ದೊಡ್ಡಬಳ್ಳಾಪುರ : ಗ್ರಾಮಪಂಚಾಯಿತಿ ಅವಧಿ ಅಂತ್ಯದ ಹಿನ್ನೆಲೆ ಚುನಾವಣೆ ನಡೆಸುವಂತೆ ವಿರೋಧ ಪಕ್ಷ ಒತ್ತಡ ಹಾಗೂ ಆಡಳಿತ ಸಮಿತಿ ನೇಮಿಸಲು ಸರ್ಕಾರದ ಪ್ರಯತ್ನದ ನಡುವೆಯೇ ಕರೊನಾ ಸೋಂಕಿನ ಕಾರಣ ಗ್ರಾಮಪಂಚಾಯಿತಿ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ಆದೇಶಿಸಿದೆ.
ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ನೀಡಿರುವ ಮಾದ್ಯಮ ಪ್ರಕಟಣೆಯಲ್ಲಿ ಈ ಕುರಿತು ಅವರು,ಉಲ್ಲೇಖಿಸಿದ್ದಾರೆ.
ಜೂನ್ ಹಾಗೂ ಆಗಸ್ಟ್ ತಿಂಗಳಲ್ಲಿ ಸುಮಾರು 5800 ಗ್ರಾಮಪಂಚಾಯಿತಿ ಅವಧಿ ಮುಕ್ತಾಯವಾಗುತ್ತಿದ್ದ ಹಿನ್ನೆಲೆ ಚುನಾವಣಾ ಆಯೋಗ ಚುನಾವೆಣೆ ನಡೆಸಲು ಸಿದ್ದತೆ ಕೈಗೊಳ್ಳಲಾಗಿತ್ತು.ಈ ಹಂತದಲ್ಲಿ ದೇಶದಾದ್ಯಂತ ಕರೊನಾ ಸೋಂಕು ನಿಯಂತ್ರಣಕ್ಕಾಗಿ ಘೋಷಿಸಲಾದ ಲಾಕ್ ಡೌನ್ ಕಾರಣ ಸಿದ್ದತೆಗಳನ್ನು ನಿಲ್ಲಿಸಲಾಯಿತು.ಅಲ್ಲದೆ ಚುನಾವಣೆ ಪ್ರಕ್ರಿಯೆಗೆ ಲಾಕ್ ಡೌನ್ ಅಡ್ಡಿಯಾಗಿದೆ.
ಈ ನಡುವೆ ಚುನಾವಣೆ ಪ್ರಕ್ರಿಯೆ ನಡೆಸಲು,ಜಿಲ್ಲಾಧಿಕಾರಿಗಳ ಅಭಿಪ್ರಾಯ ಕೇಳಲಾಗಿ,ಜಿಲ್ಲಾಡಳಿತ ಕರೊನಾ ನಿಯಂತ್ರಣದಲ್ಲಿ ತೊಡಗಿರುವುದರಿಂದ ಚುನಾವಣೆ ಕಾರ್ಯಕ್ಕೆ ಸಿಬ್ಬಂದಿಗಳ ಕೊರತೆ,ಸಾರಿಗೆ ವ್ಯವಸ್ಥೆ ಕೊರತೆ,ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತೊಂದರೆಗಳು ಉಂಟಾಗುವ ಕಂಡು ಬಂದಿರುತ್ತದೆ.ಅಲ್ಲದೆ ಚುನಾವಣೆ ಕಾರ್ಯದ ವೇಳೆ ಜನಸಾಮಾನ್ಯರ ಆರೋಗ್ಯದ ರಕ್ಷಣೆಗೆ ತೊಂದರೆ ಮತ್ತು ಕರೊನಾ ಸೋಂಕು ಹರಡುವಿಕೆಗೆ ಅವಕಾಶ ಉಂಟಾಗುತ್ತದೆ ಎಂಬ ಮಾಹಿತಿ ದೊರಕಿದೆ.
ಸರ್ವೋಚ್ಚ ನ್ಯಾಯಾಲಯವು ಕಿಷನ್ ಸಿಂಗ್ ತೋಮರ್ ವಿರುದ್ದ ಸಿಟಿ ಮುನಿಸಿಪಲ್ ಕಾರ್ಪೊರೇಷನ್, ಅಹಮದಾಬಾದ್ ಮತ್ತು ಇತರರು, ಪ್ರಕರಣದಲ್ಲಿ ನೀಡಿರುವ ಆದೇಶದಲ್ಲಿ,ಮಾನವ ನಿರ್ಮಿತ ಅವಘಡಗಳಿಂದಾಗಿ ಕಾನೂನು ಸುವ್ಯವಸ್ಥೆ ಹಾಳಾದ ಪರಿಸ್ಥಿತಿಯಲ್ಲಿ.ಅಥವಾ, ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ಚುನಾವಣೆ ಪ್ರಕ್ರಿಯೆ ಕೈಗೊಳ್ಳುವ ಪ್ರಾಧಿಕಾರಗಳಿಗೆ ಚುನಾವಣೆ ನಡೆಸುವುದು ಕಷ್ಟ ಸಾಧ್ಯವೆಂದು ಹಾಗೂ ಇಂತಹ ಪರಿಸ್ಥಿತಿಯೆ ಅಸಾಧಾರಣ ಪರಿಸ್ಥಿತಿ (EXCEPTIONAL CIRCUMSTANCES) ಎಂದು ಉಲ್ಲೇಖಿಸಲಾಗಿರುತ್ತದೆ.
ರಾಜ್ಯ ಚುನಾವಣಾ ಆಯೋಗವು,ಗ್ರಾಮಪಂಚಾಯಿತಿ ಸಾರ್ವತ್ರಿಕ ಚುನಾವಣೆಯನ್ನು ನಡೆಸುವ ಸಾಧ್ಯಸಾಧ್ಯತೆಗಳ ಬಗ್ಗೆ ಪರಿಶೀಲಿಸಿ,ಪ್ರಸ್ತುತ ಪರಿಸ್ಥಿತಿಯನ್ನು ಅಸಾಧಾರಣ ಪರಿಸ್ಥಿತಿ (EXCEPTIONAL CIRCUMSTANCES) ಎಂದು ಪರಿಗಣಿಸಿ,ಭಾರತ ಸಂವಿಧಾನದ ಪರಿಚ್ಛೇದ 243-ಕೆ ರಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಪಂಚಾಯಿತಿಗಳ ಚುನಾವಣೆಯನ್ನು ನಡೆಸುವ ಸಂಬಂಧ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಗ್ರಾಮಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು ಅನಿವಾರ್ಯತೆಯಿಂದ ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಿದೆ,ಅಲ್ಲದೆ ಮುಂದಿನ ದಿನಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣೆ ನಡೆಸುವುದಾಗಿ ತಿಳಿಸಿದೆ.