ದೊಡ್ಡಬಳ್ಳಾಪುರ: ಎಸ್ಎಸ್ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಗಳ ಮೊದಲ ದಿನದ ಪ್ರಥಮ ಭಾಷಾ ವಿಷಯದ ಪರೀಕ್ಷೆ ತಾಲೂಕಿನಲ್ಲಿ ಸುಗಮವಾಗಿ ನಡೆದಿದ್ದು, ತೂಬಗೆರೆ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ ಟಿವಿ ಕ್ಯಾಮರಾ ಕಿತ್ತು ಹಾಕಿರುವ ಅಹಿತಕರ ಪ್ರಕರಣ ಹೊರತುಪಡಿಸಿದರೆ ಯಾವುದೇ ಪರೀಕ್ಷಾ ಅಕ್ರಮಗಳ ಕುರಿತು ವರದಿಯಾಗಿಲ್ಲ.
ಶುಕ್ರವಾರ ನಡೆದ ಪ್ರಥಮ ಭಾಷೆ ಪರೀಕ್ಷೆಗೆ 27 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ತಾಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3256 ಹೊಸ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 3229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪೋಷಕರು ಪರೀಕ್ಷಾ ಕೇಂದ್ರಗಳಿಗೆ ಮಕ್ಕಳನ್ನು ಬಿಟ್ಟು , ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ನೋಂದಣಿ ಸಂಖ್ಯೆ ಹುಡುಕಿ, ಕೊಠಡಿಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪರೀಕ್ಷಾ ಕೇಂದ್ರಗಳ 200 ಮೀ ಅಂತರದಲ್ಲಿ ನಿಷೇಧಾಜ್ಞೆ ಜಾರಿ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಝರಾಕ್ಸ್ ಅಂಗಡಿಗಳನ್ನು ಮುಚ್ಚುವಿಕೆ. ಪ್ರತಿ ಕೇಂದ್ರಕ್ಕೂ ವೈದ್ಯಕೀಯ ಸಿಬ್ಬಂದಿ ನೇಮಕ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಶ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ತಲುಪಲು ಸಾರಿಗೆ ಸಂಸ್ಥೆಯಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳಂತೆ ಪರೀಕ್ಷೆಯ ಪಾವಿತ್ರ್ಯತೆ ಮತ್ತು ಪಾರದರ್ಶಕತೆಯಿಂದ ಸುವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕ್ಯಾಮರಾ ಕಿತ್ತ ಕಿಡಿಗೇಡಿಗಳು
ತಾಲೂಕಿನ ತೂಬಗೆರೆಯ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಕಿಡಿಗೇಡಿಗಳು ಕಿತ್ತು ಹಾಕಿರುವ ಘಟನೆ ನಡೆದಿದ್ದು, ಪರೀಕ್ಷಾ ಕೇಂದ್ರದಲ್ಲಿ ಕೆಲ ಕಾಲ ಆತಂಕ ಉಂಟಾಗಿತ್ತು.
ತೂಬಗೆರೆಯ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ನಡೆಸಲು ಸಿದ್ದತೆಗಳನ್ನು ನಡೆಸಲಾಗಿತ್ತು. ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಗಳಲ್ಲಿಯೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು.
ಶುಕ್ರವಾರ ಪರೀಕ್ಷಾ ಸಿಬ್ಬಂದಿ ಬೆಳಿಗ್ಗೆ ಬಂದು ನೋಡಿದಾಗ ಸಿಸಿಟಿವಿ ಕ್ಯಾಮರಾಗಳು ಕೆಳಗಡೆ ಬಿದ್ದಿರುವುದು ಕಂಡಿದೆ. ಗುರುವಾರ ರಾತ್ರಿ ಯಾರೋ ಕಿಡಿಗೇಡಿಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಶಾಲೆಯ ಗೇಟ್ ಮುರಿದು ಒಳ ನುಗ್ಗಿ, ಕೊಠಡಿಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಕಿತ್ತುಹಾಕಿದ್ದಾರೆ.
10 ಕೊಠಡಿಗಳಿಂದ 14 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, ಇದರಲ್ಲಿ 6 ಹಾನಿಯಾಗಿದ್ದವು. ಕೂಡಲೇ ಪರೀಕ್ಷಾ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿ ಪರಿಶೀಲನೆ ನಡೆಸಿ ಸಿಸಿಟಿವಿ ಕ್ಯಾಮರಾಗಳನ್ನು ಪುನಃ ಅಳವಡಿಸಿ ಪರೀಕ್ಷೆ ಸುಗಮವಾಗಿ ನಡೆಯುವಂತೆ ಅನುವು ಮಾಡಿಕೊಡಲಾಯಿತು.
ಡಿ.ಸಿ. ಭೇಟಿ
ಸ್ಥಳಕ್ಕೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಕ್ಷೇತ್ರ ಶಿಕ್ಷಣಾಕಾರಿ ಸೈಯೀದಾ ಅನೀಸ್, ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಭೇಟಿ ನೀಡಿ ಪರಿಶೀಲಿಸಿದರು.
ಕೃತ್ಯದಲ್ಲಿ ಭಾಗಿಯಾಗಿದ್ದ ಕಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಿಸಿಟಿವಿ ಕ್ಯಾಮರಾಗಳನ್ನು ಕಿತ್ತು ಹಾಕಿರುವ ಕಿಡಿಗೇಡಿಗಳ ಕುರುಹುಗಳ ಪತ್ತೆಯಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.