ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನಂ (Tirupati) ಇನ್ನುಮುಂದೆ ದೇವಾಸ್ಥಾನಕ್ಕೆ ಬರುವ ಭಕ್ತರಿಗೆ ದಿನಕ್ಕೆ ಎರಡು ಬಾರಿ ವಡೆ ವಿತರಣೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಲಘು ಉಪಹಾರದ ವೇಳೆ ವಡೆಯನ್ನು ತಾರಿಗೊಂಡ ಅನ್ನಪ್ರಸಾದ ಕೇಂದ್ರದಲ್ಲಿ ಬೆಳಿಗ್ಗೆ ಮತ್ತು ಸಂಜೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಈ ನೂತನ ಕ್ರಮವು ಈಗಾಗಲೇ ನಡೆಯುತ್ತಿರುವ ಉಚಿತ ಅನ್ನಪ್ರಸಾದ ಸೇವೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದ್ದು, ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲ ಒದಗಿಸಲಿದೆ.
ದೇವಾಸ್ಥಾನದ ಅಧ್ಯಕ್ಷ ಬಿ.ಆರ್. ನಾಯ್ಡು ಪರಂಪರೆಯ ಪ್ರಕಾರ ಪೂಜೆ ಸಲ್ಲಿಸಿ, ಈ ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರು ಭಕ್ತರಿಗೆ ಸ್ವತಃ ವಡೆಗಳನ್ನು ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಈ ಹಿಂದೆ ಅನ್ನಪ್ರಸಾದ ಕೇಂದ್ರದಲ್ಲಿ ಪ್ರತಿ ದಿನ ಸುಮಾರು 40,000 ವಡೆಗಳನ್ನು ಮಧ್ಯಾಹ್ನದೂಟದ ಸಮಯದಲ್ಲಿ ಮಾತ್ರ ತಯಾರಿಸಲಾಗುತ್ತಿತ್ತು. ಸೋಮವಾರದಿಂದ ಬೆಳಗ್ಗೆ 11 ಗಂಟೆಯಿಂದ ರಾತ್ರಿ 10.30ರವರೆಗೆ ವಡೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ.
ಭಕ್ತರ ರಾತ್ರಿಯೂಟಕ್ಕೂ ವಡೆ ನೀಡಬೇಕೆಂಬ ಬೇಡಿಕೆಯು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ನಾಯ್ಡು ಹೇಳಿದರು.
ಈ ನೂತನ ಸೇವೆಯಿಂದ ಪ್ರತಿದಿನ 70,000ರಿಂದ 75,000 ವಡೆಗಳವರೆಗೆ ತಯಾರಿಸಬೇಕಾಗಬಹುದು ಎನ್ನುವ ಲೆಕ್ಕಾಚಾರವಿದೆ.
ದೇವಾಸ್ಥಾನದಲ್ಲಿ ತಯಾರಿಸುವ ವಡೆಗಳನ್ನು ಬೆಂಗಾಲ್ ಗ್ರಾಂ, ಹಸಿಮೆಣಸು, ಶುಂಠಿ, ಕರಿಬೇವು. ಕೊತ್ತಂಬರಿ, ಪುದೀನಾ ಬಳಸಿ ರುಚಿಕರ ರೀತಿಯಲ್ಲಿ ತಯಾರಿಸಲಾಗುತ್ತಿದ್ದು, ಇದಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.