಾಗೂ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಅವರು ಆರೋಪಿಸಿದ್ದಾರೆ .
ಮೂರು ವರ್ಷಗಳ ಪದವಿಯಲ್ಲಿ ಎರಡು ವರ್ಷ ಅಥವಾ ನಾಲ್ಕು ಸೆಮಿಸ್ಟರ್ ಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದರು. ಆದರೆ ಈಗ ನಾಲ್ಕು ವರ್ಷಗಳ ಪದವಿಯಲ್ಲಿ ಕೇವಲ ಒಂದೇ ವರ್ಷಕ್ಕೆ ಸೀಮಿತಗೊಳಿಸಿರುವುದು ಸಮಂಜಸವಲ್ಲ.
ಇದು ಕನ್ನಡ ಜನ, ಕನ್ನಡ ನಾಡು ನುಡಿಯ ಕಡಗಣನೆ. ಹಾಗಾಗಿ ಕನಿಷ್ಟ ಮೂರು ವರ್ಷಗಳಿಗೆ ಅಂದರೆ ಆರು ಸೆಮಿಸ್ಟರ್ ಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಕಲಿಯಲು ಸರ್ಕಾರ ನೂತನ ಶಿಕ್ಷಣ ನೀತಿಯಲ್ಲಿ ಅವಕಾಶ ಮಾಡಿಕೊಡಬೇಕು ಎಂದವರು ಒತ್ತಾಯಿಸಿದ್ದಾರೆ.
ಕರ್ನಾಟಕದ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ ಗಳಲ್ಲಿ ಕನ್ನಡ ಭಾಷೆಯ ಬೋಧನೆಗೆ ಕೇವಲ ಒಂದು ವರ್ಷ ಅಂದರೆ ಎರಡು ಸೆಮಿಸ್ಟರ್ ಗಳಿಗೆ ಮಾತ್ರ ನಿಗದಿಗೊಳಿಸಿರುವುದು ಅವೈಜ್ಞಾನಿಕ, ಅಶೈಕ್ಷಣಿಕ ಹಾಗೂ ಅಸಾಂಸ್ಕೃತಿಕ ನಿಲುವಾಗಿದೆ.
ಜೀವನಪೂರ್ತಿ ಭಾಷೆ ಬಳಸಬೇಕಾಗಿರುವ ವಿದ್ಯಾರ್ಥಿಗಳು ಇನ್ನೂ ಎರಡು ವರ್ಷ ಭಾಷೆ ಕುರಿತು ಓದಿದಲ್ಲಿ ಯಾರಿಗೂ ಯಾವುದೇ ನಷ್ಟ ಆಗುವುದಿಲ್ಲ ಬದಲಾಗಿ ನಮ್ಮ ಭಾಷೆ, ನಮ್ಮನಾಡು, ನಮ್ಮಸಂಸ್ಕೃತಿ, ಸಾಹಿತ್ಯ ಮೊದಲಾದುವುಗಳ ಸ್ಪಷ್ಟ ಅರಿವಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ.
ಆದ ಕಾರಣ ಕೇಂದ್ರ ಸರ್ಕಾರ ಈ ಕುರಿತು ಗಮನಹರಿಸಿ ಕರ್ನಾಟಕದ 4 ವರ್ಷದ ಪದವಿ ಕೋರ್ಸ್ ಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ 6 ಸೆಮಿಸ್ಟರ್ ಗಳಲ್ಲಿ ಅಂದರೆ ಮೂರು ವರ್ಷಗಳಲ್ಲಿ ಕಲಿಯುವಂತೆ, ಕಲಿಸುವಂತೆ, ವ್ಯವಸ್ಥೆ ಮಾಡುವ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ಉಳಿವು ಮತ್ತು ಅಧ್ಯಯನಕ್ಕೆ ಮಹತ್ವ ಕೊಡಬೇಕು ಎಂದವರು ಒತ್ತಾಯಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….