ಚಿಕ್ಕಬಳ್ಳಾಪುರ: ಕೇಂದ್ರ ಮೀಸಲು ಪೋಲಿಸ್ ಪಡೆಯ (CRPF) ಯೋಧರಾದ ಟಿ.ಜಿ.ಸತೀಶ್ ಅವರು ಕರ್ತವ್ಯದ ವೇಳೆ ಕನಿಷ್ಠ ತಾಪಮಾನದ ಕಾರಣ, ರಕ್ತ ಹೆಪ್ಪುಗಟ್ಟಿ ಅಸ್ವಸ್ಥತರಾಗಿದ್ದು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ 5:30 ಗಂಟೆಗೆ ಸಾವನ್ನಪ್ಪಿದ್ದಾರೆ.
ಮೃತರಿಗೆ 38 ವರ್ಷ ವಯಸ್ಸಾಗಿತ್ತು. ಅವರು 8 ವರ್ಷದ ಮಗಳು ಮೋನಿಕಾ, 5 ವರ್ಷದ ಮಗ ಉಜ್ವಲ್ ಹಾಗೂ ಹೆಂಡತಿ ಭವ್ಯ, ತಂದೆ ಗಂಗಾಧರಪ್ಪ ಅವರನ್ನು ಅಗಲಿದ್ದಾರೆ.
ಟಿ.ಜಿ.ಸತೀಶ್ ಅವರು ನಾಗಾಲ್ಯಾಂಡ್, ಛತ್ತಿಸ್ಗಡ ಹಾಗೂ ಬೆಳಗಾಂನ ಕೇಂದ್ರ ಮೀಸಲು ಪೋಲಿಸ್ ಪಡೆಯ (CRPF) ಲ್ಲಿ ಕಾರ್ಯನಿರ್ವಹಿಸಿದ್ದರು.
ಇವರ ಅಂತ್ಯಕ್ರಿಯೆಯು ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರಿಬಿದನೂರು ತಾಲೂಕಿನ ತೊಂಡೆಭಾವಿ ಹೋಬಳಿಯ ಅವರ ಸ್ವ-ಗ್ರಾಮ ತರಿದಾಳುವಿನಲ್ಲಿ ನಡೆಯಿತು.
ಯೋಧರ ಅಂತ್ಯಕ್ರಿಯೆಗೂ ಮುನ್ನ ಗೌರಿಬಿದನೂರು ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ದಾರಿ ಯುದ್ದಕ್ಕು ಹೂ ಮಳೆ ಸುರಿಸಿದ ಸಾರ್ವಜನಿಕರು ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಅಂತ್ಯಕ್ರಿಯೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್, ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಎಚ್.ಶಿವಶಂಕರರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಡಿ.ವೈ.ಎಸ್.ಪಿ ವಾಸುದೇವ್, ತಹಸೀಲ್ದಾರ್ ಶ್ರೀನಿವಾಸ್ ರವರು ಭಾಗವಹಿಸಿ ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….