ದೊಡ್ಡಬಳ್ಳಾಪುರ: ದೇಶದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದ ಮೂರು ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಹಿನ್ನಲೆಯಲ್ಲಿ ರಾಜ್ಯ ರೈತ ಸಂಘ, ಪ್ರಾಂತ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ರೈತರು ನಗರದಲ್ಲಿ ಸಂಭ್ರಮಾಚರಣೆ ಮಾಡಿದರು.
ನಗರದ ಸಿದ್ದಲಿಂಗಯ್ಯ ವೃತ್ತ ಹಾಗೂ ತಾಲೂಕು ಕಚೇರಿ ವೃತ್ತದಲ್ಲಿ ಸೇರಿದ್ದ ಸಂಘಟನೆಗಳ ಕಾರ್ಯಕರ್ತರು, ತಮಟೆ ನಾದಕ್ಕೆ ಕುಣಿದು, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಒಂದೂವರೆ ವರ್ಷದ ಸುದೀರ್ಘ ಹೋರಾಟದ ನಂತರ ರೈತರ ಪ್ರತಿಭಟನೆಗೆ ಜಯ ಸಂದಿರುವುದು ಸಮಾಧಾನಕರ ಸಂಗತಿ. ಈ ಸುದೀರ್ಘ ಹೋರಾಟದಲ್ಲಿ ಮಡಿದ 700ಕ್ಕೂ ಹೆಚ್ಚು ರೈತರನ್ನು ಹುತಾತ್ಮರು ಎಂದು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು. ಜೊತೆಗೆ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕಿದೆ. ನಿಜಕ್ಕೂ ಕರಾಳ ಕಾಯ್ದೆಗಳ ವಾಪಸಾತಿ ರೈತರ ವಿಜಯ ಮತ್ತು ಐತಿಹಾಸಿಕ. ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಯಲ್ಲಿ ಅನ್ನದಾತರು ಪ್ರತಿಭಟನೆ ನಡೆಸಿದರು. ಕೇಂದ್ರವು ಅವರ ಮೇಲೆ ಅಮಾನವೀಯ ಕ್ರೌರ್ಯ ನಡೆಸಿತು. ಅನೇಕ ಅಮೂಲ್ಯ ಜೀವಗಳ ನೆತ್ತರು ಹರಿಯಿತು. ಚಳಿ, ಮಳೆ, ಬಿಸಿಲೆನ್ನದೇ ರೈತರು ಹೋರಾಡಿದರು. ಇದು ರೈತರ ಹೋರಾಟಕ್ಕೆ ಸಿಕ್ಕ ಪ್ರತಿಫಲ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಕೇಂದ್ರದ ನಿರ್ಧಾರ ಪ್ರಾಮಾಣಿಕವಾಗಿರಲಿ. ಕೇವಲ ಮತ ಗಳಿಸುವ ಉದ್ದೇಶವಾಗದಿರಲು. ಯಾವುದೇ ಕಾರಣಕ್ಕೂ ಕಾಯ್ದೆಯ ಅಂಶಗಳನ್ನು ತಿದ್ದುಪಡಿ ಮಾಡುವುದು ಬೇಡ ಎಂದರು.
ಸಂಭ್ರಮಾಚರಣೆಯಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ, ಶಿವರಾಜ್‍ಕುಮಾರ್ ಕನ್ನಡ ಸೇನಾ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಘಟಕ, ಕರ್ನಾಟಕ ಪ್ರಾಂತ ರೈತ ಸಂಘ, ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……