ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರದಿಂದ ಹೊರಡಿಸಿರುವ ಆದೇಶದನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ವಿವಿಧ ನಿರ್ಬಂಧಗಳನ್ನು ವಿಧಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಆದೇಶಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಎಲ್ಲಾ ಹೊರರಾಜ್ಯ ಜಿಲ್ಲೆಗಳ ಗಡಿಗಳಲ್ಲಿ ಕಟ್ಟೆಚ್ಚರ ಹಾಗೂ ಜಿಲ್ಲಾ ವ್ಯಾಪ್ತಿಯ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಗಿ ವಿಚಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ 16 ದಿನಗಳ ಹಿಂದೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದ್ದು, ಕೇರಳ ಮತ್ತು ಮಹಾರಾಷ್ಟ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಗಮಿಸುವವರಿಗೆ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಒಳಪಡಿಸಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿರುವ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ, 16 ದಿನಗಳ ಹಿಂದೆ ವಿದೇಶದಿಂದ ಜಿಲ್ಲೆಗೆ ಆಗಮಿಸಿದವರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಳ್ಳಬೇಕು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸಾಮಾಜಿಕ ಗುಂಪು, ಗುಂಪಾಗಿ ಪ್ರತಿಭಟನೆ ಅಥವಾ ಮುಷ್ಕರಕ್ಕೆ ಎರಡು ಗಂಟೆಗಿಂತ ಹೆಚ್ಚು ಅವಧಿ ಒಂದೇ ಸ್ಥಳದಲ್ಲಿ ಸೇರುವಂತಿಲ್ಲ ಹಾಗೂ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ನಿಯಮಗಳನ್ನು ಪಾಲಿಸಬೇಕು.
ಹೋಟೆಲ್, ರೆಸ್ಟೋರೆಂಟ್‌ಗಳು, ಸಿನಿಮಾ ಹಾಲ್‌ಗಳು, ಈಜುಕೊಳ, ಸಾರ್ವಜನಿಕ ಗ್ರಂಥಾಲಯ, ಮಾಲ್‌ಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನೇಷನ್ ಪಡೆದಿರಬೇಕು.
ಕೋವಿಡ್-19ರ ನಿಯಂತ್ರಣ ಕ್ರಮಗಳನ್ನು ಯಾವುದೇ ವ್ಯಕ್ತಿ ಉಲ್ಲಂಘಿಸಿದ್ದಲ್ಲಿ, ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಕಲಂ 51 ರಿಂದ 60ರ ಜೊತೆಗೆ, ಭಾರತೀಯ ದಂಡಸಂಹಿತೆ ಕಲಂ 188ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….