ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಭೂಮಿಯ ಬೆಲೆ ಬಂಗಾರಕ್ಕೂ ಹೆಚ್ಚಾಗುತ್ತಿರುವಂತೆಯೇ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇಷ್ಟು ದಿನ ಬೆದರಿಕೆ, ಸಣ್ಣ ಪುಟ್ಟ ಗಲಾಟೆಗೆ ಸೀಮಿತವಾಗಿದ್ದ ರಿಯಲ್ ಎಸ್ಟೇಟ್ ವ್ಯವಹಾರ ಈಗ ಅಮಾನವೀಯ ಕೊಲೆಯವರೆಗೂ (Murder) ಮುಂದುವರಿದು, ತಾಲೂಕಿನ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.
ಇದಕ್ಕೆ ಕಾರಣ ಸುಮಾರು ಎರಡೂವರೆ ತಿಂಗಳ ಹಿಂದೆ ಕಾಣೆಯಾದ ವ್ಯಕ್ತಿಯೋರ್ವ, ರಿಯಲ್ ಎಸ್ಟೇಟ್ ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಗೆಳೆಯರಿಂದಲೇ ಅಮಾನವೀಯವಾಗಿ ಕೊಲೆಯಾಗಿರುವ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೃತ ದುರ್ದೈವಿಯನ್ನು ಬಾಶೆಟ್ಟಿಹಳ್ಳಿ ನಿವಾಸಿ 65 ವರ್ಷದ ದೇವರಾಜ್ ಎಂದು ಗುರುತಿಸಲಾಗಿದೆ.
ಮೃತ ದೇವರಾಜ ಬಾಶೆಟ್ಟಿಹಳ್ಳಿಯಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ ಎನ್ನಲಾಗಿದ್ದು, ಅ.18 ರಂದು ಕಾಣೆಯಾಗಿರುವ ಕುರಿತು ಕುಟುಂಬಸ್ಥರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಕುರಿತು ತನಿಖೆ ಆರಂಭಿಸಿದ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ಪೊಲೀಸರು ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಮೃತ ದೇವರಾಜ್, ರಾಜಕುಮಾರ್, ಅನಿಲ್ ಗೆಳೆಯರಾಗಿದ್ದು ರಿಯಲ್ ಎಸ್ಟೇಟ್ ಹಣದ ವಿಚಾರವಾಗಿ ಕಿರಿಕ್ ನಡೆದಿದೆ. ಈ ಕುರಿತು ದೇವರಾಜ್ 20 ಲಕ್ಷ ಕೊಡಬೇಕೆಂದು ಪತ್ನಿಗೂ ತಿಳಿಸಿದ್ದರಂತೆ.
ಹಣ ನೀಡುವುದಾಗಿ ದೇವರಾಜ್ ಅವರನ್ನು ಕಾರಲ್ಲಿ ಕರೆದೊಯ್ದ ರಾಜಕುಮಾರ್ ಮತ್ತು ಅನಿಲ್ ಕಾರಿನಲ್ಲಿಯೇ ಹಗ್ಗದಿಂದ ದೇವರಾಜ್ ಕುತ್ತಿಗೆಯನ್ನು ಬಿಗಿದು ಹತ್ಯೆಗೈದು, ಮೃತ ದೇಹವನ್ನು ದೊಡ್ಡಬಳ್ಳಾಪುರದ ಹೊರವಲಯದ ರಘುನಾಥಪುರದ ಬಳಿಯಿರುವ ಖಾಸಗಿ ಎಸ್ಟೇಟ್ ಒಂದರಲ್ಲಿ ಗುಂಡಿ ತೋಡಿ ಮಣ್ಣುಮಾಡಿದ್ದಾರೆ. ಆದರೆ ಪೊಲೀಸರಿಗೆ ಅನುಮಾನ ಬರಬಹುದೆಂದು ಊಹಿಸಿ, ಮತ್ತೆ ಮೃತ ದೇಹವನ್ನು ತೆಗೆದು ಬೆಂಕಿಯಲ್ಲಿ ಸುಟ್ಟು, ತಾಲೂಕಿನ ಮಧುರೆ ಕೆರೆಗೆ ಅವಶೇಷಗಳನ್ನು ಎಸೆದಿದ್ದಾರೆ ಎಂದು ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ತಿಳಿಸಿದ್ದಾರೆ.
ಘಟನೆಯಲ್ಲಿ ಪ್ರಸ್ತುತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ವೇಳೆ ಶವದ ತಲೆ ಕೂದಲು, ಚಪ್ಪಲಿ ಸಿಕ್ಕಿದ್ದು, ಇಂದು ಮಧ್ಯಾಹ್ನ ಮಧುರೆ ಕೆರೆಯಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳೊಂದಿಗೆ ತೆರಳಿದ ಪೊಲೀಸರು ಶೊಧಕಾರ್ಯ ನಡೆಸಿ, ಅವಶೇಷಗಳನ್ನು ಪತ್ತೆ ಮಾಡಿದ್ದಾರೆ.
