ದೊಡ್ಡಬಳ್ಳಾಪುರ: ನಗರಸಭೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸುಮಾರು 30ಕ್ಕೂ ಹೆಚ್ಚು ಮಂದಿ ಎಸಿಬಿ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆರಂಭಿಸಿರುವ ಪರಿಶೀಲನೆ ರಾತ್ರಿ 9.45 ಗಂಟೆಯ ನಂತರವು ಮುಂದುವರೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸಿಬಿ ಡಿವೈಎಸ್ಪಿ ಜಗದೀಶ್ ಅವರ ನೇತೃತ್ವದಲ್ಲಿ 10 ವಾಹನಗಳಲ್ಲಿ ಆಗಮಿಸಿರುವ ಅಧಿಕಾರಿಗಳ ತಂಡದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಸಿಬಿ ಅಧಿಕಾರಿಗಳು ಇದ್ದಾರೆ ಎನ್ನಲಾಗಿದೆ.
ಸಂಜೆ 4 ಗಂಟೆ ವೇಳೆಗೆ ನಗರಸಭೆಗೆ ಭೇಟಿ ನೀಡಿದ ಎಸಿಬಿ ಅಧಿಕಾರಿಗಳು ಕಚೇರಿಯ ಎಲ್ಲಾ ವಿಭಾಗಗಳ ಕೊಠಡಿಗಳ ಬಾಗಿಲುಗಳನ್ನು ಹಾಕಿಕೊಂಡು ಕಡತಗಳ ಪರಿಶೀಲನೆ ಆರಂಭಿಸಿದರು. ನಗರಸಭೆ ಕಚೇರಿಯ ಕಟ್ಟಡದ ಸುತ್ತಲಿನ ಕಿಟಕಿಗಳ ಬಳಿ ಕೆಲ ಎಸಿಬಿ ಪೊಲೀಸರು ಕಾವಲು ಕಾಯುತ್ತಿದ್ದ ದೃಶ್ಯ ಕಂಡು ಬಂತು.
ಕೊಠಡಿಯ ಒಳಗೆ ನಡೆಯುತ್ತಿದ್ದ ಕಡತಗಳ ಪರಿಶೀಲನೆಯನ್ನು ವಿಡಿಯೋ ಚಿತ್ರೀಕರಣ ಸಹ ಮಾಡಿಕೊಳ್ಳಲಾಗುತಿತ್ತು.
ಎಸಿಬಿ ಅಧಿಕಾರಿಗಳ ತಂಡ ಕಚೇರಿಗೆ ಭೇಟಿ ನೀಡಿದ್ದ ಸಮಯದಲ್ಲಿ ಬಹುತೇಕ ಅಧಿಕಾರಿಗಳು ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ಅಧಿಕಾರಿಗಳ ಸಹಾಯಕರಿಂದ ಮಾಹಿತಿ ಪಡೆದು ಕಡತಗಳನ್ನು ವಶಕ್ಕೆ ಪಡೆಯಲಾಗಿದೆ. ನಗರಸಭೆಯ ಅಧಿಕಾರಿಗಳು ಬಂದು ಮಾಹಿತಿ ನೀಡುವಂತೆ ಮೊಬೈಲ್ ಗಳಿಗೆ ಕರೆ ಮಾಡಿದರು ಸಹ ಬರುತ್ತಿಲ್ಲ. ಹೀಗಾಗಿ ಕಡತಗಳನ್ನು ವಶಕ್ಕೆ ಪಡೆದು ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರಸಭೆಯಲ್ಲಿನ ಕಂದಾಯ, ಆರೋಗ್ಯ ಹಾಗೂ ಎಂಜಿನಿಯರ್ ವಿಭಾಗಕ್ಕೆ ಸಂಬಂಧಿಸಿದಂತೆಯೇ ಹೆಚ್ಚಿನ ದೂರುಗಳು ಇದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಮಯ ಈ ವಿಭಾಗದ ಕೊಠಡಿಗಳಲ್ಲೇ ನಡೆಯುತ್ತಿದೆ ಎನ್ನಲಾಗಿದೆ.
ಕಂದಾಯ ವಿಭಾಗ ಸೇರಿದಂತೆ ಹತ್ತಾರು ವರ್ಷಗಳಿಂದಲು ಇಲ್ಲಿಯೇ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡದ ಹೊರತು ನಗರಸಭೆಯಲ್ಲಿ ಭ್ರಷ್ಟಾಚಾರ ಕಡಿವಾಣ ಹಾಕಲು ಸಾಧ್ಯವಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……