ಬೆಂ.ಗ್ರಾ.ಜಿಲ್ಲೆ: ಕೆಲ ತಿಂಗಳಿಂದ ತಣ್ಣಗಾಗಿದ್ದ ಜಿಲ್ಲಾ ಕೇಂದ್ರದ ಹೆಸರು ಬದಲಾವಣೆ ಬೆಂಕಿಗೆ ಮತ್ತೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತುಪ್ಪ ಸುರಿದಿದ್ದಾರೆ.
ಜ.26ರಂದು ದೇವನಹಳ್ಳಿಯಲ್ಲಿ ನಡೆದ ಜಿಲ್ಲಾಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ದೇವನಹಳ್ಳಿ ಜಿಲ್ಲೆ ಎಂದು ಹೆಸರು ಘೋಷಣೆ ಮಾಡಿ ಹಾಗೂ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ ನೀಡಿ ಎಂದು ಮತ್ತೆ ಒತ್ತಾಯಿಸಿದ್ದಾರೆ. ಆದರೆ ದೇವನಹಳ್ಳಿ ಶಾಸಕರ ಈ ಹೇಳಿಕೆಗೆ ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಾಲೂಕುಗಳ ನಡುವೆ ಶಾಂತಿ ಕದಡಲು ಯತ್ನಿಸಿದರೆ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಿವೆ.
ಶಾಂತಿ ಕದಡುವ ಯತ್ನ: ಶಾಂತಿಯಿಂದ ಇರುವ ಎರಡು ತಾಲೂಕಿನ ಜನರ ನೆಮ್ಮದಿ ಕೆಡಿಸುವ ಕೆಲಸವನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾಡುತ್ತಿದ್ದಾರೆ. ಎಲ್ಲಾ ಅರ್ಹತೆ, ಸೌಲಭ್ಯ ಇದ್ದರೂ ಕೇವಲ ಕಟ್ಟಡ ದೇವನಹಳ್ಳಿ ವ್ಯಾಪ್ತಿಯಲ್ಲಿ ಎಂದ ಮಾತ್ರಕ್ಕೆ ಜಿಲ್ಲಾ ಕೇಂದ್ರದ ಹೆಸರು ಬದಲಾವಣೆಗೆ ಒತ್ತಾಯಿಸುವುದು ಖಂಡನೀಯ. ದೇವನಹಳ್ಳಿ ಶಾಸಕರು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಮರೆತು ಮಾತಾಡುವಂತಿದೆ, ಇದೇ ಉದ್ಧಟನ ಮುಂದುವರೆಸಿದರೆ ಹೋಬಳಿಗೆ ಕಾಲಿಡಲು ಬಿಡೆವು. ಇದೇ ನಿಲುವು ಹೊತ್ತು ತೂಬಗೆರೆ ವ್ಯಾಪ್ತಿಗೆ ಬಂದಲ್ಲಿ ಮಸಿ ಬಳಿಯಲಾಗುವುದು. ಅಲ್ಲದೆ ಚುನಾವಣೆ ಸಮಯದಲ್ಲಿ ಅವರ ವಿರುದ್ಧ ಕನ್ನಡ ಪರ ಸಂಘಟನೆಗಳು ಮತಯಾಚನೆಗೆ ಇಳಿದು ಸೋಲಿನ ತಕ್ಕ ಪಾಠ ಕಲಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ್ ಶೆಟ್ಟಿ ಬಣದ) ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜಘಟ್ಟ ರವಿ, ಜಿಲ್ಲಾ ಕೇಂದ್ರ ಕಟ್ಟಡ ದೇವನಹಳ್ಳಿಯಲ್ಲಿ ಇದೆ ಎಂದ ಮಾತ್ರಕ್ಕೆ ಎಲ್ಲಾ ಜಿಲ್ಲಾ ಮಟ್ಟದ ಕಾರ್ಯಕ್ರಮ ದೇವನಹಳ್ಳಿಯಲ್ಲಿ ಆಯೋಜಿಸುತ್ತಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳ ನಿಯೋಗ ಜಿಲ್ಲಾಧಿಕಾರಿಗಳ ಭೇಟಿ ದೊಡ್ಡಬಳ್ಳಾಪುರದಲ್ಲಿಯೂ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸಲು ಮನವಿ ಮಾಡಲಾಗುವುದೆಂದಿದ್ದಾರೆ.
ರಾಜಕೀಯ ಸ್ಟಂಟ್: ಹಲವು ವರ್ಷಗಳ ಹಿಂದೆಯೇ ಶೈಕ್ಷಣಿಕ, ಆರ್ಥಿಕ, ವಾಣಿಜ್ಯ ಚಟುವಟಿಕೆಗಳನ್ನು ಗಮನಿಸಿ ವೈಜ್ಞಾನಿಕವಾಗಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕೇಂದ್ರ ಮಾಡಲಾಗಿದೆ. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಬೇಕೆ ಹೊರತು ದೇವನಹಳ್ಳಿಯಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ರಾಜಕೀಯ ಲಾಭಕ್ಕೊಸ್ಕರ ಅಲ್ಲಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅವರಿಗೆ ಕಾಳಜಿ ಇಲ್ಲವಾಗಿದೆ. ಅವರಿಗೆ ದೇವನಹಳ್ಳಿ ತಾಲೂಕಿನ ಅಭಿವೃದ್ಧಿ ಬದ್ಧತೆ ಇದ್ದಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿಯಲ್ಲಿದ್ದು ಬೆಂಗಳೂರು ನಗರ ಜಿಲ್ಲೆಗೆ ದೇವನಹಳ್ಳಿಯನ್ನು ಸೇರಿಸಿದರೆ ಹೆಚ್ಚಿನ ಅನುದಾನ ದೊರೆತು ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಅದು ಬಿಟ್ಟು ರಾಜಕೀಯ ಸ್ಟಂಟ್ ಮಾಡಿ ಮತಪಡೆಯಲು ಪ್ರಯತ್ನ ಮಾಡುವುದು ಖಂಡನೀಯ ಎಂದಿದ್ದಾರೆ.
ಉಪಟಳದ ಹೇಳಿಕೆ ನೀಡಬೇಡಿ: ಸೌಲಭ್ಯ ವಂಚಿತ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವೆಂದು ಘೋಷಿಸಬೇಕೆ ಹೊರತು ದೇವನಹಳ್ಳಿಯನ್ನಲ್ಲ. ದೇವನಹಳ್ಳಿ ಶಾಸಕರು ಪದೇ ಪದೇ ಈ ರೀತಿಯ ಉಪಟಳದ ಹೇಳಿಕೆ ನೀಡಿ ರಾಜಕೀಯ ಲಾಭಗಳಿಸಲು ಯತ್ನಿಸುವುದ ಬಿಟ್ಟು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ. ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರದ ಸಂಘಟನೆ ಹೊರಾಟಕ್ಕೆ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಪೂರ್ಣ ಬೆಂಬಲವಾಗಿ ನಿಲ್ಲಲಿದೆ ಎಂದು ಸಂಸ್ಥಾಪಕ ಅಧ್ಯಕ್ಷ ರವಿಮಾವಿನ ಕುಂಟೆ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಜನರ ಸಹನೆ ಕೆಣಕ ಬೇಡಿ: ದೇವನಹಳ್ಳಿ ಶಾಸಕರ ಹೇಳಿಕೆಗೆ ಕರ್ನಾಟಕ ವಿಜಯ ಸೇನೆ ರಾಜ್ಯ ಕಾರ್ಯದರ್ಶಿ ಎ.ನಂಜಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಸಹನೆಯನ್ನು ಕೆಣಕೆಬೇಡಿ ಎಂದು ಹರಿಹಾಯ್ದಿದ್ದಾರೆ.
ರಿಯಲ್ ಎಸ್ಟೇಟ್ ಮಾಡಿಕೊಂಡವರು ರಾಜಕೀಯಕ್ಕೆ ಬಂದು ಎರಡು ತಾಲೂಕಿನ ಜನರ ನೆಮ್ಮದಿಯ ಹಾಳುಮಾಡುತ್ತಿದ್ದಾರೆ. ಜಿಲ್ಲಾ ಕೇಂದ್ರದ ಹೆಸರನ್ನು ಯಾವುದೇ ಕಾರಣಕ್ಕೂ ದೇವನಹಳ್ಳಿ ಜಿಲ್ಲೆ ಎಂದಾಗಿಸಲು ಬಿಡುವುದಿಲ್ಲ. ಜಿಲ್ಲಾಸ್ಪತ್ರೆ ದೊಡ್ಡಬಳ್ಳಾಪುರಕ್ಕೆ ಮಂಜೂರಾಗಿದೆ ಇದಕ್ಕು ಕ್ಯಾತೆ ತಗೆದಿರುವುದು ಖಂಡನೀಯ ಈ ನಿಟ್ಟಿನಲ್ಲಿ ಇತರೆ ಸಂಘಟನೆಗಳ ಜೊತೆ ಸೇರಿ ಉಗ್ರ ಹೋರಾಟ ಮಾಡಲಾಗುವುದೆಂದಿದ್ದಾರೆ.
ನವ ಬೆಂಗಳೂರು ಎಂದಾಗಲಿ: ದೇವನಹಳ್ಳಿ ಸರ್ವೆ ನಂಬರ್ ನಲ್ಲಿ ಕಟ್ಟಡ ನಿರ್ಮಿಸಿದಾಕ್ಷಣ ದೇವನಹಳ್ಳಿ ಜಿಲ್ಲಾ ಕೇಂದ್ರವಾಗಲು ಸಾಧ್ಯವಿಲ್ಲ. ದೇವನಹಳ್ಳಿ ಶಾಸಕರ ಹೇಳಿಕೆ ಖಂಡನೀಯವೆಂದು ನವ ಬೆಂಗಳೂರು ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್.ಪ್ರದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪವಿಭಾಗಾಧಿಕಾರಿ ಕೇಂದ್ರ, ಜಿಲ್ಲಾಸ್ಪತ್ರೆ ಸೇರಿದಂತೆ ಮೂಲ ಸೌಕರ್ಯ ಆದಿಯಾಗಿ, ಭೌಗೋಳಿಕ, ನೈಸರ್ಗಿಕ, ಆರ್ಥಿಕವಾಗಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಅರ್ಹವಾಗಿದ್ದರೂ ಸಹ, ಯಾವುದೇ ತಾಲೂಕಿಗೆ ಅನ್ಯಾಯವಾಗದಂತೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನವದೆಹಲಿ ಮಾದರಿಯಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ನವ ಬೆಂಗಳೂರು ಎಂದು ನಾಮಕರಣ ಮಾಡಿ ಜಿಲ್ಲೆಯ ಅಭಿವೃದ್ಧಿ ಮಾಡಲಿ ಇದಕ್ಕೆ ಇತರೇ ಮೂರು ತಾಲೂಕಿನ ಜನರ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯನ್ನು ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ನಡುವೆ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲೂಕುಗಳು ಸೇರಿದ್ದು, ಜಿಲ್ಲಾ ಕೇಂದ್ರದ ಕಚೇರಿ ದೇವನಹಳ್ಳಿಯಿಂದ 12 ಕಿ.ಮೀ. ದೂರದಲ್ಲಿದ್ದರೆ, ದೊಡ್ಡಬಳ್ಳಾಪುರಕ್ಕೆ 8 ಕಿ.ಮೀ. ದೂರದಲ್ಲಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಬೈರೇಗೌಡರ ಒತ್ತಾಸೆ ಮೇರೆಗೆ ಅನುದಾನ ಬಿಡುಗಡೆಗೊಂಡು ಜಿಲ್ಲಾಧಿಕಾರಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು.
ಅಂದಿನ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ತರಾತುರಿಯಲ್ಲಿ ಕಟ್ಟಡವನ್ನು ಉದ್ಘಾಟಿಸಿದ್ದರು. ಉಪವಿಭಾಗಾಧಿಕಾರಿ ಕಚೇರಿ, ಜಿಲ್ಲಾಸ್ಪತ್ರೆ ದೊಡ್ಡಬಳ್ಳಾಪುರದಲ್ಲಿದ್ದರು, ಜಿಲ್ಲಾ ಕೇಂದ್ರದ ಕಟ್ಟಡ ದೇವನಹಳ್ಳಿ ಸರ್ವೆ ನಂಬರ್ಗೆ ಸೇರಿದ್ದು, ಜಿಲ್ಲಾ ಕೇಂದ್ರದ ಮರು ನಾಮಕರಣ ಚರ್ಚೆ ಮತ್ತೆ ತೀವ್ರಗೊಂಡಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….