ದೊಡ್ಡಬಳ್ಳಾಪುರ: 2022ನೇ ಸಾಲಿನ ಮೊದಲನೆಯ ಹಬ್ಬ ಮಕರ ಸಂಕ್ರಾಂತಿ ಬಂದಿದೆ. ಇಂದು ದೇಶಾದ್ಯಂತ ಸಂಕ್ರಾಂತಿ ಹಬ್ಬವನ್ನು ವಿವಿಧ ಹೆಸರು, ಧಾರ್ಮಿಕ ವಿಧಿ-ವಿಧಾನ, ಆಚರಣೆಗಳಿಂದ ಆಚರಿಸಲಾಗುತ್ತದೆ.
ಅಂತೆಯೇ ದೊಡ್ಡಬಳ್ಳಾಪುರಕ್ಕೆ ಹೊಂದಿಕೊಂಡಿರುವ ಗೌರಿಬಿದನೂರು ತಾಲೂಕಿನ ಗೊಡ್ಡಾವಲಹಳ್ಳಿ ಬಳಿ ಸ್ಥಾಪಿಸಿರುವ ಗೋಶಾಲೆಯಲ್ಲಿ ದೊಡ್ಡಬಳ್ಳಾಪುರ ಬೆಸ್ಕಾಂ ಗ್ರಾಮಾಂತರ ವಿಭಾಗದ ಎಇಇ ಇನಾಯತ್ ಉಲ್ಲಾಖಾನ್ ಕುಟುಂಬದೊಂದಿಗೆ ಗೋಪೂಜೆ ನಡೆಸುವ ಮೂಲಕ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು.
ಕ್ಯುಪಿಡ್ ಗೋಶಾಲೆ: ದೊಡ್ಡಬಳ್ಳಾಪುರ ಬೆಸ್ಕಾಂ ಎಇಇ ಇನಾಯತ್ ಉಲ್ಲಾಖಾನ್ ಹಾಗೂ ಪತ್ನಿ ಸುಷ್ಮಾಇನಾಯತ್ ಉಲ್ಲಾಖಾನ್ ಅವರು ಮೂಲತಃ ಮುಸ್ಲಿಂ ಸಮುದಾಯದವರಾದರು ಗೋಪ್ರಿಯರು. ಈ ಕಾರಣದಿಂದಲೇ 2014 ರಲ್ಲಿ ಕ್ಯುಪಿಡ್ ಟ್ರಸ್ಟ್ ಗೋಶಾಲೆ ಆರಂಭಿಸಿ ದೇಸಿ ತಳಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಂಡುಬರುವ ಸುಮಾರು 6 ತಳಿಯ 30 ರಾಸುಗಳನ್ನು ಸಂರಕ್ಷಿಸುತ್ತಿದ್ದಾರೆ.
ಆಂದ್ರಪ್ರದೇಶದ ಪುಂಗನೂರ್ ಗಿಡ್ಡ ಹೋರಿ, ಕೇರಳದ ವೆಚೂರ್, ಉತ್ತರ ಕರ್ನಾಟಕದ ದೇವನಿ, ಸ್ವರ್ಣಕಪಿಲ, ತಾಮ್ರಬಣ್ಣದ ಕಪಿಲ ಹಾಗೂ ಹಳ್ಳಿಕಾರ್ ತಳಿಗಳು ಕ್ಯುಪಿಡ್ ಗೋಶಾಲೆಯಲ್ಲಿ ಗಮನ ಸೆಳೆಯುತ್ತವೆ.
ಮಕರ ಸಂಕ್ರಾತಿ ಇಂದು ಗೋಶಾಲೆಯಲ್ಲಿ ಹಬ್ಬದ ವಾತಾವರಣ ಕಂಡುಬಂದಿದ್ದು, ಗೋವುಗಳಿಗೆ ಪೂಜೆ ಸಲ್ಲಿಸಿ, ಪ್ರಿಯವಾದ ಬಾಳೆಹಣ್ಣು, ಗೆಣಸು, ಅವರೆಕಾಯಿ, ಕಬ್ಬುಗಳನ್ನು ಆಹಾರವಾಗಿ ನೀಡಲಾಯಿತು.
ದೇಸಿ ತಳಿ ಗೋವುಗಳ ರಕ್ಷಣೆಗೆ ಪಣತೊಟ್ಟಂತೆ ಶ್ರಮಿಸುತ್ತಿರುವ ಇನಾಯತ್ ಉಲ್ಲಾಖಾನ್ ದಂಪತಿಗಳು ಗೋ ಪೂಜೆ ಮೂಲಕ ಮಕರ ಸಂಕ್ರಾತಿಯನ್ನು ಆಚರಿಸಿ ಗೋಪ್ರೇಮ ಮೆರೆಯುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….