ದೊಡ್ಡಬಳ್ಳಾಪುರ: ರಾಗಿ ಖರೀದಿ ಪ್ರಕ್ರಿಯೆ ಮುಂದುವರೆಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಸಂಪುಟ ಉಪಸಮಿತಿ ವರದಿ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ತಾಲೂಕಿನ ಮಧುರೆ ಹೋಬಳಿಯ ಕನಸವಾಡಿಯಲ್ಲಿ ಜಿಲ್ಲಾಡಳಿತ, ಕೃಷಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಚಿವರ ಭೇಟಿ ವೇಳೆ, ರಾಗಿ ಖರೀದಿ ಕೇಂದ್ರವನ್ನು ಸ್ಥಗಿತಗೊಳಿಸಿರುವುದನ್ನು ತೆರವು ಮಾಡಬೇಕು. ಅವೈಜ್ಞಾನಿಕ ಮಾನದಂಡಗಳನ್ನು ಸರಿಪಡಿಸಬೇಕು. ನೋಂದಣಿ ವೇಳೆ ಆಗುತ್ತಿರುವ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಬೇಕು, ರಾಗಿ ಖರೀದಿ ಗರಿಷ್ಟ ಮಿತಿ 50 ಕ್ವಿಂಟಾಲ್‍ಗೆ ಏರಿಸಬೇಕು. ರಾಗಿ ಖರೀದಿಯಲ್ಲಿ ರೈತರಿಗೆ ಬೇಧ ಮಾಡಬಾರದು ಎನ್ನುವ ರೈತ ಮುಖಂಡರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಚಿವರು, ರಾಗಿ ಖರೀದಿ ಕುರಿತಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರ ಗಮನಕ್ಕೆ ತಂದು ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಕಳೆದ ವರ್ಷ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಕವಾಗಿ ಮೇಲ್ದರ್ಜೆಗೇರಿಸಲು, ಬಜೆಟ್‍ನಲ್ಲಿ ಹಣ ಮೀಸಲಿರಿಸಲಾಗಿದೆ. ಪ್ರತಿ ವರ್ಷ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, 5 ವರ್ಷಗಳಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಸರ್ಕಾರದ ಗುರಿಯಾಗಿದೆ. ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಅಥವಾ ಖಾಸಗಿ ಒಡೆತನದಲ್ಲಿರುವ ವೈದ್ಯಕೀಯ ಕಾಲೇಜುಗಳಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ(ಪಿಪಿಪಿ)ದಡಿ ನೂತನ ವೈದ್ಯಕೀಯ ಕಾಲೇಜು ಪ್ರಾರಂಭಿಸಬಹುದಾಗಿದೆ ರಾಜ್ಯದಲ್ಲಿ 10 ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 10 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು, ಕೇಂದ್ರದ ನೀತಿ ಆಯೋಗದ ಸೂಚನೆಯಂತೆ, ರಾಜ್ಯ ಸರ್ಕಾರ ನೀತಿ ರೂಪಿಸಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ ನೂತನವಾದ ಜಿಲ್ಲಾಸ್ಪತ್ರೆ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದ ಸಚಿವರು ಶೀಘ್ರದಲ್ಲಿ ನಿರ್ಣಯ ಕೈಗೊಂಡು ಹೊಸಕೋಟೆಯಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಕೋವಿಡ್ ಲಸಿಕಾಕರಣದಲ್ಲಿ ಉತ್ತಮ ಪ್ರಗತಿ ಸಾಸಿದ್ದು, ಲಸಿಕಾಕರಣ ಪ್ರಗತಿಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿಗಳು, ಜನಪ್ರತಿನಿಗಳು ಸೇರಿದಂತೆ ಸಾರ್ವಜನಿಕರು ನೀಡಿರುವ ಸಹಕಾರವು ಮೆಚ್ಚುವಂತದ್ದು. ಮೂರನೇ ಅಲೆಯಲ್ಲಿ ಸೋಂಕಿನ ಗುಣಲಕ್ಷಣಗಳು ಸೌಮ್ಯವಾಗಿದ್ದು, ತೀವ್ರತೆಯಿರದಿದ್ದರೂ ಸಹ ಜನತೆ ನಿರ್ಲಕ್ಷ್ಯ ವಹಿಸದೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಉತ್ತಮ ಎಂದು ಎಂದು ಹೇಳಿದರು.
ಸಾಸಲು ಹೋಬಳಿ ರೈತರ ಬೆಳೆ ಹಾನಿಗೆ ಪರಿಹಾರ ನೀಡಲು ಶಾಸಕರ ಮನವಿ: ತಾಲೂಕಿನಲ್ಲಿ ನೀಲಗಿರಿ ತೆರವು ಮಾಡಿದ ಮೇಲೆ ಅತಿ ಹೆಚ್ಚು ರಾಗಿ ಬೆಳೆಯಲಾಗುತ್ತಿದ್ದು, ರಾಗಿ ಖರೀದಿಗೆ ಹಿಂದೆ 50 ಕ್ವಿಂಟಾಲ್ ಮಿತಿ ಇತ್ತು. ಈಗ 20 ಕ್ವಿಂಟಾಲ್‍ಗೆ ಮಿತಿ ಮಾಡಿರುವುದು ಸರಿಯಲ್ಲಿ ಖರೀದಿ ಮಿತಿ ಹಾಗೂ ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಆರಂಭಿಸಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ಮನವಿ ಮಾಡಿದರು.
ಸಾಸಲು ಹೋಬಳಿಯಲ್ಲಿ ಬೆಳೆ ಹಾನಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದ ರೈತರಿಗೆ ಕೃಷಿ ಅಕಾರಿಯ ನಿರ್ಲಕ್ಷ್ಯದಿಂದಾಗಿ, ಸುಮಾರು 200ಕ್ಕೂ ಅರ್ಜಿಗಳು ಕಂದಾಯ ಇಲಾಖೆಗೆ ಸಲ್ಲಿಕೆಯಾಗದೇ ಬಾಕಿ ಉಳಿದಿವೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ರೈತರಿಗೆ ಪರಿಹಾರ ಒದಗಿಸಿಕೊಡಬೇಕೆಂದು, ಕೃಷಿ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕರು ಮನವಿ ಮಾಡಿದರು.
ಎಂ.ಎಸ್.ಜಿ.ಪಿ ಸ್ಥಗಿತಗೊಳಿಸಿ: ತಾಲೂಕಿನ ಚಿಗರೇನಹಳ್ಳಿಯಲ್ಲಿ ಎಂ.ಎಸ್.ಜಿ.ಪಿ ತ್ಯಾಜ್ಯ ವಿಲೇವಾರಿ ಘಟಕದಿಂದ ಗ್ರಾಮಸ್ಥರಿಗೆ ಹಾನಿಯಾಗುತ್ತಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ, ತೀವ್ರ ಹೋರಾಟಕ್ಕೆ ಮಣಿದು ಟೆರ್ರಾಫರ್ಮಾ ಎನ್ನುವ ಘಟಕವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಎಂ.ಎಸ್.ಜಿ.ಪಿ ತ್ಯಾಜ್ಯ ವಿಲೇವಾರಿ ಘಟಕವನ್ನು ಮುಚ್ಚಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ. ಕೆ.ಸುಧಾಕರ್, ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಮಾಡುವ ವಿಧಾನಗಳ ಕುರಿತು ನನಗೆ ಹೆಚ್ಚಿನ ಮಾಹಿತಿ ಇದ್ದು, ಘಟಕದಲ್ಲಿ ಅವೈಜ್ಞಾನಿಕ ವಿಲೇವಾರಿ ಮಾಡುತ್ತಿರುವ ಬಗ್ಗೆ ತಜ್ಞರ ಸಲಹೆ ಪರಿಗಣಿಸಿ ತೀರ್ಮಾನಿಸಲಾಗುವುದು. ಎಂ.ಎಸ್.ಜಿ.ಪಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಒಂದು ದಿನ ಭೇಟಿ ನೀಡಿ, ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಕೃಷಿ ಇಲಾಖೆಯಿಂದ ಸಹಾಯಧನದ ಮೂಲಕ ವಿತರಿಸಲಾದ ಯಂತ್ರೋಪಕರಣಗಳು ಹಾಗೂ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪೌರಾಡಳಿತ, ಸಚಿವ ಎಂ.ಟಿ.ಬಿ.ನಾಗರಾಜು, ಶಾಸಕ ಟಿ.ವೆಂಕಟರಮಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಕಾರಿ ಕೆ.ರೇವಣಪ್ಪ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್, ಜಿಪಂ ಮಾಜಿ ಸದಸ್ಯ ಚುಂಚೇಗೌಡ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಉಪ ನಿರ್ದೇಶಕಿ ವಿನುತಾ, ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ ಸುಶೀಲಮ್ಮ, ತಾಂತ್ರಿಕ ಅಧಿಕಾರಿ ರೂಪ, ಮಧುರೆ ಹೋಬಳಿ ಕೃಷಿ ಅಧಿಕಾರಿ ಕೆ.ಎಂ.ಹರೀಶ್ ಕುಮಾರ್, ಕನಸವಾಡಿ ಗ್ರಾ.ಪಂ.ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಸ್ಥಳೀಯ ಜನಪ್ರತಿನಿಗಳು, ರೈತ ಮುಖಂಡರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….