ದೊಡ್ಡಬಳ್ಳಾಪುರ: ಎತ್ತಿನಹೊಳೆ ಬರುವ ನೀರು ಸಂಗ್ರಹಕ್ಕಾಗಿ ನಿರ್ಮಾಣವಾಗುತ್ತಿರುವ ಬೈರಗೊಂಡ್ಲು ಜಲಾಶಯಕ್ಕಾಗಿ ಸ್ವಾಧೀನ ಮಾಡಿಕೊಳ್ಳುತ್ತಿರುವ ಭೂಮಿ ಹಾಗೂ ಯೋಜನೆಯ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡದೆ ಸರ್ವೇ ಕಾರ್ಯ ನಡೆಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಜಲಾಶಯ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುತ್ತಿರುವ ಗ್ರಾಮಗಳ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಶ್ರೀರಾಮನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಭೂಮಿ ಕಳೆದುಕೊಳ್ಳುತ್ತಿರುವ ರೈತರಾದ ಗೋವಿಂದರಾಜು, ನರಸಿಂಗೌಡ, ಮುತ್ತರಾಯಪ್ಪ ಮಾತನಾಡಿ, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ವಿರೋಧವಾಗಿ ನಡೆದುಕೊಳ್ಳುವ ಅಧಿಕಾರ ಯಾವುದೇ ಚುನಾಯಿತ ಜನಪ್ರತಿನಿಧಿಗೆ, ಅಧಿಕಾರಿಗಳಿಗೆ ಇಲ್ಲ.
ಎತ್ತಿನಹೊಳೆ ಜಲಾಶಯ ನಿರ್ಮಾಣಕ್ಕಾಗಿ ಈ ಭಾಗದಲ್ಲಿ ಭೂ ಸ್ವಾಧೀನ ಮಾಡಬಾರದು ಎಂದು ಪ್ರಾರಂಭದ ದಿನಗಳಿಂದಲು ವಿರೋಧ ವ್ಯಕ್ತಪಡಿಸುತ್ತಲೇ ಬರುತ್ತಿದ್ದೇವೆ. ಸರ್ಕಾರದಿಂದ ಈ ಭಾಗದ ಯಾರೊಬ್ಬ ರೈತರಿಗು ಅಧಿಕೃತವಾಗಿ ಭೂಸ್ವಾಧಿನ ಕುರಿತು ನೋಟಿಸ್ ಜಾರಿಯಾಗಿಲ್ಲ. ಆದರೆ ಎತ್ತಿನಹೊಳೆ ಯೋಜನೆ ವಿಶೇಷ ಭೂಸ್ವಾಧೀನ ಕಚೇರಿಯಲ್ಲಿ ಮಾತ್ರ ಯಾವ ಗ್ರಾಮಗಳ, ಯಾವ ಸರ್ವೇ ನಂಬರ್ ಗಳ ಭೂಮಿ ಸ್ವಾಧಿನಕ್ಕೆ ಒಳಪಡುತ್ತದೆ, ಯಾವ ಗ್ರಾಮಗಳು ಜಲಾಶದಲ್ಲಿ ಮುಳುಗಡೆಯಾಗಲಿವೆ ಎನ್ನುವ ನೀಲಿ ನಕ್ಷೆಯನ್ನು ಸಾರ್ವಜನಿಕರ ಗಮನಕ್ಕಾಗಿ ಪ್ರಕಟಿಸಲಾಗಿದೆ.
ರೈತರ ಒಪ್ಪಿಗೆ, ಅನುಮತಿ ಇಲ್ಲದೆಯೇ ಬಲವಂತವಾಗಿ ಸರ್ವೇ ಕೆಲಸ ಮಾಡಲಾಗುತ್ತಿದೆ. ಸರ್ವೇ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಹಾಗೂ ತಮ್ಮ ಜಮೀನು ಸರ್ವೇ ನಡೆಸದಂತೆ ತಡೆಯುವ ರೈತರ ವಿರುದ್ಧ ದೂರು ದಾಖಲಿಸುವಂತೆ ಅಧಿಕಾರಿಗಳು ಸೂಚಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಆಡಳಿತ ವ್ಯವಸ್ಥೆಯಾಗಿದೆ. ಪ್ರಾಣಕೊಟ್ಟಾದರು ಸರಿ ನಮ್ಮ ಜಮೀನು, ಊರುಗಳು ಮುಳುಗಡೆಯಾಗದಂತೆ ಉಳಿಸಿಕೊಳ್ಳಲು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೊಸ ಡಿಪಿಆರ್: ಜಲಾಶಯ ನಿರ್ಮಾಣಕ್ಕೆ ಭೂಸ್ವಾಧಿನ ವಿರೋಧಿಸಿ ರೈತರ ಪ್ರತಿಭಟನೆ ಹೆಚ್ಚಾದ ಹಿನ್ನೆಲೆಯಲ್ಲಿ ಕೊರಟಗೆರೆ ಭಾಗದಲ್ಲಿನ ಗ್ರಾಮಗಳ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಪೈಪ್ಲೈನ್ ಹಾಕುವ ಸಂದರ್ಭದಲ್ಲಿ ಆದರೆ ಪ್ರತಿಭಟನೆ ನಡೆಸದೇ ಸುಮ್ಮನ್ನಿದ್ದ ಭಾಗದಲ್ಲಿನ ಗ್ರಾಮಗಳ ರೈತರ ಜಮೀನು ಮಾತ್ರ ಸ್ವಾಧೀನ ಮಾಡಿಕೊಂಡು ಗ್ರಾಮಗಳನ್ನು ಮುಳುಗುಡೆ ಮಾಡಲು ಹಿಸದಾಗಿ ಡಿಪಿಆರ್( ಸಮಗ್ರ ಯೋಜನಾ ವರದಿ) ಸಿದ್ದಪಡಿಸಲಾಗುತ್ತಿದೆ. ಈ ಬಗ್ಗೆ ಸರ್ವೇ ಇಲಾಖೆ ಅಧಿಕಾರಿಗಳು ಸಿದ್ದಪಡಿಸುವ ನಕ್ಷೆಯು ಲಭ್ಯವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ರೈತರು, ಕೊರಟಗೆರೆ ತಾಲ್ಲೂಕಿನ ಗ್ರಾಮಗಳನ್ನು ಕೈಬಿಟ್ಟಂತೆ ನಮ್ಮ ಗ್ರಾಮಗಳನ್ನು ಭೂ ಸ್ವಾಧಿನದಿಂದ ಕೈಬಿಡಬೇಕು. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯೇ ಅವೈಜ್ಞಾನಿಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯು ಸತ್ಯವಾಗಿದೆ ಎಂದರು.
ಪರ್ಯಾಯಗಳು ಇವೆ: ಸುಮಾರು ಏಳು ಸಾವಿರ ಜನರನ್ನು ನಿರಾಶ್ರಿತರನ್ನಾಗಿ ಮಾಡುವ ಎತ್ತಿನಹೊಳೆ ನೀರುಸಂಗ್ರಹದ ಬೈರಗೊಂಡ್ಲು ಜಲಾಶಯ ನಿರ್ಮಿಸದೆ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಪರ್ಯಾಯ ಮಾರ್ಗಗಳು ಸಾಕಷ್ಟು ಇವೆ. ಬೈರಗೊಂಡ್ಲು ಜಲಾಶಯ ಸುತ್ತಲಿನ ಕೊರಟಗೆರೆ ತಾಲ್ಲೂಕಿನ ತೀತಾ ಡ್ಯಾಂ, ಮಾವತ್ತೂರು ಕೆರೆ ಸೇರಿದಂತೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇರುವ ಬೃಹತ್ ಕೆರೆಗಳಲ್ಲಿ ನೀರು ಸಂಗ್ರಹ ಮಾಡಿಕೊಳ್ಳಬಹುದಾಗಿದೆ. ಇದರಿಂದ ಅಂರ್ತಜಲ ಹೆಚ್ಚಾಗಲು, ಕುಡಿಯುವ ನೀರಿನ ಭವನೆ ನೀಗಲು ಸಹಕಾರಿಯಾಗಲಿದೆ. ಒಂದೇ ಪ್ರದೇಶದಲ್ಲಿ ಸಾವಿರಾರು ಎಕರೆ ಜಮೀನು ಸ್ವಾಧಿನಮಾಡಿಕೊಳ್ಳುವುದು ತಪ್ಪಲಿದೆ ಎಂದು ರೈತರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೈತರಾದ ಗಂಗಣ್ಣ, ರಾಮಣ್ಣ, ಕೆಂಪರಾಜು ಸೇರಿದಂತೆ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..