ದೊಡ್ಡಬಳ್ಳಾಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿದ್ದಾರೆಂದು ಆರೋಪಿಸಿ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಈ ಕೂಡಲೇ ಕಡ್ಡಾಯ ನಿವೃತ್ತಿಗೊಳಿಸಿ ಗಡಿಪಾರು ಮಾಡಬೇಕು ಎಂದು ಸಂವಿಧಾನ ರಕ್ಷಣೆಗಾಗಿ ನಾಗರೀಕ ವೇದಿಕೆಯ ಸಂಚಾಲಕ ರಾಜುಸಣ್ಣಕ್ಕಿ ಆಗ್ರಹಿಸಿದರು.
ನಗರದ ತಾಲ್ಲೂಕು ಕಚೇರಿ ಬಳಿ ಸಂವಿಧಾನ ರಕ್ಷಣೆಗಾಗಿ ನಾಗರೀಕ ವೇದಿಕೆಯ ವತಿಯಿಂದ ರಾಯಚೂರು ಕೋರ್ಟ್ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಲು ತಿಳಿಸಿದ್ದಾರೆ ಎನ್ನಲಾದ ರಾಯಚೂರು ಜಿಲ್ಲಾ ನ್ಯಾಯಧೀಶರಾದ ಮಲ್ಲಿಕಾರ್ಜುನ್ ಗೌಡ, ಅವರ ನಡೆಯನ್ನು ಖಂಡಿಸಿ ವೇದಿಕೆಯ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳು ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಸಂವಿಧಾನದ ಆಶಯದಂತೆ ನ್ಯಾಯಾಧಿಶರಾಗಿ ಆಯ್ಕೆಯಾಗಿ ಸಂವಿಧಾನದ ಆಶಯದಂತೆ ಕಾರ್ಯ ನಿರ್ವಹಿಸಬೇಕಾದ ಮಲ್ಲಿಕಾರ್ಜುನ ಗೌಡ
ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದ್ದಲ್ಲದೆ ಸಂವಿಧಾನಕ್ಕೆ ಮತ್ತು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ ಎಂದು ಆರೋಪಿಸಿದರು.
ಪಿವಿಸಿ ಜಿಲ್ಲಾಧ್ಯಕ್ಷ ಗೂಳ್ಯ ಹನುಮಣ್ಣ ಮಾತನಾಡಿ, ನ್ಯಾಯ ಸ್ಥಾನದಲ್ಲಿ ಕುಳಿತ ವ್ಯಕ್ತಿಯೊಬ್ಬರು ಅಸ್ಪೃಶ್ಯತೆ ಆಚರಣೆ ಮಾಡಿರುವುದು ನ್ಯಾಯಾಧೀಶರ ಸ್ಥಾನಕ್ಕೆ ಅರ್ಹರಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದರು.
ತಾಲ್ಲೂಕು ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯ್ಕ್ ಅವರು ಮಾತನಾಡಿ, ಸದಾ ದಲಿತ ಹಿಂದುಳಿದವರ ವಿರುದ್ಧ ಇರುವ ಮನುವಾದಿ ಸರ್ಕಾರಗಳು ಮೂರನೇ ವ್ಯಕ್ತಿಯ ಮೂಲಕ ತಮ್ಮ ಹಿಡನ್ ಅಜೆಂಡಾ ಜಾರಿ ಮಾಡಲು ಸದಾ ಸಂಚು ರೂಪಿಸುತ್ತಿದ್ದು ಎಸ್ಸಿ-ಎಸ್ಟಿ ಒಬಿಸಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಕರೆಕೊಟ್ಟರು.
ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಗುರುರಾಜಪ್ಪ ಮಾತನಾಡಿ, ರಾಯಚೂರು ನ್ಯಾಯಾಧೀಶರ ನಡೆ ದೇಶ ದ್ರೋಹ ಕೃತ್ಯವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಾನ್ಯ ರಾಜ್ಯಪಾಲರು ಮದ್ಯ ಪ್ರವೇಶಿಸಿ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಉಚ್ಚ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ರಾಷ್ಟ್ರದ್ರೋಹದ ಪ್ರಕರಣವನ್ನ ದಾಖಲಿಸಬೇಕು ಎಂದು ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ವಿಮೋಚನಾ ಶಕ್ತಿಯ ರಾಜ್ಯಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಸದಾನಂದ.
ಪ್ರಜಾವಿಮೋಚನಾ ಬಹುಜನ ಸಮಿತಿಯ ರಾಜ್ಯ ಕಾರ್ಯದರ್ಶಿ ಚನ್ನಿಗರಾಯಪ್ಪ, ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ನಂಜೇಶ್ ಮತ್ತು ದಸಂಸದ ಛಲವಾದಿ ಸುರೇಶ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….