ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಆರಂಭಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿದ್ದು, ರಾಜ್ಯಾದ್ಯಂತ ಹೆಚ್ಚಿನ ಶಾಲೆಗಳನ್ನು ಆರಂಭಿಸುವಂತೆ ಸಾರ್ವಜನಿಕ ವಲಯದಲ್ಲಿ ಮನವಿಗಳು ಬರುತ್ತಿರುವುದರಿಂದ ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲಿ ಒಂದು ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುವ ಚಿಂತನೆಯಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಸಕಾಲ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಇಂದು ಅವರು ಭೇಟಿ ನೀಡಿ, ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಶಾಲೆಗಳು ಕೈಗೊಂಡಿರುವ ಸಿದ್ಧತೆ ಕುರಿತು ಪರಿಶೀಲನೆ ನಡೆಸಿ, ಅವರು ಮಾತನಾಡಿದರು.
ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಶಿಕ್ಷಣ ಮತ್ತು ಹೆಚ್ಚಿನ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿರುವ ಹಿನ್ನೆಲೆ, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಉತ್ಸುಕರಾಗಿದ್ದಾರೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಶಿಕ್ಷಣ ತಜ್ಞರು ಹಾಗೂ ಪೋಷಕರ ಪ್ರತಿನಿಧಿಗಳನ್ನು ಸೇರಿಸಿ, ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯು ವರದಿ ನೀಡಿದ ನಂತರ ಆರೋಗ್ಯ ಇಲಾಖೆಯ ಸಹಮತದೊಂದಿಗೆ ಶಾಲೆ ಆರಂಭಿಸುವ ಕುರಿತು ಅಕ್ಟೋಬರ್ ಮೊದಲ ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷಕ್ಕಿಂತ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳನ್ನು, ಸಿಬ್ಬಂದಿಗಳನ್ನು ಹೆಚ್ಚಿಸಲಾಗಿದ್ದು, ರಾಜ್ಯಾದ್ಯಂತ ಒಟ್ಟು 1.19 ಲಕ್ಷ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದರಲ್ಲದೆ, ಇವು ಕೇವಲ ಪರೀಕ್ಷಾ ಕೇಂದ್ರಗಳಲ್ಲ, ಮಕ್ಕಳ ಸುರಕ್ಷಾ ಕೇಂದ್ರಗಳು ಎಂದು ಹೇಳಿದರು.
ಹಿಂದಿನ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ 13.5% ಇತ್ತು. ಪ್ರಸ್ತುತ ಕೋವಿಡ್ ಪಾಸಿಟಿವಿಟಿ ದರ 1.6% ರಷ್ಟಿದೆ ಎಂದರು.
ಬಹು ಆಯ್ಕೆ ಪ್ರಶ್ನೆಗಳೊಂದಿಗೆ ಹೊಸ ವಿಧಾನದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲಾಗುತ್ತಿದ್ದು, ರಾಜ್ಯದಲ್ಲಿ ಒಟ್ಟು 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಒಟ್ಟು 14,929 ಶಾಲೆಗಳಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿ ನೀಡಲಾಗಿದ್ದು, ಪ್ರವೇಶ ಪತ್ರಗಳನ್ನು ಪಡೆಯಲು ಸಮಸ್ಯೆಗಳಾದ್ದಲ್ಲಿ ಬಿಇಓ ಗಳು ಪ್ರವೇಶ ಪತ್ರಗಳನ್ನು ನೀಡುವಂತೆ ಸೂಚಿಸಲಾಗಿದೆ ಎಂದರು.
ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದು, ತರಗತಿಗಳಲ್ಲಿ ಹೆಚ್ಚಿನ ವಿಭಾಗಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರಲ್ಲದೆ, ದಾಖಲಾತಿ ಹೆಚ್ಚುತ್ತಿರುವ ಶಾಲೆಗಳಿಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲು ಎಲ್ಲಾ ಶಾಸಕರು, ಸಂಘ ಸಂಸ್ಥೆಗಳು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಖಾಸಗಿ ಶಾಲೆಗಳು ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರಲ್ಲದೆ, ಎಸ್.ಎಸ್.ಎಲ್.ಸಿ. ಪರೀಕ್ಷೆಯು ಸುಗಮವಾಗಿ ಹಾಗೂ ಯಶಸ್ವಿಯಾಗಿ ನಡೆಯುತ್ತದೆ ಎಂಬ ವಿಶ್ವಾಸವಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶಾಸಕ ಟಿ.ವೆಂಕಟರಮಣಯ್ಯ ಅವರು ಮಾತನಾಡಿ, ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪಬ್ಲಿಕ್ ಶಾಲೆಗಳನ್ನು ತೆರೆಯಬೇಕು ಎಂದರಲ್ಲದೆ, ತಾಲ್ಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಗಿಯನ್ನು ಮಾರಾಟ ಮಾಡಿದ್ದು, ಸರ್ಕಾರದಿಂದ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ಗಮನಕ್ಕೆ ತರಲು ಮನವಿ ಮಾಡಿದರು.
ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹಾಗೂ ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ನಗರದ ನಳಂದ ಪ್ರೌಢಶಾಲೆ, ಕೊಂಗಾಡಿಯಪ್ಪ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಭೇಟಿ ನೀಡಿ, ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಕೈಗೊಂಡಿರುವ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು.
ಎಪಿಎಂಸಿ ಅಧ್ಯಕ್ಷ ವಿಶ್ವನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಮಾರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಶುಭಮಂಗಳ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..