ದೊಡ್ಡಬಳ್ಳಾಪುರ: ಭಾರತ ಬಹು ಧರ್ಮಗಳ,ಬಹುಪಂಥಗಳ ವೈವಿಧ್ಯಮಯ ಸಂಪ್ರದಾಯಗಳ ನಾಡಾಗಿದೆ. ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಇರುವ ವ್ಯತ್ಯಾಸಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಹೇಳಿದರು.
ನಗರದಲ್ಲಿ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ನ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಇಂದು ದೇಶದಲ್ಲಿ ಜಾತಿ,ಧರ್ಮ, ಮೇಲು ಕೀಳು ಮೊದಲಾದ ವಿಚಾರಗಳಿಂದ ಜನರನ್ನು ದಾರಿತಪ್ಪಿಸುವ ಕೆಲಸ ನಡೆಯುತ್ತಿವೆ. ಆರ್ಥಿಕ ರಾಜಕೀಯ ಮತ್ತು ಸಾಮಾಜಿಕ ಸಮಾನತೆಗೆ ಒತ್ತು ನೀಡುವ ಬದಲು ಮೀಸಲಾತಿ ಸಾಮಾಜಿಕ ನ್ಯಾಯ ಎಂಬ ಮಿತ ಕಲ್ಪನೆಗಳ ನಡುವೆ ಕೆಲವು ವಿಷಯಗಳನ್ನು ಮುನ್ನೆಲೆಗೆ ತರುತ್ತಿಲ್ಲ. ಇಂತಹ ಸಂದರ್ಭಸಲ್ಲಿ ವೈಜ್ಞಾನಿಕ ಸಂಶೋಧನಾ ಪರಿಷತ್ತು ವೈಜ್ಞಾನಿಕ ಮನೋಭಾವಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಾಗಿದೆ. ಎಲ್ಲಾ ಜನರಿಗೂ ವೈಜ್ಞಾನಿಕ ಚಿಂತನೆಗಳನ್ನು ಬಿತ್ತುವ ಅಗತ್ಯ ಇದೆ ಎಂಬುದನ್ನು ರಾಜ್ಯಾಂಗದಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಕೆಲಸಗಳು ಆಗಬೇಕಿದ್ದರೆ ವೈಜ್ಞಾನಿಕ ಚಿಂತನೆ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವತ್ತ ಯುವ ಮನಸ್ಸುಗಳನ್ನು ಸೃಷ್ಟಿಸಬೇಕಾಗಿದೆ. ಇದಕ್ಕೆ ಭಾರತೀಯ ಸಂವಿಧಾನದಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿರುವುದನ್ನು ಸಂವಿಧಾನ ಓದು ಮೂಲಕ ರಾಜ್ಯಾಧ್ಯಾಂತ ಚಾಲನೆ ನೀಡಲಾಗಿದೆ. ಜಾತ್ಯಾತೀತ,ಧರ್ಮಾತೀತ ವ್ಯವಸ್ಥೆಗಳನ್ನು ಸೃಷ್ಟಿಸುವ ಕೆಲಸವಾಗಬೇಕಾಗಿದೆ. ಜನಪರ ನೀತಿ ಆಚರಣೆಗಳನ್ನು ಜಾರಿಗೆ ತರಬೇಕಿದೆ ಎಂದರು.
ಪ್ರಜಾಪ್ರಭುತ್ವವು ಸಾಮಾಜಿಕ,ಆರ್ಥಿಕ,ರಾಜಕೀಯ ಏಳಿಗೆಯನ್ನು ತನ್ನ ದೇಶದ ಜನರಿಗೆ ಒದಗಿಸಿಕೊಡುವ ವ್ಯವಸ್ಥೆ ಬದುಕಿಗೆ ಸಂಬಂಧಿಸಿದ ವಿಷಯಗಳನ್ನು ಪರಿಣಾಮಕಾರಿಯಾಗಿ ಚರ್ಚಿಸಿ ಸರ್ಕಾರದ ಮುಂದಿಡಬೇಕೇ ಹೊರತು ಭಾವನಾತ್ಮಕ ಚರ್ಚೆಯಲ್ಲಿ ಮುಳುಗಬಾರದು. ಸಂವಿಧಾನದ 51ಎ ವಿಧಿಯು ವೈಜ್ಞಾನಿಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವವನ್ನು ಸಮಾಜದಲ್ಲಿ ಪಸರಿಸಬೇಕು ಎಂಬುದಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಹುಲಿಕಲ್ ನಟರಾಜ್ ವಹಿಸಿದ್ದರು.
ಪರಿಷತ್ ಉಪಾಧ್ಯಕ್ಷ ಡಾ.ಅಂಜಿನಪ್ಪ,ಪಲ್ಲವಿ ಮಣಿ, ಯಮನೂರು ಸಿದ್ದರಾಜು,ಇಂದು ಮತಿ ಸಾಲಿಮಠ,ಮಧುರ ಅಶೋಕ್, ಹಿರಿಯ ಸಾಹಿತ್ಯ ಬಿ.ಟಿ.ಲಲಿತಾನಾಯ್ಕ್, ಪ್ರಧಾನ ಕಾರ್ಯದರ್ಶಿ ಬಾಬುದಾನೀರಾ, ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ, ಕೋಶಧ್ಯಕ್ಷ ಹೊಂಬಾಳ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..