ಬೆಂಗಳೂರು ಗ್ರಾಮಾಂತರ ಜಿಲ್ಲೆ, (ಆಗಸ್ಟ್. 06): ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವು ದೇವನಹಳ್ಳಿ ಟೌನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೆಪ್ಟೆಂಬರ್ ನ ಎರಡನೇ ವಾರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಕಾರ್ಯಕ್ರಮಕ್ಕೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅವರು ಸೂಚಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೃಹತ್ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು, ಉದ್ಯೋಗಾಕಾಂಕ್ಷಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕ್ರಮ ವಹಿಸಿ ಉದ್ಯೋಗಾಂಕ್ಷಿಗಳ ಆನುಕೂಲವಾಗುವಂತೆ ನೋಂದಣಿಗಾಗಿ ಆನ್ಲೈನ್ ಪೋರ್ಟಲ್ ಸಿದ್ದಪಡಿಸಿ. ಉದ್ಯೋಗಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ವ್ಯಾಪಕ ಪ್ರಚಾರ ಮಾಡಿ, ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಲು ಪೂರ್ವ ಯೋಜನೆ ಸಿದ್ದಪಡಿಸಿ ಎಂದು ಹೇಳಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಟಿ.ಕೆ.ರಮೇಶ್, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನರೇಂದ್ರ ಬಾಬು, ಜಿಲ್ಲಾ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗನ್ನಾಥ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….