ಹಾಸನ : ಹೊರರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಿ ಅವರಿಗೆ ನೀಡಬೇಕಾದ ಸುಸಜ್ಜಿತ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ಅವರು ತಿಳಿಸಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕು ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಾಗೂ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಜಿಲ್ಲೆಯ ಸಂಪೂರ್ಣ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಹೊರ ರಾಜ್ಯದಿಂದ ಬರುವ ಎಲ್ಲರ ತಪಾಸಣೆ ಮಾಡಿ ವರದಿ ಬಂದ ನಂತರವೇ ಸೋಂಕು ಇಲ್ಲದವರನ್ನು ಅವರವರ ಮನೆಗಳಿಗೆ ಕಳಿಸಲಾಗುತ್ತದೆ. ಹಾಗೆಯೇ ಪಾಸಿಟೀವ್ ಬಂದವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕೋವಿಡ್-19 ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸುರಕ್ಷತಾ ಸಾಧನಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಹೇಳಿದರು.
ಹಾಸನ ಜಿಲ್ಲೆಗೆ ಪ್ರತಿವಾರ ಭೇಟಿ ನೀಡಲಾಗುವುದು. ಬಡವರು ಹಾಗೂ ಸಾರ್ವಜನಿಕರ ಸಮಸ್ಯೆಗಳಿದ್ದರೆ ಅವುಗಳಿಗೆ ಸ್ಪಂದಿಸಿ ಕೂಡಲೆ ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಖಾಸಗಿ ಬ್ಯಾಂಕ್‍ಗಳಲ್ಲಿ ಗ್ರಾಹಕರಿಗೆ ಸಾಲದ ಕಂತುಗಳನ್ನು ಕಟ್ಟುವಂತೆ ಒತ್ತಡ ಹೇರುತ್ತಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರಲ್ಲದೆ, ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಎಲ್ಲಾ ಜನ ಪ್ರತಿನಿಧಿಗಳ ಸಹಕಾರ ಪಡೆದು ಅಭಿವೃದ್ಧಿಯ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸಚಿವರು ಹೇಳಿದರು.
ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್, ಉಪ ವಿಭಾಗಾಧಿಕಾರಿ ಡಾ|| ನವೀನ್ ಭಟ್, ತಹಶಿಲ್ದಾರ್ ಮಾರುತಿ ಮತ್ತಿತರರು ಹಾಜರಿದ್ದರು.
*********