ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರವನ್ನು ತ್ಯಾಜ್ಯ ಮುಕ್ತ, ಸ್ವಚ್ಛ, ಸುಂದರ, ಹಸಿರು ನಗರವಾಗಿಸಲು ಪಣ ತೊಟ್ಟಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ (Santosh lad) ಅವರು ಇಂದು ಧಾರವಾಡ ನಗರದಲ್ಲಿ ಎರಡು ಸಾವಿರಕ್ಕೂ ಅಧಿಕ ಜನರಿಂದ ಬೃಹತ್ ಸ್ವಚ್ಛತಾ ಅಭಿಯಾನ ಕೈಗೊಂಡರು.
ಅಭಿಯಾನದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ.ಸಿಇಓ ಭುವನೇಶ ಪಾಟೀಲ, ಎಸ್.ಪಿ. ಡಾ.ಗೋಪಾಲ ಬ್ಯಾಕೋಡ, ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಆದಿಯಾಗಿ ಜಿಲ್ಲೆಯ ಎಲ್ಲ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ತಮ್ಮ ಇಲಾಖೆ, ಕಚೇರಿ ಸಿಬ್ಬಂದಿಗಳೊಂದಿಗೆ ಭಾಗವಹಿಸಿ, ಸಚಿವರ ಕನಸಿನ ಸ್ವಚ್ಛನಗರ ಅಭಿಯಾನಕ್ಕೆ ಕೈ ಜೋಡಿಸಿ, ಕಸಕಡ್ಡಿ, ಚರಂಡಿ ತ್ಯಾಜ್ಯ ತೆಗೆದರು.
ನಗರದ ಮಹಿಷಿ ರಸ್ತೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರನ್ನು, ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಮಾತನಾಡಿದ ಸಚಿವ ಸಂತೋಷ ಲಾಡ ಅವರು, ನಗರ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ ಬೇಕು. ಪ್ರತಿಯೊಬ್ಬ ನಾಗರಿಕರಲ್ಲಿಯೂ ಇದು ನಮ್ಮ ನಗರ, ನಮ್ಮ ಓಣಿ, ನನ್ನ ಮನೆ ಎಂಬ ಹೆಮ್ಮೆ ಮೂಡಿದಾಗ ಮಾತ್ರ ಸ್ವಚ್ಛ ನಗರ ಹೊಂದಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಹೆಮ್ಮ ಮೂಡುವಂತೆ ನಾವು ಕೆಲಸ ಮಾಡಬೇಕು ಎಂದು ಹೇಳಿದರು.
ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರಾದ ನೀವು ಕೈ ಜೋಡಿಸಿ ನಮ್ಮ ನಗರ, ಸ್ವಚ್ಛ ನಗರ ಎಂಬ ಅಭಿಮಾನ ಪ್ರಜ್ಞೆ ನಗರದ ಪ್ರತಿ ನಾಗರಿಕರಲ್ಲಿ ಇರಬೇಕು. ಅಂದಾಗ ಮಾತ್ರ ನಗರದ ಸೌಂದರ್ಯ ಹೆಚ್ಚಿಸಲು ಮತ್ತು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಹಾನಗರ ಪಾಲಿಕೆಯಿಂದ ಆರಂಭಿಸಿರುವ ಸ್ವಚ್ಛತಾ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿ ಹಾಗೂ ನಗರ ನಿವಾಸಿಗಳು ಸಕ್ರಿಯವಾಗಿ ಭಾಗವಹಿಸಿದರೆ, ನಗರ ಸ್ವಚ್ಛತೆ ಕಾಪಾಡಬಹುದು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಮಹಾನಗರ ಪಾಲಿಕೆಯಿಂದ ಈ ಸ್ವಚ್ಛತಾ ಅಭಿಯಾನವನ್ನು ಪ್ರತಿ ವಾರ ನಡೆಸಬೇಕು. ಅವಳಿನಗರದ ನಾಗರಿಕರಲ್ಲಿ ಹೆಚ್ಚೆಚ್ಚು ಸಿವಿಕ್ ಸೆನ್ಸ್ ಬಳೆಸಬೇಕು. ಪ್ರತಿಯೊಬ್ಬರು ಪೌರ ಕಾರ್ಮಿಕರಂತೆ ತಮ್ಮ ಮನೆ ಹಾಗೂ ತಮ್ಮ ಮನೆ ಸುತ್ತಮುತ್ತಲಿನ ಪ್ರದೇಶವನ್ನು ತಾವೇ ಪ್ರತಿದಿನ ಸ್ವಚ್ಛವಾಗಿ ಇಡಬೇಕು. ತಮ್ಮ ಮನೆಯ ಹಿಂದೆ ಮುಂದೆ ಸರಕಾರಿ ಜಮೀನು, ರಸ್ತೆ ಇದ್ದರೂ ಅದು ತಮ್ಮದೆಂದು ತಿಳಿದು ಕ್ಲೀನ್ ಮಾಡಿ ಇಟ್ಟಕೊಳ್ಳಬೇಕು. ಇದು ನಮ್ಮ ನಗರ ಎಂಬ ಹೆಮ್ಮೆ ಮತ್ತು ಇದು ನನ್ನ ಕೆಲಸ ಎಂಬ ಭಾವನೆ ಇದ್ದಾಗ ಮಾತ್ರ ನಗರ ಸುಂದರ, ಹಸಿರು ಆಗಲು ಸಾಧ್ಯವೆಂದು ಸಚಿವರು ತಿಳಿಸಿದರು.
ಧಾರವಾಡ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್ ಅವರು, ಇಂದು ಬೆಳಿಗ್ಗೆ ಧಾರವಾಡ ನಗರದಲ್ಲಿ ರೈಲ್ವೆ ಸ್ಟೇಶನ್, ಮಾಳ ಮಡ್ಡಿ ,ವನವಾಸಿ ರಾಮಮಂದಿರ, ಕಬ್ಬೂರ ರಸ್ತೆ ಮತ್ತು ರಾಮನಗೌಡ ಆಸ್ಪತ್ರೆ, ಮಾಳಾಪುರ ಲಾಸ್ಟ್ ಬಸ್ ನಿಲ್ದಾಣ, ಮತ್ತು ಶಿವಾಜಿ ಸರ್ಕಲ್, ಹೆಬ್ಬಳ್ಳಿ ಅಗಸಿ, ಚರಂತಿಮಠ ಗಾರ್ಡನ್, ಹೊಸಯಲ್ಲಾಪುರ ರಸ್ತೆ ಮತ್ತು ಪೌಲ್ ಕ್ಯಾಂಟಿನ್, ಸರಸಗಂಗಾ ಶಾಲೆ, ಜನ್ನತನಗರ ಪ್ರದೇಶಗಳಿಗೆ ಭೇಟಿ ನೀಡಿ, ಪೌರಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿ, ಸಲಿಕೆಯಿಂದ ತ್ಯಾಜ್ಯ ಸಂಗ್ರಹಿಸಿದರು, ಬುಟ್ಟಿ ತುಂಬಿ ಕಸದ ಟ್ರ್ಯಾಕ್ಟರಿಗೆ ಸ್ವತಃ ಕಸ ಹಾಕಿದರು. ಕಸಬರಿಗೆಯಿಂದ ಕಸಗೂಡಿಸಿದರು. ಸ್ವತಃ ಸಚಿವರು, ಜಿಲ್ಲಾಧಿಕಾರಿಗಳು ಬುಟ್ಟಿ, ಕಸಬರಿಗೆ ಹಿಡಿದು ಸ್ವಚ್ಛತೆಗೆ ಕೈ ಜೋಡಿಸಿದ್ದರಿಂದ, ಪೌರಕಾರ್ಮಿಕರ ಆತ್ಮಸ್ಥೈರ್ಯ ಹೆಚ್ಚಿ, ಅವರ ಅಭಿಮಾನ, ಗೌರವ, ಹೆಮ್ಮೆಯಿಂದ ಇನ್ನಷ್ಟು ಕೆಲಸ ಮಾಡಲು ಸ್ಫೂರ್ತಿ ದೊರೆಯಿತು.
ಕೊಳೆತ ಕಸಕಡ್ಡಿ ಚಲ್ಲಬೇಡಿ
ಸಚಿವ ಸಂತೋಷ ಲಾಡ್ ಅವರು ಸ್ವತಃ, ಚರಂಡಿ ಸ್ವಚ್ಛಗೊಳಿಸುವುದು, ತ್ಯಾಜ್ಯದ ಕಸ ತುಂಬುವುದು, ಪರಿಕರಗಳಿಂದ ತ್ಯಾಜ್ಯ ತುಂಬುವುದರ ಮೂಲಕ ಅವರು ಎಲ್ಲೆಂದರಲ್ಲಿ ಕಸ, ಮುಸುರೆ, ತ್ಯಾಜ್ಯ ಚೆಲ್ಲದಂತೆ ಹಾಗೂ ಅಲ್ಲಿಯೇ ತರಕಾರಿ ಮಾರುವವರಿಗೆ ಬೇಡವಾದ, ಕೊಳೆತ ತಪ್ಪಲು, ತರಕಾರಿಯನ್ನು ಎಲ್ಲಿ ಬೇಕಂದರಲ್ಲಿ ಎಸೆಯದಂತೆ ವಿನಂತಿಸಿದರು.
ಹೂಳು ತುಂಬಿದ ಚರಂಡಿ ಕ್ಲೀನ್: ಧಾರವಾಡ ರೈಲ್ವೆ ಸ್ಟೇಷನ್ ರಸ್ತೆ ಹತ್ತಿರ ಹುಳು ತುಂಬಿದ ಗಟಾರು ಸ್ವತಃ ಅವರೇ ಸ್ವಚ್ಛಗೊಳಿಸಿದರು, ಕಸಚಲ್ಲಿದ ಬ್ಲ್ಯಾಕ್ ಸ್ಪಾಟ್ ಗಳನ್ನು ಎಲ್ಲಾ ಅಧಿಕಾರಿಗಳು ಸೇರಿಕೊಂಡು ಸ್ವಚ್ಛತೆ ಕಾರ್ಯ ಮಾಡಿದರು. ಮನೆಯ ಕಾಂಪೌಂಡಿಗೆ ಹಚ್ಚಿ ಫುಟಪಾತ್ ಮೇಲೆ ಮಣ್ಣಿನ ರಾಶಿ ಬಿದ್ದಿರುವುದನ್ನು ಕಂಡು ತಕ್ಷಣವೇ ಜೆಸಿಬಿ ಮುಖಾಂತರ ತೆರವುಗೊಳಿಸಿದರು. ರಸ್ತೆಯಿಂದ ಮೇಲಿರುವ ಮತ್ತು ಕೆಳಗಿರುವ ಮ್ಯಾನ್ ಹೋಲ್ ಮುಚ್ಚಳಗಳು, ಕಸ ತುಂಬಿದ ಖಾಲಿ ಸೈಟ್‍ಗಳನ್ನು ಪರಿಶೀಲಿಸಿ, ತಕ್ಷಣ ಸಂಬಂಧಿಸಿದವರ ಮೇಲೆ ಕ್ರಮಕೈಗೊಳ್ಳಲು ಸೂಚಿಸಿದರು.
ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶದ ಬಗ್ಗೆ, ಅಲ್ಲಿನ ಸಮಸ್ಯೆಗಳ ಬಗ್ಗೆ ಪ್ರತಿದಿನ ಮಾಹಿತಿ ಹೊಂದಿರಬೇಕು ಎಂದು ಹೇಳಿದರು.
ರಾಮನಗೌಡ ಆಸ್ಪತ್ರೆಯ ಮುಂಭಾಗದಿಂದ ಮಾಳಾಪುರ ಕೊನೆಯ ಬಸ್ ಸ್ಟಾಪ್ ರಸ್ತೆಯವರೆಗೂ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿಗಳು ಸ್ವಚ್ಛತಾ ಅಭಿಯಾನದಲ್ಲಿ ರಸ್ತೆಯನ್ನು ಸ್ವಚ್ಛಗೊಳಿಸಿ ಕಸ ಹೊಡೆಯುವ ಮೂಲಕ ಒಂದು ಕಡೆ ಕಸದ ಗುಡ್ಡೆಯನ್ನು ಶೇಖರಣೆ ಮಾಡಿ ಕಸದ ಗಾಡಿಗಳಿಗೆ ಕಸವನ್ನು ಹಾಕಿದರು.
ನಂತರ ರಸ್ತೆಯ ಬೀದಿಗಳನ್ನು ಸ್ವಚ್ಛಗೊಳಿಸಿ ಕಸ ಚೆಲುವ ಪ್ರದೇಶದಲ್ಲಿ ರಂಗೋಲಿ ಬಿಡಿಸುವ ಮೂಲಕ ಇಲ್ಲಿ ಕಸವನ್ನು ಎಸಿಯಬಾರದೆಂದು ಬರೆದರು. ಶಾಲಾ,ಕಾಲೇಜು ಮಕ್ಕಳು ನಾಮಫಲಕವನ್ನು ಹಿಡಿದು, ನಮ್ಮ ಧಾರವಾಡ ಸ್ವಚ್ಛ ದಾರವಾಡ, ಕಾಪಾಡೋಣ ಕಾಪಾಡೊಣ ಸ್ವಚ್ಛತೆಯನ್ನು ಕಾಪಾಡೋಣ ಎಂಬ ಘೋಷ್ಯ ವಾಕ್ಯವನ್ನು ಕೂಗುತ್ತಾ ನಗರದ ಬೀದಿ ಬೀದಿಗಳಲ್ಲಿ ಸಂಚರಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ರಸ್ತೆಯ ಪಕ್ಕದಲ್ಲಿ ಬೀದಿ ನಾಟಕ, ಜಾನಪದ ಗೀತೆಗಳನ್ನು ಹಾಡುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛಾತಾ ಕಾರ್ಯಕ್ಕೆ ಪ್ರೇರಣೆ ನೀಡಿ, ಜಾಗೃತಗೊಳಿಸಿದರು ಮತ್ತು ಜನರಲ್ಲಿ ಸ್ವಚ್ಛತೆಯ ಮಹತ್ವದ ಅರಿವು ಮೂಡಿಸಿದರು.
ಇಂದಿನ ಸ್ವಚ್ಛತಾ ಅಭಿಯಾನದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಐಎಎಸ್ ಪ್ರೋಬೇಷನರಿ ಅಧಿಕಾರಿ ರಿತಿಕಾ ವರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಮಹಾನಗರಪಾಲಿಕೆ ಮಹಾಪೌರ ರಾಮಪ್ಪ ಬಡಿಗೇರ, ಉಪ ಪೆÇಲೀಸ್ ಆಯುಕ್ತ ಮಾನಿಂಗ ನಂದಗಾವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ ಸಂತೋಷ ಬಿರಾದಾರ, ಶಾಲಾ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಎಸ್.ಕೆಳದಿಮಠ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಮಹಾನಗರಪಾಲಿಕೆಯ ಸದಸ್ಯರು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಕರು, ಇತರ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ಪೌರಕಾರ್ಮಿಕರು ಭಾಗವಹಿಸಿದ್ದರು.
ಸ್ವಚ್ಛತಾ ಕಾರ್ಯ ನಡೆದ ಸ್ಥಳಗಳು
ಧಾರವಾಡ ಮಹಾನಗರದ ವಲಯ ಒಂದರಲ್ಲಿ ಬರುವ ವಾರ್ಡ್ ನಂಬರ್ 15 ರಲ್ಲಿನ ಮಾಳಮಡ್ಡಿ ರೈಲ್ವೆ ಸ್ಟೇಶನ್ ಮುಖ್ಯ ರಸ್ತೆ, ಮಾಳಮಡ್ಡಿ 7ನೇ ಅಡ್ಡರಸ್ತೆ, ಮಾಳಮಡ್ಡಿ 4ನೇ ಅಡ್ಡರಸ್ತೆ, ಕಬ್ಬೂರ್ ರಸ್ತೆಯ ಮಹಿಷಿ ರಸ್ತೆ ಮತ್ತು ಎಮ್ಮಿಕೇರಿ ಶಾಲೆಯ ಸುತ್ತಮುತ್ತಲಿನ ಪ್ರದೇಶ.
ವಾರ್ಡ್ ನಂಬರ್ 7 ರಲ್ಲಿನ ಶಿವಾಜಿ ವೃತ್ತದಿಂದ ರೀಗಲ್ ವೃತ್ತದವರೆಗೆ, ವಾರ್ಡ್ ನಂಬರ್ 8 ರಲ್ಲಿನ ರೀಗಲ್ ವೃತ್ತದಿಂದ ಗಾಂಧಿ ಚೌಕ್ ವರೆಗೆ, ವಾರ್ಡ್ ನಂಬರ್ 8 ರಲ್ಲಿನ ಗಾಂಧಿ ಚೌಕ್‍ನಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ಹಾಗೂ ವಿಂಭದ್ರೇಶ್ವರ ದೇವಸ್ಥಾನದಿಂದ ಹೊಸಯಲ್ಲಾಪುರ ವೃತ್ತದವರೆಗೆ.
ವಾರ್ಡ್ ನಂಬರ್ 3 ರಲ್ಲಿನ ರಾಮನಗೌಡ ಆಸ್ಪತ್ರೆ, ಮಾಳಾಪುರ ಕೊನೆಯ ನಿಲ್ದಾಣ, ವಿಆರ್‍ಎಲ್ ಕಚೇರಿ, ಎ.ಪಿ.ಎಂ.ಸಿ ಜಾನುವಾರು ಮಾರುಕಟ್ಟೆ ವರೆಗೆ, ವಾರ್ಡ್ ನಂಬರ್ 2 ಮತ್ತು 4 ರಲ್ಲಿನ ಎ.ಪಿ.ಎಂ.ಸಿ ದನದ ಮಾರುಕಟ್ಟೆ ಮೊದಲ ದ್ವಾರದಿಂದ ಮಾಲಾಪುರ ಕೊನೆಯ ಬಸ್ ನಿಲ್ದಾಣದವರೆಗೆ, ಮಾಳಾಪುರದ ಕೊನೆಯ ಹಂತದಿಂದ ಬಸವ ಕಲ್ಯಾಣ ನಗರದ ವರೆಗೆ ಹಾಗೂ ಬಸವ ಕಲ್ಯಾಣ ನಗರದಿಂದ ಪ್ರಿನ್ಸ್ ಈಜುಕೊಳದ ವರೆಗೆ.
ವಾರ್ಡ್ ನಂಬರ್ 22 ರಲ್ಲಿನ ಪೌಲ್ ಕ್ಯಾಂಟೀನ್ ದಿಂದ ಸರಸಗಂಗಾ ಶಾಲೆಯ ವರೆಗೆ, ಸರಸಗಂಗಾ ಶಾಲೆಯಿಂದ ಮಸೀದಿಯ ವರೆಗೆ, ಮಸೀದಿಯಿಂದ ಆಟೋ ಸ್ಟ್ಯಾಂಡ್ ನಿಲ್ದಾಣದವರೆಗೆ, ಆಟೋ ಸ್ಟ್ಯಾಂಡ್ ನಿಂದ ಘನ ತ್ಯಾಜ ವಿಲೇವಾರಿ(SW) ಪ್ಲಾಂಟ್ ಗೇಟ್ ವರಿಗೆ ಪೌರಕಾರ್ಮಿಕರು ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡರು.