ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ (B.Dayananda) ಸೇರಿ ಮೂವರು ಐಪಿಎಸ್ ಅಧಿಕಾರಿಗಳನ್ನು (IPS officers) ಅಮಾನತು ಮಾಡಿದ ರಾಜ್ಯ ಸರಕಾರದ (State Government) ಕ್ರಮಕ್ಕೆ ಕೇಂದ್ರ ಸರಕಾರ (Central Government) ಬೆಂಬಲಿಸಿ ಅಧಿಕೃತ ಮುದ್ರೆ ಹಾಕಿದೆ.
ಆದರೆ ಇದಕ್ಕೆ ಬಿಜೆಪಿ ಶಾಸಕ (BJP MLA) ಎಸ್ ಸುರೇಶ್ ಕುಮಾರ್ (S.Suresh Kumar) ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಅವರು, “3 ಐಪಿಎಸ್ ಅಮಾನತಿಗೆ ಕೇಂದ್ರ ಅಸ್ತು ” ಎಂಬ ಸುದ್ದಿ ಓದಿ ಮನಸ್ಸಿಗೆ ತುಂಬಾ ಬೇಸರವಾಗಿದೆ. ಅಧಿಕಾರಿಗಳ ನೈತಿಕ ಬಲ ಇನ್ನಷ್ಟು ಕುಸಿಯುತ್ತದೆ ಎಂದು ಮೋದಿ ಸರ್ಕಾರದ (Modi Government) ನಿರ್ಣಯದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರವು ಐಎಎಸ್ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟರು. ಕರ್ತವ್ಯ ನಿರ್ಲಕ್ಷ್ಯತದ ಆರೋಪದ ಮೇರೆಗೆ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು.
ಇದೀಗ ದಯಾನಂದ್ ಸೇರಿದಂತೆ ಐಪಿಎಸ್ ಅಧಿಕಾರಿಗಳಾದ ವಿಕಾಸ ಕುಮಾರ್ ವಿಕಾಸ್ ಮತ್ತು ಶೇಖರ್ ಅವರ ಅಮಾನತಿಗೆ ಕೇಂದ್ರ ಅನುಮೋದನೆ ನೀಡಿದೆ.
ಇದೇ ವೇಳೆ ಶಿಸ್ತು ಪ್ರಕ್ರಿಯೆ ಮುಂದುವರಿಸುವ ಮೂಲಕ ಅಧಿಕಾರಿಗಳ ವಿರುದ್ಧ 30 ದಿನಗಳಲ್ಲಿ ಚಾರ್ಜ್ ಶೀಟ್ ಹಾಕುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ.
ಆರೋಪಪಟ್ಟಿ ಸಲ್ಲಿಕೆಯ ನಂತರ ಕೇಂದ್ರಕ್ಕೆ ಮಾಹಿತಿ ನೀಡಬೇಕು ಎಂದು ಕೇಂದ್ರ ತಿಳಿಸಿದೆ. ಇದು ಆಡಳಿತಾತಕ ಕ್ರಮಗಳಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಐಪಿಎಸ್ ಅಧಿಕಾರಿಗಳ ಶಿಸ್ತು ಕ್ರಮಗಳ ಕೈಗೊಂಡಿರುವುದು ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಕ್ರಮವಾಗಿದೆ.
ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಅಮಾನತು ಬಗ್ಗೆ ನಿಯಮಾನುಸಾರ ಕೇಂದ್ರ ಸರಕಾರ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು.
ಅಧಿಕಾರಿಗಳ ಕೇಡರ್ ಹಾಗೂ ನೇಮಕಾತಿ ಬಗ್ಗೆ ರಾಜ್ಯ ಸರಕಾರ ಅಧಿಕಾರ ಹೊಂದಿದೆ. ಆದರೆ, ಅಮಾನತು ವಿಚಾರದಲ್ಲಿ ಕೇಂದ್ರ ಸರಕಾರದೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ನಿಯಮವಿದೆ.
ಐಪಿಎಸ್ ಅಥವಾ ಐಎಎಸ್ ಶ್ರೇಣಿಯ ಅಧಿಕಾರಿಗಳನ್ನು ಅಮಾನತುಗೊಳಿಸಿದರ ಬಗ್ಗೆ ಒಂದು ದಿನದಲ್ಲಿ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಮಾಹಿತಿ ನೀಡಬೇಕು.
ನಂತರ 15 ದಿನಗಳಲ್ಲಿ ಆ ಅಧಿಕಾರಿಗಳ ಅಮಾನತಿಗೆ ಕಾರಣಗಳ ಕುರಿತು ಸಮಗ್ರ ವರದಿ ಕೇಂದ್ರಕ್ಕೆ ಸಲ್ಲಿಸಿ ರಾಜ್ಯ ಸರಕಾರ ಮನವರಿಕೆ ಮಾಡಿಕೊಡಬೇಕು. ಈ ವರದಿ ಆಧರಿಸಿ 1 ತಿಂಗಳಲ್ಲಿ ಅಮಾನತು ಆದೇಶವನ್ನು ಒಪ್ಪಿಗೆ ಅಥವಾ ತಿರಸ್ಕಾರದ ಬಗ್ಗೆ ಕೇಂದ್ರ ನಿರ್ಣಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಂಡಿದ್ದು, ಕೇಂದ್ರ ಸರಕಾರವು ಸಹ ಉತ್ತರ ನೀಡಿದೆ.
ಪ್ರಕರಣದ ಹಿನ್ನೆಲೆ: ಜೂನ್ 4ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ 2025 ರ ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 11 ಜನರು ಮೃತಪಟ್ಟು, 56 ಜನರು ಗಾಯಗೊಂಡಿದ್ದರು. ಇದರಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ರಾಜ್ಯ ಸರಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿತ್ತು.
ಜನಸಂದಣಿ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಮಾಡದಿರುವುದು ಮತ್ತು ಸಾರ್ವಜನಿಕರಿಗೆ ಸುರಕ್ಷತಾ ಮಾಹಿತಿಯನ್ನು ಒದಗಿಸದಿರುವುದು, ಈ ದುರಂತಕ್ಕೆ ಕಾರಣವಾಯಿತು, ಅಲ್ಲದೆ ಸಿಎಂಗೆ ಘಟನೆ ಕುರಿತು ಮಾಹಿತಿ ನೀಡದೇ ಇರುವ ಕಾರಣ ರಾಜ್ಯ ಸರಕಾರದ ಆದೇಶದಲ್ಲಿ ತಿಳಿಸಿತ್ತು.
ಈ ಕಾರಣಕ್ಕಾಗಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್. ಟೆಕ್ಕನವರ್, ಕಬ್ಬನ್ ಪಾರ್ಕ್ ಎಸಿಪಿ ಸಿ. ಬಾಲಕೃಷ್ಣ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ.ಕೆ. ಗಿರೀಶ್ ಅವರನ್ನು ಅಮಾನತುಗೊಳಿಸಿದೆ.
ಫೋಟೋ ಕೃಪೆ: ಸುರೇಶ್ ಕುಮಾರ್ ಫೇಸ್ಬುಕ್