ದೊಡ್ಡಬಳ್ಳಾಪುರ: ಕೊವಿಡ್ 2ನೇ ಅಲೆಯಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗಿ ಕಂಡು ಬಂದು ಎಲ್ಲರಲ್ಲಿಯೂ ಆತಂಕ ಸೃಷ್ಟಿಯಾಗಿತ್ತು. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಹಾಗೂ ಕರೊನಾ ಸೋಂಕು ತಡೆಗಟ್ಟುವಲ್ಲಿ ಕೋವಿಡ್ ಲಸಿಕೆ ಪಡೆಯುವುದು ಸೇರಿದಂತೆ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾದ 1 ಲಕ್ಷ ರೂಗಳ ಪರಿಹಾರದ ಚೆಕ್‍ಗಳನ್ನು ವಿತರಿಸಿ, ಅವರು ಮಾತನಾಡಿದರು.
ತಾಲೂಕಿನಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಕೊವಿಡ್‍ನಿಂದ ಮೃತಪಟ್ಟಿದ್ದು, ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ಪರಿಹಾರ ನೀಡುತ್ತಿರುವುದು ಅಭಿನಂದನೀಯವಾಗಿದ್ದು, ಈ ಘಟನೆ ಮತ್ತೆ ನಡೆಯುವುದು ಬೇಡ ಎಂದರು.
ಶತಮಾನಗಳ ಹಿಂದಿನಿಂದಲೂ ಸಾಂಕ್ರಾಮಿಕ ರೋಗಗಳು ಜನರನ್ನು ಬಲಿ ಪಡೆಯುತ್ತಿರುವುದು ಸಾಮಾನ್ಯವಾಗಿದೆ. ಆದರೆ ಇಂದು ವಿಜ್ಞಾನ ಮುಂದುವರೆದಿದ್ದು, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನಚ್ಚರಿಕೆ ವಹಿಸುವುದು ಹಾಗೂ ಲಸಿಕೆ ಯಿಂದ ನಿಯಂತ್ರಿಸುವ ಕಾರ್ಯಗಳಾಗುತ್ತಿವೆ. ಆದರೆ ಹೊಸ ವೈರಸ್‍ಗಳು ಬರುತ್ತಿರುವುದರಿಂದ ಎಚ್ಚರಿಕೆ ಅತಿ ಮುಖ್ಯವಾಗಿದೆ. ಕೋವಿಡ್ 2ನೇ ಅಲೆಯಲ್ಲಿ ಆದಂತ ಅಚಾತುರ್ಯಗಳು ಮತ್ತೆ ಆಗದಂತೆ ಎಚ್ಚರ ವಹಿಸಬೇಕಿದೆ. ಕೋವಿಡ್ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯವಹಿಸದೇ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು.
ತಾಲೂಕಿನಲ್ಲಿ ಹಿಂದೆ ವಸತಿ ನಿಲಯಗಳನ್ನು ಕೋವಿಡ್ ವಾರ್ಡ್‍ಗಳನ್ನಾಗಿ ಮಾಡಲಾಗಿತ್ತು. ಈಗ ಅಗತ್ಯ ಬಿದ್ದರೆ ವಸತಿ ನಿಲಯಗಳನ್ನು ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಬಹುದಾಗಿದೆ. ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆ ಹಾಗೂ ತಾಲೂಕು ಆಡಳಿತ ಸಜ್ಜಾಗಿದ್ದು, ಗ್ರಾಮೀಣ ಪ್ರದೇಶಗಳಿಗೆ ವೈದ್ಯರ ನಡಿಗೆ ಹಳ್ಳಿ ಕಡೆಗೆ ಕೋವಿಡ್ ಸಂಚಾರಿ ಕ್ಲಿನಿಕ್‍ನ 25 ವಾಹನಗಳು ಸಂಚರಿಸುತ್ತಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಮನವೊಲಿಸಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ 49 ಮಂದಿ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾದ ರೂ 1ಲಕ್ಷ ರೂಗಳ ಪರಿಹಾರದ ಚೆಕ್‍ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ, ಉಪಾಧ್ಯಕ್ಷೆ ಫರ್ಹಾನಾ ತಾಜ್, ಉಪತಹಸೀಲ್ದಾರರಾದ ಸುರೇಶ್, ತುಳಸಿ ರಾಮಯ್ಯ, ಸೇರಿದಂತೆ ಕಂದಾಯ ಹಾಗೂ ನಗರಸಭೆ ಅಧಿಕಾರಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….