ದೊಡ್ಡಬಳ್ಳಾಪುರ (Doddaballapura): ಶುದ್ಧ ಕುಡಿಯುವ ನೀರಿಗಾಗಿ ಗಣರಾಜ್ಯೋತ್ಸವ ದಿನ ಮನೆಗಳ ಮೇಲೆ ಕಪ್ಪುಬಾವುಟ ಹಾರಿಸಲು ಮುಂದಾದ ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಸಮಿತಿ ಸದಸ್ಯರ ಜೊತೆ ಜಿಲ್ಲಾಧಿಕಾರಿ ಗುರುವಾರ ನಡೆಸಿದ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ ಸಭೆ ಮುಕ್ತಾಯವಾಗಿದೆ.
ಕಲುಷಿತ ನೀರಿನಿಂದಾಗಿ ನಮ್ಮೂರಿನ ಮನೆಯಲ್ಲೂ ಚರ್ಮ ರೋಗಗಳಿಂದ ಬಳಲುತ್ತಿರುವ ಮಕ್ಕಳು ಇದ್ದಾರೆ. ಹಿರಿಯರು ಉಸಿರಾಟದ ತೊಂದರೆ, ಕೈ, ಕಾಲುಗಳ ನೋವುಗಳಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್‌ನಿಂದಾಗಿ ಇತ್ತೀಚೆಗೆ ಇಬ್ಬರು ಮೃತಪಟ್ಟಿದ್ದಾರೆ.
ನಮಗೆ ಶುದ್ದ ಕುಡಿಯುವ ನೀರು ಕೊಡುವಂತೆ ಹೋರಾಟ ನಡೆಸುತ್ತಲೇ ಬರುತ್ತಿದ್ದರು ಸಮಸ್ಯೆ ಮಾತ್ರ ಉಲ್ಬಣವಾಗುತ್ತಲೇ ಇದೆ. ಸಂವಿಧಾನ ನೀಡಿರುವ ನಮ್ಮ ಹಕ್ಕುಗಳನ್ನು ನೀಡದಿರುವಾಗ, ಗಣರಾಜ್ಯೋತ್ಸವ ಆಚರಣೆಗೆ ಅರ್ಥ ಇಲ್ಲ.
ನಿತ್ಯ ಕಲುಷಿತ ವಾತಾವರಣದಲ್ಲಿ ಬದುಕುವುದಕ್ಕಿಂತ ನಮಗೆ ಒಂದೇ ಸಾರಿ ವಿಷ ನೀಡಿ ಸಾಯಿಸಿಬಿಡಿ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ಗ್ರಾಮಗಳಿಗೆ ಕೊಳಚೆ ನೀರಿನ ಭಾಗ್ಯ ಕೊಟ್ಟು ಅದರ ಜೊತೆಗೆ ಗ್ರಾಮಸ್ಥರ ಆರೋಗ್ಯವನ್ನು ಹಾಳು ಮಾಡಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಜ.26 ರಂದು ಕಪ್ಪು ಬಾವುಟವನ್ನ ಹಾರಿಸುವ ಮೂಲಕ ಪ್ರತಿಭಟನೆ ನಡೆಸಲು ಸಜ್ಜಾಗಿದ್ದ ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಮಜರಾಹೊಸಹಳ್ಳಿ ಕೆರೆ ಬಳಿ ಸಭೆ ನಡೆಸಿದಾಗ ಗ್ರಾಮಸ್ಥರು ಸಮಸ್ಯೆಗಳನ್ನು ಮುಂದಿಟ್ಟರು.
ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿ ಮುಖ್ಯಸ್ಥ ಸತೀಶ್ ಮಾತನಾಡಿ, ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಕೈಗಾರಿಕಾ ರಾಸಾಯನಿಕ ತ್ಯಾಜ್ಯ ನೀರನ್ನು ನಮ್ಮ ಕೆರೆಗಳಿಗೆ ಬಿಡುತ್ತಿದ್ದಾರೆ.
ಇಲ್ಲಿವರೆಗೂ ಸುಮಾರು 28 ಕ್ಕೂ ಹೆಚ್ಚು ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ನೀರು ಬಿಡುತ್ತಿರುವುದನ್ನು ಫೋಟೋ ಮತ್ತು ವಿಡಿಯೋ ಸಮೇತ ಅಧಿಕಾರಿಗಳಿಗೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಮಜರಾಹೊಸಹಳ್ಳಿ ದೊಡ್ಡತುಮಕೂರು ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ನೀರು ಮನುಷ್ಯ ಆರೋಗ್ಯಕ್ಕೆ ಹೆಚ್ಚು ಹಾನಿ ಮಾಡುವ ರಾಸಾಯನಿಕಗಳು, ನೂರಾರು ಪಟ್ಟು ಹೆಚ್ಚು ಕಂಡು ಬಂದಿರುತ್ತದೆ.
ಕಾರ್ಖಾನೆಗಳಿಂದ ನೀರು ಹೊರಗೆ ಬಿಡಬಾರದು ಎಂಬ ಕಾನೂನು ಇದ್ದರೂ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಮಾಡಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉರುಳು ಸೇವೆ ಮಾಡಿದರು ಇದುವರೆಗೂ ಸ್ಥಳಾಂತರ ಆಗಿಲ್ಲ.
ಇನ್ನು ದೊಡ್ಡಬಳ್ಳಾಪುರ ನಗರಸಭೆ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಳಚೆ ನೀರು, ಕೈಗಾರಿಕಾ ರಾಸಾಯನಿಕ ನೀರು ನೇರವಾಗಿ ಕೆರೆಗಳಿಗೆ ಬಿಡುತ್ತಿದ್ದಾರೆ.
ಹೋರಾಟದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡುತ್ತಾರೆ, ನಾಲ್ಕು ತಿಂಗಳಲ್ಲಿ ಎಸ್.ಟಿ.ಪಿ ಘಟಕ ಕೆಲಸ ಶುರು ಮಾಡುವುದಾಗಿ ಹೇಳಿದರು, ಆರು ತಿಂಗಳು ಕಳೆದರೂ ಒಂದು ಪೈಸೆಯಷ್ಟು ಕೆಲಸವಾಗಿಲ್ಲ, ಕಾಡನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸಿ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಕೆಲಸ ಶುರುವಾಗಿಲ್ಲ.
ಎಲ್ಲದಕ್ಕೂ ಕಡಿವಾಣ ಹಾಕಬೇಕೆಂದು ಕಾನೂನಾತ್ಮಕವಾಗಿ ಅನೇಕ ಹೋರಾಟಗಳು ನಡೆಸಿದ್ದರು ಯಾವುದೇ ಪ್ರಯೋಜನ ಆಗುತ್ತಿಲ್ಲ. ಕಾರ್ಖಾನೆಗಳ ತ್ಯಾಜ್ಯ ನೀರು ಎಲ್ಲಿಗೆ ಹೋಗುತ್ತದೆ ಎನ್ನುವ ಮಾಹಿತಿ ಇಲ್ಲ. ಸಾರ್ವಜನಿಕ ಸಭೆಗಳ ನಿರ್ಣಯದ ಬಗ್ಗೆ ಮಾಹಿತಿ ಇಲ್ಲ.
ಕ್ಯಾನ್ಸರ್‌ನಿಂದ ಸಾವು
ನಮ್ಮ ಅಣ್ಣ ಕ್ಯಾನ್ಸರ್‌ನಿಂದ ಮೃತಪಟ್ಟಿರುವುದಕ್ಕೆ ಕಲುಷಿತ ನೀರು ಕಾರಣವಾಗಿದೆ ದಯಮಾಡಿ ತ್ಯಾಜ್ಯ ನೀರು ಬರುವುದನ್ನು ನಿಲ್ಲಿಸಿ ಎಂದು ಗ್ರಾಮದ ವಿಜಯಕುಮಾರ್ ದೂರಿದರು.
ಮುಖಂಡ ನಾಗೇಶ್ ಮಾತನಾಡಿ, ಚುನಾವಣೆ ಬಹಿಷ್ಕಾರ ಹಾಕಿದ ಗ್ರಾಮಸ್ಥರಿಗೆ ಮನವೊಲಿಸಿ, ಚುನಾವಣೆ ನಡೆಯುವಂತೆ ಮಾಡಿದ್ದೆವೆ. ಆದರೆ ಈಗ ಅವರಿಗೆ ಏನೂ ಹೇಳಲಾಗುತ್ತಿಲ್ಲ.
ಗ್ರಾಮದ ಮಹಿಳೆ ಸರೋಜಮ್ಮ ಮಾತನಾಡಿ, ಯುಗಾದಿ ಹಬ್ಬದ ದಿನವೂ ಸಹ ಮಾಸ್ಕ್ ಹಾಕಿಕೊಂಡು ಹಬ್ಬ ಮಾಡಬೇಕಾಗಿದೆ. ಮನೆಯಲ್ಲಿನ ಒಬ್ಬರಲ್ಲ ಒಬ್ಬರಿಗೆ ಕಾಯಿಲೆಗಳಿವೆ ಎಂದರು.
ಜಿಲ್ಲಾ ಮಟ್ಟದ ಕೆರೆ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿರುವವರು ಜಿಲ್ಲಾಕಾರಿಗಳೇ , ಕೆರೆಗಳ ಸಂರಕ್ಷಣೆ ಅವರ ನೇತೃತ್ವದಲ್ಲಿ ನಡೆಯಬೇಕು. ಆದರೆ ಇಲ್ಲಿಯವರೆಗೆ ಎಷ್ಟು ಸಭೆಗಳಾಗಿವೆ ಎಂದು ವಕೀಲ ಹನುಮಂತರಾಜು ಪ್ರಶ್ನಿಸಿದರು.
ಕಲುಷಿತ ನೀರು ಆಹಾರಗಳಿಂದಾಗಿ ಇಲ್ಲಿನ ಜನರಿಗೆ ಕಾನ್ಸರ್ ಮೊದಲಾದ ಕಾಯಿಲೆಗಳು ಬರುತ್ತಿರುವುದು ಸತ್ಯವಾಗಿದ್ದು, ನಾನೇ ಎಷ್ಟೋ ಜನರಿಗೆ ಚಿಕಿತ್ಸೆ ನೀಡಿದ್ದೇನೆ. ಈ ದಿಸೆಯಲ್ಲಿ ಜಿಲ್ಲಾಕಾರಿಗಳು ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ಸಮಿತಿ ಅಧ್ಯಕ್ಷ ವೈದ್ಯ ಡಾ.ಟಿ.ಎಚ್.ಆಂಜಿನಪ್ಪ ಹೇಳಿದರು.
ಕಾಮಗಾರಿಗಳು ಪ್ರಗತಿಯಲ್ಲಿವೆ
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಮಾಲಿನ್ಯ ನಿಯಂತ್ರಣ ಮಂಡಲಿ ಕಚೇರಿ ಸ್ಥಳಾಂತರಕ್ಕೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಈಗ ಲೋಕೋಪಯೋಗಿ ಇಲಾಖೆ ಸ್ಥಳ ಗುರುತಿಸಿದೆ. ಒಂದು ತಿಂಗಳೊಳಗೆ ಸ್ಥಳಾಂತರಗೊಳ್ಳಲಿದೆ.
ಕೈಗಾರಿಕೆಗಳಿಂದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಲಿ ಮೂಲಕ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ.
ತ್ಯಾಜ್ಯ ಶುದ್ದೀಕರಣ ಘಟಕ (ಎಸ್.ಟಿ.ಪಿ) ಘಟಕ ಸ್ಥಳಾಂತರ ಮಾಡಲು ಯೋಜನಾ ವರದಿ ಸಿದ್ದವಾಗುತ್ತಿದ್ದು, ಹಣಕಾಸು ಇಲಾಖೆಯ ಬಳಿ ಕಡತ ಇದ್ದು, ಅನುಮೋದನೆ ಸದ್ಯದಲ್ಲಿಯೇ ದೊರೆಯಲಿದ್ದು, ಟೆಂಡರ್ ಆಗಲಿದೆ.
ಘಟಕದ ಸ್ಥಾಪನೆಗೆ ವರ್ಷಗಳು ತೆಗೆದುಕೊಳ್ಳುವುದರಿಂದ ಅಲ್ಲಿಯವರೆಗೆ ಜಕ್ಕಲ ಮೊಡುಗು ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುವುದು.
ಕಾಡನೂರು ಹಾಗೂ ಅರಳು ಮಲ್ಲಿಗೆ ಬಳಿಯಿಂದ ಕೊಳವೆ ಬಾವಿಗಳನ್ನು ಕೊರೆಸಿ ನೀರು ತರುವ ಕಾಮಗಾರಿಗೆ ಅನುಮೋದನೆ ದೊರೆತಿದೆ. ಆದರೆ ಈ ಕಾಮಗಾರಿಗೆ ತಾಂತ್ರಿಕ ತೊಡಕಿದ್ದರೂ ನಾವು ಹಿಂದೆ ಬಿದ್ದು, ವಿಶೇಷ ಪ್ರಕರಣ ಎಂದು ಮನವರಿಕೆ ಮಾಡಿಕೊಡಲಾಗಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. 18 ಕೋಟಿ ರೂ ವೆಚ್ಚದ 2 ಡಿಪಿಆರ್ ಆಗಿದೆ ಎಂದರು.
ಇನ್ನು ಕೈಗಾರಿಕಾ ರಾಸಾಯನಿಕ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವ ದೂರುಗಳು ಬರುತ್ತಿವೆ, ವೈಜ್ಞಾನಿಕವಾಗಿ ಸಂಸ್ಕರಿಸುವ ಬಗ್ಗೆ ಶಾಸಕರೊಂದಿಗೆ ಸಭೆ ನಡೆಸಲಾಗಿದೆ.
ಸಿಟಿಪಿ ಘಟಕಕ್ಕೆ ಪೈಪ್ ಲೈನ್‌ಗಳ ಮೂಲಕ ಘಟಕ ತ್ಯಾಜ್ಯ ಹರಿದುಹೋಗಬೇಕು. ಇಲ್ಲವಾದರೆ ಟ್ಯಾಂಕರ್‌ನಲ್ಲಿ ತೆಗೆದುಕೊಂಡು ಹೋಗಬೇಕು. ಕೆಐಎಡಿಬಿ ಪೈಪ್‌ಗಳನ್ನು ದುರಸ್ಥಿ ಮಾಡುವುದಾಗಿ ಹೇಳಿದ್ದಾರೆ ಎಂದ ಅವರು, ನಿಯಮ ಉಲ್ಲಂಘಿಸುವ ಯಾವುದೇ ರಾಸಾಯನಿಕ ಕಾರ್ಖಾನೆಗಳನ್ನು ಬಂದ್ ಮಾಡಿ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳಿಗೆ ಸೂಚಿಸಿದರು.
ಇಂದಿನ ಸಭೆಯ ನಿರ್ಣಯವನ್ನು ನಮಗೆ ನೀಡಿದರೆ ನಾವು ಮುಂದಿನ ಯೋಚನೆ ಕೈಗೊಳ್ಳುತ್ತೇವೆ ಎಂದು ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿ ಮುಖಂಡರು ಹೇಳಿದರು.
ಸಭೆಯಲ್ಲಿ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ನಗರಾಭಿವೃದ್ದಿ ಯೋಜನಾಧಿಕಾರಿ ರಮೇಶ್, ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ತಾ.ಪಂ. ಇ.ಓ ಮುನಿರಾಜು, ನಗರಸಭೆ ಪೌರಾಯುಕ್ತ ಕಾರ್ತಿಕ್ ಈಶ್ವರ್.
ಡಿವೈಎಸ್‌ಪಿ ರವಿ, ಇನ್ಸ್‌ಪೆಕ್ಟರ್ ಸಾಧಿಕ್ ಪಾಷಾ, ಬಾಶೆಟ್ಟಿಹಳ್ಳಿ ಪ.ಪಂ ಮುಖ್ಯಾಧಿಕಾರಿ ನರಸಿಂಹಮೂರ್ತಿ, ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿ ಭಾಸ್ಕರ್ ಮುಖಂಡರಾದ ಕೆಂಪಣ್ಣ, ಕಾಳೇಗೌಡ, ವಿಜಯಕುಮಾರ್, ಮುನಿಕೃಷ್ಣಪ್ಪ ಹಾಗೂ ಗ್ರಾಮಸ್ಥರು ಇದ್ದರು.