ಚಿಕ್ಕಬಳ್ಳಾಪುರ: ಕರೊನಾ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಜು.19 ಮತ್ತು 22 ರಂದು ನಡೆಯಲಿರುವ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಭಯ, ಆತಂಕವಿಲ್ಲದೆ ನಿರ್ಭೀತಿಯಿಂದ ಬಂದು ಪರೀಕ್ಷೆ ಬರೆಯಬಹುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾವುದೇ ತೊಂದರೆಯಿಲ್ಲದೆ ಸುವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಗೆ ಒಟ್ಟು 17,102 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಇದರಲ್ಲಿ 15,855 ಮಂದಿ ರೆಗ್ಯೂಲರ್, 273 ಮಂದಿ ಪುನರಾವರ್ತಿತ, 872 ಮಂದಿ ಖಾಸಗಿ ಅಭ್ಯರ್ಥಿಗಳು ಇದ್ದಾರೆ. ಈ ಪೈಕಿ 73 ಮಂದಿ ವಿದ್ಯಾರ್ಥಿಗಳು ಹೊರ ಜಿಲ್ಲೆಯವರಾಗಿದ್ದಾರೆ. ರೆಗ್ಯೂಲರ್ ಅಭ್ಯರ್ಥಿಗಳ ಪೈಕಿ 8290 ಮಂದಿ ಬಾಲಕರು, 7595 ಮಂದಿ ಬಾಲಕಿಯರು ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದರು.
ಕಳೆದ ವರ್ಷ ಜಿಲ್ಲೆಯಾದ್ಯಂತ ಒಟ್ಟು 64 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ, ಈ ಬಾರಿ ಕೋವಿಡ್ ಹಾಗೂ ವಿದ್ಯಾರ್ಥಿಗಳ ಸುರಕ್ಷಿತೆಯ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 99 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 1516 ಕೊಠಡಿಗಳನ್ನು ನಿಗಧಿಮಾಡಿದ್ದು, ಒಂದು ಡೆಸ್ಕ್ ಗೆ ಕೇವಲ ಬಬ್ಬರಂತೆ ಒಂದು ಕೊಠಡಿಯಲ್ಲಿ ಕೇವಲ 12 ಮಂದಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಒಟ್ಟು 2456 ಮಂದಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, 1917 ಮಂದಿ ಕೊಠಡಿ ಮೇಲ್ವಿಚಾರಕರು, 99 ಮಂದಿ ಅಸೀನ ಜಾಗೃತ ದಳದ ಅಧಿಕಾರಿಗಳು ಮತ್ತು 198 ಸ್ಕೌಟ್ ಮತ್ತು ಗೈಡ್ಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪರೀಕ್ಷೆಗೆ ನಿಯೋಜಿಸಿರುವ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಎನ್-95 ಮಾಸ್ಕ್ ಧರಿಸಲು ಸೂಚಿಸಲಾಗಿದೆ. ನಿಯೋಜನೆಗೊಂಡವರಲ್ಲಿ ಯಾರಿಗೂ ಕೊರೊನಾ ಲಕ್ಷಣಗಳು ಇಲ್ಲ. ಒಂದು ವೇಳೆ ಪರೀಕ್ಷೆ ಸಂದರ್ಭದಲ್ಲಿ ಕೊರೊನಾ ಕಂಡುಬಂದಲ್ಲಿ ಅವರಿಗೆ ಬದಲಾಗಿ ಮೀಸಲಿಟ್ಟಿರುವ ಶೇ.10 ರಷ್ಟು ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಜು.19 ರಂದು ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಜು.22 ರಂದು ಪ್ರಥಮ ಭಾಷೆ, ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ ವಿಷಯಗಳಿಗೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರಗೆ ಪರೀಕ್ಷೆ ನಡೆಯಲಿದೆ. ಆದರೆ, ಪರೀಕ್ಷಾ ಸಿಬ್ಬಂದಿ ಬೆಳಗ್ಗೆ 8.30 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಲಿದ್ದಾರೆ. ವಿದ್ಯಾರ್ಥಿಗಳು ಬೆಳಗ್ಗೆ 8.30ರಿಂದಲೇ ಪರೀಕ್ಷಾ ಕೇಂದ್ರಕ್ಕೆ ಬಂದರೆ ಬಳಗೆ ಪ್ರವೇಶ ನೀಡಲಾಗುವುದು. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಒಳಗೊಂಡಂತೆ ಒಂದೇ ಪ್ರಶ್ನೆಪತ್ರಿಕೆ ಇರುತ್ತದೆ. ಪ್ರತಿ ವಿಷಯದಲ್ಲಿ 40 ಪ್ರಶ್ನೆಗಳಿದ್ದು, ಮೂರು ವಿಷಯಗಳಿಂದ ಒಟ್ಟು 120 ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೆ ಒಂದು ಅಂಕದಂತೆ ಒಂದು ವಿಷಯಕ್ಕೆ 40 ಅಂಕಗಳು ಒಟ್ಟು 120 ಅಂಕಗಳು ಇರುತ್ತದೆ. ಎಲ್ಲಾ ಪ್ರಶ್ನೆಗಳು ಸಹ ಬಹು ಆಯ್ಕೆ ಪ್ರಶ್ನೆಗಳಾಗಿರುತ್ತವೆ. ಪರೀಕ್ಷೆಯಲ್ಲಿ ಉತ್ತರಿಸಲು ವಿಷಯವಾರು ಪೂರ್ವಮುದ್ರಿತ ಓ.ಎಂ.ಆರ್. ಶೀಟ್‌ಗಳಿರುತ್ತವೆ. ವಿದ್ಯಾರ್ಥಿಗಳು ಎ.ಬಿ.ಸಿ.ಡಿ. ಆಯ್ಕೆಗಳಲ್ಲಿ ಸರಿ ಉತ್ತರಕ್ಕೆ ಶೇಡ್ ಮಾಡುವ ಮೂಲಕ ಉತ್ತರಿಸುವುದು. ಭಾಷೆಗಳಿಗೂ ಸಹ ಇದೇ ರೀತಿಯ ಪ್ರಶ್ನೆಪತ್ರಿಕೆ ಮತ್ತು ಓ.ಎಂ.ಆರ್. ಶೀಟ್‌ಗಳನ್ನು ಒಳಗೊಂಡಿರುತ್ತದೆ. ಓ.ಎಂ.ಆರ್.ಗಳು ವಿಷಯವಾರು ಬೇರೆ ಬೇರೆ ಬಣ್ಣದವುಗಳಾಗಿರುತ್ತವೆ. ಪ್ರಥಮಭಾಷೆ ಮತ್ತು ಗಣಿತ-ಗುಲಾಬಿ ಬಣ್ಣ(Pink Color), ದ್ವಿತೀಯಭಾಷೆ ಮತ್ತು ವಿಜ್ಞಾನ-ಕಿತ್ತಲೆ ಬಣ್ಣ(Orange Color), ತೃತೀಯಭಾಷೆ ಮತ್ತು ಸಮಾಜ ವಿಜ್ಞಾನ- ಹಸಿರು ಬಣ್ಣ (Green Color) ಹಾಗೂ ಜಿ.ಟಿ.ಎಸ್. ವಿಷಯಗಳು- ನೀಲಿ ಬಣ್ಣ (Blue Color)ದಲ್ಲಿ ಇರಲಿದೆ ಎಂದು ಮಾಹಿತಿ ನೀಡಿದರು.
200 ಮೀ.. 144 ಸೆಕ್ಷನ್ ಜಾರಿ: ಪ್ರತಿ ಕೇಂದ್ರದಲ್ಲಿ ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೂ ಮುಂಚಿತವಾಗಿ ಮತ್ತು ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಿಸಲಾಗುವುದು. ನಗರ ಪ್ರದೇಶಗಳಲ್ಲಿ ನಗರಸಭೆ/ಪುರಸಭೆಯವರು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮಾಡಲಾಗುವುದು. ಪರೀಕ್ಷಾ ದಿನಗಳಂದು ಎಲ್ಲಾ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಪರೀಕ್ಷಾ ಕೇಂದ್ರಗಳ ಸಮೀಪದ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಆದೇಶಿಸಲಾಗಿದೆ.
ಪ್ರತಿ ತಾಲ್ಲೂಕಿಗೆ ಒಂದರಂತೆ ಪ್ರತ್ಯೇಕವಾದ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಿದ್ದು, ಕೋವಿಡ್ ಸೋಂಕಿತ ವಿದ್ಯಾರ್ಥಿಗಳು ಸದರಿ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಆದರೆ, ಪ್ರಸ್ತುತ ಪರೀಕ್ಷೆಗೆ ನೊಂದಾಯಿಸಿಕೊಂಡಿರುವ ಯಾವುದೇ ವಿದ್ಯಾರ್ಥಿಗಳಲ್ಲಿ ಸೋಂಕು ದೃಢವಾಗಿರುವುದಿಲ್ಲ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಪ್ರತಿ ತಾಲ್ಲೂಕಿಗೆ ಒಂದರಂತೆ ಅಂಬುಲೆನ್ಸ್ ಅನ್ನು ಮುನ್ನೆಚ್ಚರಿಕೆಯಾಗಿ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಇಲಾಖಾ ವೆಬ್‌ಸೈಟ್(http://sslc.karnataka.gov.in)ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳ 2 ಸೆಟ್‌ಗಳು ಮತ್ತು ಮಾದರಿ ಒ.ಎಂ.ಆರ್. ಶೀಟ್‌ಗಳನ್ನು ಪ್ರಕಟಿಸಲಾಗಿದೆ. ಹಾಗೂ ಶಾಲಾ ಶಿಕ್ಷಕರು ಸಹ ನೂತನ ಪರೀಕ್ಷಾ ಪದ್ಧತಿ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನಮ್ಮ ಮಕ್ಕಳಿಗೆ ಈಗಾಗಲೇ ಪರಿಚಯಿಸಲಾಗಿದೆ. ಅಷ್ಟೆ ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಆರು ವಿಷಯಗಳಿಗೆ ಸಂಬಂಧಿಸಿದಂತೆ ಬಹು ಆಯ್ಕೆಯ ಆನ್‌ಲೈನ್ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ವಿದ್ಯಾರ್ಥಿಗಳೆಲ್ಲರೂ ಇದರಲ್ಲಿ ಭಾಗವಹಿಸಿ, ಉತ್ತಮ ಸಾಧನೆ ತೋರಿದ್ದಾರೆ ಎಂದು ಅವರು ತಿಳಿಸಿದರು.
ರೋಗ ಲಕ್ಷಣಗಳಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕಾಗಿಯೇ ಪ್ರತ್ಯೇಕವಾದ ಕೊಠಡಿಯನ್ನು ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸಿದ್ಧಪಡಿಸಲಾಗಿದೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ಹಾಗೂ ಕುಡಿಯುವ ನೀರಿನ ಬಾಟಲ್‌ನ್ನು ತರುವಂತೆ ಪೋಷಕರು ತಿಳಿಸಬೇಕು.
ನೂತನ ಪರೀಕ್ಷಾ ಪದ್ಧತಿಯಂತೆ ಪರೀಕ್ಷೆಯು ನಿಶ್ಚಯವಾಗಿ ನಡೆಯಲಿದ್ದು, ಯಾವುದೇ ವಿದ್ಯಾರ್ಥಿಯೂ ಸಹ ಗೈರು ಹಾಜರಾಗದೇ ಪರೀಕ್ಷೆಗೆ ಹಾಜರಾಗಿ ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನು ಬರೆಯಲು ಪೋಷಕರು ಕ್ರಮವಹಿಸಬೇಕು ಈ ಮೂಲಕ 2021ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಾಮರೆಡ್ಡಿ, ಮಧ್ಯಾಹ್ನ ಉಪಹಾರ ಯೋಜನೆಯ ಜಿಲ್ಲಾ ಅಧಿಕಾರಿ ಶೈಲಾ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪರೀಕ್ಷಾ ಸಹಾಯವಾಣಿ ಆರಂಭ: ಜು.19 ಮತ್ತು 22 ರಂದು ಜಿಲ್ಲೆಯ 99 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಿದ್ದು ವಿದ್ಯಾರ್ಥಿಗಳು ಯಾವುದೇ ಮಾಹಿತಿಗಾಗಿ ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಕೆ.ಎಂ ಜಯರಾಮರೆಡ್ಡಿ-ಉಪನಿರ್ದೇಶಕರು(ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ-9448999333.
ಶಿವಲಿಂಗಯ್ಯ-ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ-9663320113.
ಕೆ.ಎನ್.ಲಕ್ಷ್ಮೀಕಾಂತ-ವಿಷಯ ಪರಿವೀಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ-9900870999.
ಕೃಷ್ಣಕುಮಾರಿ-ವಿಷಯ ಪರಿವೀಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ-9535626738.
ಟಿ.ಎಸ್.ಜಮೀರ್ ಪಾಷಾ-ವಿಷಯ ಪರಿವೀಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ-9902718650.
ಬಿ.ವಿ.ಶಿವಪ್ರಕಾಶ್-ವಿಷಯ ಪರಿವೀಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆ,ಚಿಕ್ಕಬಳ್ಳಾಪುರ-8618496796.ಅಂಜಿನಪ್ಪ-ವಿಷಯ ಪರಿವೀಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ-7892773118.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..