ದೆಹಲಿ: ರಾಷ್ಟ್ರ ರಾಜಧಾನಿ ವಿಧಾನಸಭೆ ಚುನಾವಣೆಯಲ್ಲಿ 17 ವರ್ಷಗಳ ಬಳಿಕ ಗೆದ್ದಿರುವ ಬಿಜೆಪಿಯ (BJP) ನೂತನ ಮುಖ್ಯಮಂತ್ರಿಯಾಗಿ ಶಾಲಿಮಾರ್ ಬಾಗ್ ವಿಧಾನಸಭೆ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ (Rekha Gupta) ಅವರನ್ನು ಹೈಕಮಾಂಡ್ ಘೋಷಣೆ ಮಾಡಿದೆ.
ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದರು ಸಿಎಂ ಆಯ್ಕೆ ಮಾಡುವಲ್ಲಿ ಕಳೆದ ಒಂದು ವಾರದಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿ, ಪ್ರಯಾಸ ಪಟ್ಟು, ಅಳೆದು ತೂಗಿ ನಿನ್ನೆಯಷ್ಟೇ ಹೈಕಮಾಂಡ್ ಹೊಸ ಸಿಎಂ ಹೆಸರು ಘೋಷಣೆ ಮಾಡಿದೆ.
ಆದರೆ ಇದೇ ಸಮಯದಲ್ಲಿ ದೆಹಲಿಯ ಹೊಸ ಸಿಎಂ ಅಶಿಸ್ತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ದೆಹಲಿ ನೂತನ ಸಿಎಂ ರೇಖಾ ಗುಪ್ತಾರ ಅವರದ್ದು ಎನ್ನಲಾಗುತ್ತಿರುವ ವಿಡಿಯೋದಲ್ಲಿ ಚುನಾವಣೆ ಸಮಯದಲ್ಲಿ ರೇಖಾ ಗುಪ್ತಾ ಮೈಕ್ ಕಿತ್ತು ಎಸೆದು ಅಶಿಸ್ತು ತೋರಿಸಿರುವ ದೃಶ್ಯಗಳು ಇವೆ.
ದೆಹಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಸಮಯದಲ್ಲಿ ರೇಖಾ ಗುಪ್ತಾ ವೇದಿಕೆ ಮೇಲೆ ಕಿತ್ತಾಡಿದ್ದಾರೆ. ಈ ವಿಡಿಯೋ 2023ರದ್ದು ಎನ್ನಲಾಗಿದ್ದು ರಹಸ್ಯ ಮತದಾನ ವೇಳೆ ಪಾಲಿಕೆ ಸದಸ್ಯರು ಮೊಬೈಲ್ ಮೂಲಕ ಮತಪತ್ರಗಳ ಫೋಟೋ ತೆಗೆಯುತ್ತಿದ್ದರು ಎಂದು ಆರೋಪಿಸಲಾಗಿತ್ತು.
ಆ ಬಳಿಕ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಆಗ ರೇಖಾ ಗುಪ್ತಾ ಸ್ಟೇಜ್ ಮೇಲೆ ಹತ್ತಿ ಭಾರಿ ದೊಡ್ಡ ಗಲಾಟೆ ಮಾಡಿರುವ ವಿಡಿಯೋ ಇದೆನ್ನಲಾಗಿದೆ.
ಈ ವಿಡಿಯೋ ಶೇರ್ ಮಾಡಿರುವ ನೆಟ್ಟಿಗರು, ದೆಹಲಿಯ ನೂತನ ಮುಖ್ಯಮಂತ್ರಿ ಇವರು.. ಬಿಜೆಪಿ ನಾಯಕತ್ವ ಬಯಸುವ ಎಲ್ಲ ಗುಣಗಳೂ ಅವರಲ್ಲಿದೆ ಎಂದು ಲೇವಡಿ ಮಾಡಿದ್ದಾರೆ.