ಚಿಕ್ಕಬಳ್ಳಾಪುರ: ಗ್ರಾಮ ಹಾಗೂ ವಾರ್ಡ್ ಮಟ್ಟದ ಕೋವಿಡ್ ನಿಯಂತ್ರಣ ಟಾಸ್ಕ್ ಪೋರ್ಸ್ ಸಮಿತಿಗಳ ಕಾರ್ಯ ಚಟುವಟಿಕೆಗಳನ್ನು ಮತ್ತೆ ಹಿಂದಿನಂತೆಯೇ ಚುರುಕುಗೊಳಿಸಿ ಕೋವಿಡ್ ಸಕಾರಾತ್ಮಕ ಪ್ರಕರಣಗಳು ಜಿಲ್ಲೆಯಲ್ಲಿ ಹರಡದಂತೆ ನೋಡಿಕೊಳ್ಳಬೇಕು ಅದರಲ್ಲೂ ವಿದೇಶಗಳಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇಡಬೇಕು.ಆ ನಿಟ್ಟಿನಲ್ಲಿ ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ನೋಡಲ್ ಅಧಿಕಾರಿಗಳು ಕಟ್ಟುನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್ ನ ರೂಪಾಂತರ ತಳಿ ಓಮಿಕ್ರಾನ್ ವೈರಾಣು ಸೋಂಕು ಹರಡದಂತೆ ತಡೆಗಟ್ಟುವ ಕುರಿತ ಆನ್ ಲೈನ್ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಜಿಲ್ಲೆಯಲ್ಲಿ ಗ್ರಾಮ ಮತ್ತು ವಾರ್ಡ್ ಮಟ್ಟದ ಕೋವಿಡ್ ನಿಯಂತ್ರಣ ಟಾಸ್ಕ್ ಪೋರ್ಸ್ ಸಮಿತಿಗಳು ಸಕ್ರೀಯವಾಗಿದ್ದು, ಪ್ರಸ್ತುತ ತಮ್ಮ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸುವಂತೆ ಸೂಚಿಸಿದರು.
ರಾಜ್ಯದಲ್ಲಿ ಎರಡು ಓಮಿಕ್ರಾನ್ ವೈರಾಣು ಸೋಂಕು ಇರುವುದು ಪತ್ತೆಯಾಗಿದೆ. ಆ ಎರಡು ಪ್ರಕರಣಗಳು ಬೆಂಗಳೂರಿನಲ್ಲಿಯೇ ದಾಖಲಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯು ಬೆಂಗಳೂರಿಗೆ ಅತೀ ಹತ್ತಿರದ ಜಿಲ್ಲೆಯಾಗಿದ್ದು, ಉದ್ಯೋಗ ಮತ್ತು ಇನ್ನಿತರ ಕಾರ್ಯಗಳಿಗೆ ಪ್ರತಿನಿತ್ಯ ಹೋಗಿಬರುವುದರಿಂದ ಈ ಸೋಂಕು ಜಿಲ್ಲೆಗೆ ಹರಡದಂತೆ ಹೆಚ್ಚಿನ ನಿಗಾವಹಿಸುವುದು ಅತ್ಯಗತ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಕೇವಲ 5 ಕೋವಿಡ್ ಸಕ್ರೀಯ ಪ್ರಕರಣಗಳಿದ್ದು, ಆ ಪ್ರಕರಣಗಳನ್ನು ಶೂನ್ಯಕ್ಕೆ ತರಲು ಶ್ರಮಿಸಬೇಕಾಗಿದೆ. ಅಲ್ಲದೇ ಕೋವಿಡ್ ಪ್ರಕರಣಗಳು ಪಸರಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪ್ರತಿ 15 ದಿನಕ್ಕೊಮ್ಮೆ ಕೆಲವು ಸಮುದಾಯಗಳಲ್ಲಿ (Torgeted Groups) ಯಾದೃಚ್ಛಿಕವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಬೇಕಾಗಿದೆ. ಹೋಟೆಲ್, ಬೇಕರಿ, ಸಿನಿಮಾ ಚಿತ್ರ ಮಂದಿರ, ಮಾರುಕಟ್ಟೆಗಳ ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡುವವರಿಗೆ ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆ ಆಗಿರುವ ಬಗ್ಗೆ ಕಾರ್ಯಪಡೆಗಳ ಸದಸ್ಯರು ಖಚಿತಪಡಿಸಿಕೊಳ್ಳಬೇಕು ಜೊತೆಗೆ ನಿಯಮಿತವಾಗಿ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕು ಎಂದರು.
ಪೋಷಕರು ಎರಡು ಡೋಸ್ ಲಸಿಕೆ ಪಡೆದರಷ್ಟೆ ಅವರ ಮಕ್ಕಳು ಶಾಲೆಗೆ: ಶಾಲಾ ಕಾಲೇಜುಗಳಿಗೆ ತೆರಳುವ 18 ವರ್ಷದೊಳಗಿನ ಮಕ್ಕಳ ತಂದೆ ತಾಯಿ ಹಾಗೂ ಅವರ ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರೆಲ್ಲರೂ ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರಲೇಬೇಕು. ಅವರೆಲ್ಲರೂ ಲಸಿಕೆ ಪಡೆದಿರುವ ಬಗ್ಗೆ ಶಾಲಾ ಮುಖ್ಯಸ್ಥರು, ಶಿಕ್ಷಕರು, ಮಾಹಿತಿಯನ್ನು ಮಕ್ಕಳಿಂದ ಮಾಹಿತಿ ಪಡೆಯಬೇಕು. 2 ಡೋಸ್ ಲಸಿಕೆ ಪಡೆದಿರುವ ವಿವರವನ್ನು ಪೋಷಕರಿಂದ ಕೂಡಲೇ ಪಡೆದು ಖಾತರಿ ಪಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅವರ ಕಾರ್ಯ ವೈಖರಿ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಿದರು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಸುವ ಸಾಂಸ್ಕೃತಿಕ ಚಟುವಟಿಕೆಗಳು/ಹಬ್ಬಗಳು ಮತ್ತು ಸಮಾರಂಭಗಳನ್ನು 15ನೇ ಜನವರಿ 2022ರ ವರೆಗೆ ಮುಂದೂಡುವಂತೆ ತಿಳಿಸಿದರು.
ದಂಡ ವಿಧಿಸಿ: ಕೋವಿಡ್ ನಿಯಂತ್ರಣ ಕ್ರಮವಾಗಿ ಮುಖ್ಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಆಗಿದ್ದಾಗ್ಗೆ ಕೈಗಳನ್ನು ಶುಚಿಗೊಳಿಸುವುದು ಸೇರಿದಂತೆ, ಕೋವಿಡ್ ನ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಯಾವುದೇ ವ್ಯಕ್ತಿಯು ಮುಖಗವಸವನ್ನು ಧರಿಸದಿರುವುದು ಕಂಡುಬಂದಲ್ಲಿ ನಗರ ಪ್ರದೇಶಗಳಲ್ಲಿ 250, ಗ್ರಾಮೀಣ ಪ್ರದೇಶಗಳಲ್ಲಿ 100 ರೂಗಳ ದಂಡವನ್ನು ಯಾವುದೇ ಮುಲಾಜಿಲ್ಲದಂತೆ ದಂಡ ವಿಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎರಡೂ ಡೋಸ್ ಪಡೆದರಷ್ಟೇ ಪ್ರವೇಶ: ಆರೋಗ್ಯ ಕಾರ್ಯಕರ್ತರು, 65 ವಯಸ್ಸು ಮೀರಿದ ಹಿರಿಯ ನಾಗರಿಕರು ಮತ್ತು ಸಹವರ್ತಿ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕಡ್ಡಾಯವಾಗಿ ಕೊವಿಡ್-19 ತಪಾಸಣೆ ನಡೆಸಬೇಕು. ಎರಡು ಡೋಸ್ ಕೊವಿಡ್-19 ಲಸಿಕೆ ಪಡದಿರುವಂತಹ ವ್ಯಕ್ತಿಗಳಿಗೆ ಮಾತ್ರ ಮಾಲ್‌ಗಳು, ಸಿನಿಮಾ ಹಾಲ್/ಚಿತ್ರ ಮಂದಿರಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಬೇಕು. ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಎರಡು ಡೋಸ್ ಕೋವಿಡ್-19ರ ಲಸಿಕೆಯನ್ನು ಪಡೆದಿದ್ದರೇ ಮಾತ್ರ ಕಚೇರಿಗೆ ಹಾಜರಾಗಬೇಕು. ಈ ನಿಟ್ಟಿನಲ್ಲಿ ಕೋವಿಡ್ ನೋಡಲ್ ಅಧಿಕಾರಿಗಳು ನಿಗಾವಹಿಸಬೇಕು ಎಂದರು.
ಕೋವಿಡ್ ಆರೈಕೆ ಕೇಂದ್ರ ಸಿದ್ದವಿಟ್ಟುಕೊಳ್ಳಿ: ಬಾಯಾರಿಕೆಯಾದಾಗ ಬಾವಿ ತೋಡಿ ನೀರುಣಿಸುವ ಕೆಲಸ ಆಗಬಾರದು. ಒಂದೇ ಕಡೆ ಮೂರು ಪ್ರಕರಣಗಳು ಕಂಡುಬಂದರೆ ಒಂದು ಕ್ಲಸ್ಟರ್ ಮಾಡಿ, ಕೋವಿಡ್ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಕೋವಿಡ್ ಪಸರಿಸದಂತೆ ಕ್ರಮವಹಿಸಬೇಕು. ಪ್ರತಿ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಯಲ್ಲಿ ಬಳಸುವ ಆಕ್ಸಿಜನ್ ಪೂರೈಕೆ, ಹಾಸಿಗೆಗಳ ಲಭ್ಯತೆ, ಔಷಧಿಗಳ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಬೇಕು. ಪ್ರತಿ ತಾಲ್ಲೂಕಿಗೆ ಒಂದು ಕೋವಿಡ್ ಕಾಳಜಿ ಕೇಂದ್ರವನ್ನು ಸಿದ್ದವಿಟ್ಟಿಕೊಳ್ಳಬೇಕು ಎಂದು ತಾಲ್ಲೂಕು ಮಟ್ಟದ ಕೋವಿಡ್ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಜನಸಂದಣಿ ಪ್ರದೇಶಗಳಲ್ಲಿ ಮಾರುಕಟ್ಟೆ ಮತ್ತು ಸಂತೆ ನಡೆಯು ಸ್ಥಳಗಳಲ್ಲಿ ಹಾಗೂ ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿಸಿದವರಿಗೆ ನಿಯಮಾವಳಿ ರೀತ್ಯಾ ಕಾನೂನು ಕ್ರಮ ಜರುಗಿಸಲು ಈಗಾಗಲೇ ನಮ್ಮ ಸಿಬ್ಬಂದಿಗೆ ಸೂಚಿಸಿದ್ದೇನೆ. ಆದ್ದರಿಂದ ಜಿಲ್ಲೆಯ ಜನರು ಸಭೆ, ಸಮಾರಂಭಗಳಲ್ಲಿ ಭಾಗವಹಿಸುವಾಗ ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಮಾಸ್ಕ್ ಧರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ರವರು ಮಾತನಾಡಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ, ಚುನಾಯಿತ ಪ್ರತಿನಿಧಿಗಳು ಕಡ್ಡಾಯವಾಗಿ ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರಬೇಕು. ಹಿಂದಿನಂತೆ ಕೋವಿಡ್ ನಿಯಂತ್ರಣದ ಟಾಸ್ಕ್ ಪೋರ್ಸ್ ನ ಕಾರ್ಯ ಪಡೆಗಳ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ವಾಹನಗಳನ್ನು ಬಳಸಿಕೊಂಡು ಕೋವಿಡ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಬಗ್ಗೆ ಪ್ರಚಾರ ಮಾಡಬೇಕು. ತಮ್ಮ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಸ್ಯಾನಿಟೈಸ್ ಮಾಡಿಸಬೇಕು. ನಿಗಧಿತ ರೀತಿಯಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ನಡೆಸಬೇಕು. ಅದರಲ್ಲೂ ಟಮೋಟೋ ಮತ್ತು ರೇಷ್ಮೆ ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಹೆಚ್ಚಾಗಿ ಜಾರಿಗೊಳಿಸಬೇಕು ಎಂದರು.
ಆನ್ ಲೈನ್ ಸಂವಾದ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್ ಕಬಾಡೆ, ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್ ಗಳು, ಇ.ಓ.ಗಳು, ಕೋವಿಡ್ ನಿಯಂತ್ರಣ ನೋಡಲ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….