ದೊಡ್ಡಬಳ್ಳಾಪುರ: ಕೋವಿಡ್ ಪರಿಣಾಮದಿಂದಾಗಿ ಕಾರ್ಮಿಕರ ಬದುಕು ದುಸ್ಥರವಾಗುತ್ತಿದ್ದು, ಮಾನವೀಯತೆಯಿಂದ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸರ್ಕಾರ ಆರ್ಥಿಕ ಸಂಕಷ್ಟದಲ್ಲಿಯೂ, ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗಾಗಿ ಕಿಟ್‍ಗಳನ್ನು ನೀಡಿ ನೆರವಾಗುತ್ತಿರುವುದು ಅಭಿನಂದನೀಯ ಎಂದು ವಿಧಾನ ಪರಿಷತ್ ಸದಸ್ಯೆ ಡಾ.ತೇಜಸ್ವಿನಿ ಗೌಡ ಹೇಳಿದರು.
ನಗರದ ಬಾಬು ಜಗಜೀವನ ರಾಂ ಭವನದಲ್ಲಿ ಡಾ.ತೇಜಸ್ವಿನಿ ಗೌಡ ಸೂಚನೆಯ ಮೆರೆಗೆ ಬಂದಂತಹ ದಿನಸಿ ಕಿಟ್‍ಗಳನ್ನು ಕಾರ್ಮಿಕ ಇಲಾಖೆ ಹಾಗೂ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಹಕಾರದೊಂದಿಗೆ ಕಾರ್ಮಿಕರಿಗೆ ವಿತರಿಸಿ ಮಾತನಾಡಿದರು.
ಕೋವಿಡ್ ಸಂಕಷ್ಟದಲ್ಲಿ ಹಸಿವಿನ ಬೆಲೆ ಏನೆಂಬುದು ಎಲ್ಲರಿಗೂ ತಿಳಿಯುತ್ತಿದ್ದು, ಅಂತಹವರನ್ನು ಗುರುತಿಸಿ ಪ್ರಾಮಾಣಿಕವಾಗಿ ನೆರವು ನೀಡುವ ಕಾರ್ಯವಾಗಬೇಕಿದೆ. ರಾಜ್ಯ ಸರ್ಕಾರ ಕೋವಿಡ್ ಸಮಯದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಕಾರ್ಮಿಕರಿಗೆ ವಿಶೇಷವಾಗಿ ಹೆಚ್ಚು ಒತ್ತು ನೀಡುತ್ತಿದೆ. ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ಕಲ್ಯಾಣ ಭವನ ನಿರ್ಮಾಣಕ್ಕೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ 2 ಕೋಟಿ ರೂ ನೀಡುವ ಭರವಸೆ ನೀಡಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿರುವ ಮಾದರಿಯಲ್ಲಿಯೇ ದೊಡ್ಡಬಳ್ಳಾಪುರ ಸಹ ಜಿಲ್ಲಾ ಕೇಂದ್ರವಾಗಬೇಕಿದ್ದು, ಇದಕ್ಕೆ ತಮ್ಮ ಬೆಂಬಲವಿದೆ ಎಂದು ಪುನರುಚ್ಛರಿಸಿದರು.
ಕಾರ್ಮಿಕ ನಿರೀಕ್ಷಕ ಆರ್.ಪ್ರದೀಪ್ ಮಾತನಾಡಿ, ರಾಜ್ಯ ಕಟ್ಟಡ ಮತ್ತು ಇತರೆ ಕೂಲಿ ಕಾರ್ಮಿಕರ ಕಲ್ಯಾಣ ಮಂಡಲಿ ವತಿಯಿಂದ ಇಂದು ಕಾರ್ಮಿಕರಿಗೆ 1900 ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಕಾರ್ಮಿಕರಿಗೆ ನೀಡುವ ಸರ್ಕಾರದ ಸೌಲಭ್ಯಗಳು ಸದುಪಯೋಗವಾಗಬೇಕು ಎಂದರು.
ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಸ್ಥಾಪಕ ರವಿ ಮಾವಿನಕುಂಟೆ, ಜಿಲ್ಲಾಧ್ಯಕ್ಷ ಎಸ್.ಎನ್.ಸುಬ್ರಹ್ಮಣಿ, ತಾಲೂಕು ಅದ್ಯಕ್ಷ ರಮೇಶ್ ಸೊಣ್ಣಪ್ಪನಹಳ್ಳಿ, ಕಾರ್ಮಿಕ ಘಟಕದ ಅಧ್ಯಕ್ಷ ಆನಂದ್ ಕುಮಾರ್, ಇಂಡೋ ಮಿಮ್ ಟೆಕ್ ಕಾರ್ಮಿಕ ಘಟಕದ ಅಧ್ಯಕ್ಷ ಜಯಂತ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಂಜುನಾಥ್ ನಾಯಕ್ ಮತ್ತಿತರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..