ಚಿಕ್ಕಬಳ್ಳಾಪುರ: ಸ್ವಚ್ಛತೆ, ನೈರ್ಮಲ್ಯ, ಹಸರೀಕರಣ, ನೀರು ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನಿತರ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ ಕಾಲೇಜುಗಳಿಗೆ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯವು ಮಹಾತ್ಮಾಗಾಂಧಿ ನ್ಯಾಷಿನಲ್ ಕೌನ್ಸಿಲ್ ಆಫ್ ರೂರಲ್ ಎಜುಕೇಷನ್(MGNCRE) ವಿಭಾಗದ ಮೂಲಕ ನೀಡಲಾಗುವ 2020-21ನೇ ಸಾಲಿನ ‘One District One Green Champion’ ಪ್ರಶಸ್ತಿಗೆ ಜಿಲ್ಲೆಯ ಚಿಂತಾಮಣಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರವು ಭಾಜನವಾಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಕಾಲೇಜಿನ ಪ್ರಾಂಶುಪಾಲರು ಹಾಗೂ ಎನ್ಎಸ್ಎಸ್ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಡಿಯೋ ಸಂವಾದ ಸಭೆಯಲ್ಲಿ ಶುಭ ಕೋರುವ ಮೂಲಕ ಅಭಿನಂದನೆ ತಿಳಿಸಿದ ಅವರು, ಕಾಲೇಜು ಇನ್ನಷ್ಟು ಉತ್ತಮ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಇತರೆ ಕಾಲೇಜುಗಳಿಗೆ ಮಾದರಿಯಾಗಬೇಕು ಎಂದು ಶ್ಲಾಘಿಸಿದರು.
ಗಡಿ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಯಾವುದೇ ಶಾಶ್ವತ ನದಿ ಮೂಲಗಳಿಲ್ಲ. ಇಲ್ಲಿ 1500 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದಂತ ಪರಿಸ್ಥಿತಿ. ಹೀಗಿರುವಾಗ ಜಿಲ್ಲೆಯಲ್ಲಿ ಮಳೆ ನೀರಿನ ಸಂರಕ್ಷಣೆ ಅತಿ ಮುಖ್ಯವಾಗಿದೆ. ಈ ದಿಸೆಯಲ್ಲಿ ಕಾಲೇಜಿನ ಎನ್ಎಸ್ಎಸ್ ವಿಭಾಗದ ವಿದ್ಯಾರ್ಥಿಗಳು ನೀರಿನ ಸಂರಕ್ಷಣೆ ಒಳಗೊಂಡಂತೆ ಸ್ವಚ್ಛತೆ, ನೈರ್ಮಲ್ಯ, ಹಸರೀಕರಣ, ಸಮರ್ಪಕ ತ್ಯಾಜ್ಯ ನಿರ್ವಹಣೆ, ಸೋಲಾರ್ ಮೂಲಕ ಎಲ್ಇಡಿ ಲೈಟ್ ಗಳ ಅಳವಡಿಕೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಸ್ವಚ್ಛತೆ, ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.
2020-21ನೇ ಸಾಲಿನ ಈ ಪ್ರಶಸ್ತಿಗೆ ದೇಶಾದ್ಯಂತ ವಿವಿಧ ರಾಜ್ಯಗಳ ಸುಮಾರು 400 ಕಾಲೇಜುಗಳು ಭಾಗಿಯಾಗಿದ್ದವು. ಈ ಪೈಕಿ ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರವು ಉತ್ತಮ ನಿರ್ವಹಣೆ ಮಾಡುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ವಿಡಿಯೋ ಸಂವಾದದಲ್ಲಿ MGNCRE ಅಧ್ಯಕ್ಷರಾದ ಡಾ.ಡಬ್ಲ್ಯೂ.ಜಿ.ಪ್ರಸನ್ನಕುಮಾರ್, ಕಾರ್ಯಕ್ರಮದ ಸಂಯೋಜಕರಾದ ಮೆಲ್ವಿಯನ್ ನೂರ್ಹಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲರಾದ ಡಾ.ಕೆ.ಶಾರದ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಎನ್ಎಸ್ಎಸ್ ಮುಖ್ಯಸ್ಥರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..