ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ಅನುದಾನವನ್ನು ಬಳಸಬೇಕೆಂಬ ಶಾಸಕ ಟಿ.ವೆಂಕಟರಮಣಯ್ಯ ಅವರ ಮನವಿ ಅನ್ವಯ ಸುಮಾರು 55 ಲಕ್ಷ ಅನುದಾನದಲ್ಲಿ, ಆರೂಢಿ ಗ್ರಾಮದ ಸರ್ಕಾರಿ ಶಾಲೆಗೆ 4 ಸುಸಜ್ಜಿತವಾದ ಕಟ್ಟಡ ಹಾಗೂ ಒಂದು ಶೌಚಾಲಯ ನಿರ್ಮಿಸಲಾಗುತ್ತಿದೆ ಎಂದು ಎಜಾಕ್ಸ್ ಕಂಪನಿಯ ಎಚ್.ಆರ್.ಮುಖ್ಯಸ್ಥ ಗಣಪತಿ ತಿಳಿಸಿದರು.
ತಾಲೂಕಿನ ಆರೂಢಿ ಗ್ರಾಮದ ಸರ್ಕಾರಿ ಮಾದರಿ ಪಾಠ ಶಾಲೆ ಆವರಣದಲ್ಲಿ ಎಜಾಕ್ಸ್ ಇಂಜನಿಯರಿಂಗ್ ಪ್ರೈ.ಲಿ ಸಂಸ್ಥೆಯ ಸಿಎಸ್ ಆರ್ ಕಾರ್ಯಕ್ರಮದಡಿಯಲ್ಲಿ ಎಜಾಕ್ಸ್ ಇಂಜನಿಯರಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನೂತನ ನಾಲ್ಕು ಶಾಲಾ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಕಂಪನಿ ಉತ್ಪಾದನೆಗೆ ನೀಡುವ ಮಹತ್ವವನ್ನು ಸಿಎಸ್ ಆರ್ ಅನುದಾನವನ್ನು ಜನಪರ ಕಾರ್ಯಕ್ಕೆ ಬಳಸಲು ಸಹ ಅಷ್ಟೇ ಒತ್ತು ನೀಡಲಾಗುತ್ತಿದೆ, ಇದಕ್ಕೆ ಮುಖ್ಯ ಕಾರಣ ಶಾಸಕ ಟಿ.ವೆಂಕಟರಮಣಯ್ಯ. ಅವರು ಪ್ರತಿ ಕಾರ್ಯಕ್ರಮದಲ್ಲಿ ಸಾಸಲು ಹೋಬಳಿಗೆ ಹೆಚ್ಚಿನ ನೆರವು ನೀಡುವಂತೆ ಮಾಡುತ್ತಿದ್ದ ಮನವಿಯನ್ವಯ ಆರೂಢಿಯಲ್ಲಿ ನಾಲ್ಕು ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಮಾಜಿ ಸಚಿವ ವೀರಪ್ಪಮೊಯ್ಲಿಯವರ ದೂರ ದೃಷ್ಟಿಯಿಂದ ಕೈಗಾರಿಕಾ ಕಂಪನಿಗಳು ಸಿಎಸ್ಆರ್ ಅನುದಾನ ಮೀಸಲಿಟ್ಟು ಸ್ಥಳೀಯ ಪ್ರದೇಶಗಳನ್ನು ಅಭಿವೃದ್ಧಿ ಮಾಡುತ್ತಿವೆ.
ಈ ಮುಂಚೆ ಕೈಗಾರಿಕಾ ಪ್ರದೇಶಕ್ಕೆ ಮೀಸಲಾಗಿದ್ದ ಕಾರ್ಯಕ್ರಮಗಳು, ಇತರೆ ಪ್ರದೇಶಗಳಿಗೂ ವಿಸ್ತರಿಸುವಂತೆ ಪದೇ ಪದೇ ಮಾಡಲಾದ ಮನವಿಗೆ ಸ್ಪಂದಿಸಿ ಇಂಡೋ ಮಿಮ್, ಎಜಾಕ್ಸ್, ಟಫೆ, ಎಲ್ ಅಂಡ್ ಟಿ ಕಂಪನಿಗಳು ತಾಲೂಕಿನ ಹಲವು ಗ್ರಾಮಗಳಲ್ಲಿ ಶಾಲಾ ಕಟ್ಟಡ, ಕುಡಿಯುವ ನೀರಿನ ಟ್ಯಾಂಕ್, ಕರೊನಾ ಸಂದರ್ಭದಲ್ಲಿ ಆಕ್ಸಿಜನ್ ಕಾನ್ಸ್ಟ್ರೇಟರ್ ಸೇರಿದಂತೆ ಹಲವು ನೆರವು ನೀಡುವ ಮೂಲಕ ಮನವಿಗೆ ಸ್ಪಂದಿಸಿ ಜನಪರ ಕಾಳಜಿ ತೋರಿವೆ ಎಂದರು.
ಗ್ರಾಪಂ ಅಧ್ಯಕ್ಷೆ ಜಯಮ್ಮಪ್ರಭು ಮಾತನಾಡಿ, ಸಾಸಲು ಹೋಬಳಿ ವ್ಯಾಪ್ತಿಯಲ್ಲಿ ಪದವಿ ಪೂರ್ವ ಕಾಲೇಜು ಇಲ್ಲದೆ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ. ಇಂದು ಶಾಸಕರಾದಿಯಾಗಿ, ತಹಶಿಲ್ದಾರ್, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದು ಇಲ್ಲಿನ ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಸಲು ಹೋಬಳಿಗೆ ತ್ವರಿತವಾಗಿ ಕಾಲೇಜು ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಶಾಸಕ ಟಿ.ವೆಂಕಟರಮಣಯ್ಯ ಸಾಸಲು ಹೋಬಳಿಗೆ ಕಾಲೇಜ್ ಬೇಕೆಂಬ ಮನವಿ ಬಹು ವರ್ಷಗಳ ಬೇಡಿಕೆಯಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಕಡೆಗಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಟಿ.ಎಸ್.ಶಿವರಾಜ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ, ಕ್ಷೇತ್ರಶಿಕ್ಷಣಾಧಿಕಾರಿ ಶುಭಮಂಗಳ, ಗ್ರಾಮಪಂಚಾಯಿತಿ ಪಿಡಿಒ ಸೌಭಾಗ್ಯಮ್ಮ, ಎಜಾಕ್ಸ್ ಕಂಪನಿಯ ಸಿಎಸ್ ಆರ್ ಅಧಿಕಾರಿ ಮಂಜುನಾಥ್, ರಿಯಾಝ್, ಮುರುಗನ್, ಮೋಹನ್, ಗೋವಿಂದ ರಾಜ್ ಭಟ್ ಸೇರಿದಂತೆ ಗ್ರಾಪಂ ಸದಸ್ಯರು, ಸ್ಥಳೀಯ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……