ದೊಡ್ಡಬಳ್ಳಾಪುರ: ಕರೊನಾ ಎರಡು ಅಲೆಯ ಸಂದರ್ಭದಲ್ಲಿಯೂ ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗಳ ನಿರಂತರ ಪರಿಶ್ರಮ ಹೋರಾಟದಿಂದ ಕರೊನಾ ಗೆಲ್ಲಲು ಸಾಧ್ಯವಾಗಿದೆ ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ನಗರದ ದತ್ತಾತ್ರೇಯ ಕಲ್ಯಾಣ ಮಂಟಪದಲ್ಲಿ ವಿಶ್ವವಾಣಿ ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್ ಕಾನ್ಸಟ್ರೇಟರ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಜಿಲ್ಲಾಸ್ಪತ್ರೆ ಮಾಡುವ ಕುರಿತು ಕ್ರಮ ತೆಗೆದುಕೊಳ್ಳಲಾಗಿದೆ. ಲಸಿಕೆ ವಿರುದ್ಧ ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿದ್ದು, ಲಸಿಕೆ ಸರಬರಾಜಾಗುತ್ತಿದ್ದು ಎಲ್ಲರಿಗೂ ಲಸಿಕೆ ಸಿಗಲಿದೆ ಎಂದರು.
ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದ ಅವರು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಹೇಳಿಕೆ ವಿರುದ್ದ ಹರಿಹಾಯ್ದರು.
ಎಚ್.ವಿಶ್ವನಾಥ್ ಅವರು ಹುಚ್ಚರಂತೆ ಮಾತನಾಡುತ್ತಾರೆ. 2008 ರಲ್ಲಿ ಪಕ್ಷ ಅಕಾರಕ್ಕೆ ಬಂದಾಗಲೂ ನಾನು ಮಂತ್ರಿ ಮಾಡಿ ಎಂದು ಕೇಳಲಿಲ್ಲ. ಅಕಾರಕ್ಕಾಗಿ ನಾನು ಪಕ್ಷದಲ್ಲಿ ಕೆಲಸ ಮಾಡುತ್ತಿಲ್ಲ. ಆದರೆ ಅವರಿಗೆ ಅಕಾರ ಬೇಕು. ಹೀಗಾಗಿ ಮಾನಸಿಕ ಅಸ್ವಸ್ಥತೆಯಿಂದ ಆಧಾರ ರಹಿತ ಆರೋಪ ಮಾಡುವುದನ್ನು ಕಲಿತಿದ್ದಾರೆ.
ಬಿಡಿಎಯಲ್ಲಿ ಲೂಟಿ ಮಾಡಿದವರನ್ನು ಜೈಲಿಗೆ ಕಳುಹಿಸಿದ್ದೇನೆ. ಅವರಿಗೆ ಇನ್ನೂ ಜಾಮೀನು ದೊರೆತಿಲ್ಲ. ಬಿಡಿಎಯನ್ನು ಸ್ವಚ್ಚ ಮಾಡುವ ಕೆಲಸ ಮಾಡಿದ್ದೇನೆ. ಯಾವುದೇ ಸಾಲ ಪಡೆಯದೆ ಮೊದಲ ಬಾರಿಗೆ 2800 ಕೋಟಿ ರೂ. ಬಜೆಟ್ ಮಾಡಿದ್ದೇನೆ. ಆರೇಳು ತಿಂಗಳಲ್ಲಿ ಬಿಡಿಎ ಆರ್ಥಿಕ ಸ್ಥಿತಿ ಸುಧಾರಿಸಲು ಕೆಲಸ ಮಾಡುತ್ತೇನೆ. ನನ್ನ ವಿರುದ್ಧ ವೈಯಕ್ತಿಕವಾಗಿ ಕೆಟ್ಟ ಪದ ಬಳಸಿದ್ದರಿಂದ ನಾನು ಮಾತನಾಡಲೇಬೇಕಾಯಿತು. ನಾನಾಗಿದ್ದಕ್ಕೆ ಸಹಿಸಿಕೊಂಡಿದ್ದೇನೆ. ಇಷ್ಟೆಲ್ಲಾ ಆದರೂ ಹುಚ್ಚು ಬಿಟ್ಟಿಲ್ಲ. ಅವರ ರಾಜಕೀಯ ಅಸ್ತಿತ್ವ ಬಿಜೆಪಿಯಲ್ಲಿ ಕೊನೆಯಾಗಲಿದೆ. ವರಿಷ್ಠರು ಸೂಚನೆ ನೀಡಿದರೂ ಮತ್ತೆ ಸುದ್ದಿಗೋಷ್ಟಿ ಮಾಡಿ ತಮ್ಮ ಚಾಳಿ ಮುಂದುವರಿಸಿದ್ದಾರೆ. ಅವರ ಮನೆಯವರೇ ಅವರನ್ನು ನಿಮ್ಯಾನ್ಸ್ಗೆ ಸೇರಿಸುತ್ತಾರೆ ಎಂದು ಎಚ್.ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವನ್ಯಜೀವಿ ಮಂಡಳಿ ನಿರ್ದೇಶಕ ಎಸ್.ವಿ.ಅಲೋಕ್, ದೊಡ್ಡಬಳ್ಳಾಪುರ ಯೋಜನಾಭಿವೃದ್ಧಿ ಪ್ರಾಕಾರ ಅಧ್ಯಕ್ಷ ದಿಬ್ಬೂರು ಜಯಣ್ಣ, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಟಿ.ಎನ್ ನಾಗರಾಜು, ಎಚ್.ಎಸ್.ಶಿವಶಂಕರ್, ಧೀರಜ್ ಮುನಿರಾಜು, ವೆಂಕಟೇಶ್, ಲಗ್ಗೆರೆ ನಾರಾಯಣಸ್ವಾಮಿ, ವಿಜಯ್ ಕುಮಾರ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….