ದೊಡ್ಡಬಳ್ಳಾಪುರ: ಸದ್ಯದಲ್ಲಿಯೇ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ನೀಗಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೋಲಿಸ್ ಅಧಿಕ್ಷಕರ ಕಚೇರಿ ಸ್ಥಳಾಂತರಕ್ಕೆ ಒತ್ತು ನೀಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೋಲಿಸ್ ಅಧಿಕ್ಷಕ ಡಾ.ಕೋನ ವಂಶಿ ಕೃಷ್ಣ ತಿಳಿಸಿದರು.
ನಗರದ ಡಿವೈಎಸ್‍ಪಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಎಸ್.ಪಿ ಕಚೇರಿಯನ್ನು ಸ್ಥಳಾಂತರಿಸುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಕಚೇರಿ ಸ್ಥಳಾಂತರಕ್ಕೆ ಒತ್ತು ನೀಡಲಾಗುತ್ತಿದ್ದು, ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು. ದೊಡ್ಡಬಳ್ಳಾಪುರಕ್ಕೆ ಟ್ರಾಫಿಕ್ ಪೊಲೀಸ್ ಸ್ಟೇಷನ್ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಪೊಲೀಸ್ ಸಿಬ್ಬಂದಿಗಳ ನೇಮಕಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.ಪೊಲೀಸ್ ಠಾಣೆಗಳಿಗೆ ಬೇಕಾಗಿರುವ ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಸಿಬ್ಬಂದಿ ತರಬೇತಿಗೆ ತೆರಳಿದ್ದಾರೆ. ತರಬೇತಿ ಮುಗಿದ ಕೂಡಲೇ ತಾಲೂಕಿನಲ್ಲಿನ ಸಿಬ್ಬಂದಿಗಳ ಕೊರತೆ ಪೂರ್ಣವಾಗಿ ನೀಗಲಿದೆ ಎಂದರು.
ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕ ಸಹಕಾರ ಸಹ ಅಗತ್ಯವಾಗಿದ್ದು, ಜಿಲ್ಲೆಯಲ್ಲಿ ಯಾವುದೇ ತರಹದ ಅಪರಾಧ ಚಟುವಟಿಕೆಗಳು, ಕಾನೂನು ಬಾಹಿರ ಕೃತ್ಯಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕಿದೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಡಿವೈಎಸ್‍ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸತೀಶ್, ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಬರೀಶ್, ಸಬ್ ಇನ್ಸ್ಪೆಕ್ಟರ್‍ಗಳಾದ ಗೋವಿಂದ್, ಗಜೇಂದ್ರ, ಮಂಜುನಾಥ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….