ನೆಲಮಂಗಲ: ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕದ ನಿರ್ವಹಣೆಯು ಸರ್ಕಾರದ ನಿಯಮಗಳ ಅನ್ವಯ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯ ಹಾಗೂ ಪರಿಸರ ಸಚಿವ ಆನಂದ್‌ಸಿಂಗ್ ಅವರು ಎಚ್ಚರಿಕೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕು, ಸೋಂಪುರ ಹೋಬಳಿಯ ಪೆಮ್ಮನಹಳ್ಳಿ, ತಿಮ್ಮನಾಯ್ಕನಹಳ್ಳಿ ಬಳಿಯ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕಕ್ಕೆ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಚಿವರು ಮಾತನಾಡಿದರು.
ಎ ಡಿವಿಜನ್ ಆಫ್ ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಲಿಮಿಟೆಡ್ ವತಿಯಿಂದ ಕರ್ನಾಟಕ ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್‌ನಡಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯ ಸಂಸ್ಕರಣೆ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ದೂರಿನ ಹಿನ್ನೆಲೆ ಖುದ್ದು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.
ಸ್ಥಳೀಯರ ಸಹಕಾರದೊಂದಿಗೆ ಸರ್ಕಾರ ನಿಯಮಗಳನ್ನು ಪಾಲಿಸಬೇಕು. ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿದಾಗ ಇಂಥದ್ದೆ ಪರಿಸ್ಥಿತಿ ಕಂಡುಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇಂತಹ ದೂರುಗಳು ಬಾರದಂತೆ ಜಾಗ್ರತೆ ವಹಿಸಬೇಕು ಎಂದರು.
ಘಟಕದಲ್ಲಿ ನಿರಂತರ ತ್ಯಾಜ್ಯ ಸಂಸ್ಕರಣೆ ನಡೆಯುತ್ತಿದೆ. ಇದರಿಂದ ಹರಡುವ ವಾಸನೆ ಪ್ರಮಾಣವೂ ಹೆಚ್ಚಾಗಿದೆ. ಇದನ್ನು ತಡೆಯಲು ಈ ಪ್ರದೇಶದಲ್ಲಿ 200 ಮೀಟರ್ ಬಫರ್ ಜೋನ್ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಈ ಕಾರ್ಖಾನೆ ಸುತ್ತಮುತ್ತ ಸಾಕಷ್ಟು ಗ್ರಾಮಗಳಿವೆ ಹಾಗೂ ದಾಬಸ್‌ಪೇಟೆ ಪಟ್ಟಣವು ತುಂಬಾ ಹತ್ತಿರದಲ್ಲಿದೆ. ಈ ಘಟಕದಿಂದ ದುರ್ವಾಸನೆ ಬಾರದಂತೆ ಕ್ರಮ ವಹಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಸಚಿವರು ಭರವಸೆ ನೀಡಿದರು.
ಕರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ರಾಜ್ಯದಲ್ಲಿ ಕೊರೋನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಫಲವಾಗಿದೆ. ಕೇಂದ್ರ ಸರ್ಕಾರದ ಪೂರಕ ನೆರವಿನೊಂದಿಗೆ ರಾಜ್ಯ ಸರ್ಕಾರವು ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಘಟಕ ಆರಂಭದಿಂದಲೂ ಸಾಕಷ್ಟು ಸಮಸ್ಯೆ ಎದುರಾಗಿದೆ. ಸಂಜೆ ವೇಳೆ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗಿದೆ. ತ್ಯಾಜ್ಯ ಘಟಕದ ವಿಷಕಾರಿ ವಸ್ತುಗಳು ಅಂತರ್ಜಲ ಸೇರಿ ಕೊಳವೆಬಾವಿಗಳಲ್ಲಿ ನೀರು ಕಲುಷಿತಗೊಂಡಿವೆ. ಘಟಕದಿಂದ ಬರುವ ನೀರನ್ನು ಕುಡಿದು ಜಾನುವಾರುಗಳು ಮೃತಪಟ್ಟಿವೆ. ಸುತ್ತಮತ್ತಲ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ದುರ್ವಾಸನೆಗೆ ಸಾರ್ವಜನಿಕರು ಮೂಗುಮುಚ್ಚಿಕೊಂಡೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಸಮಸ್ಯೆ ತೋಡಿಕೊಂಡರು.
ರಾಮ್ಕಿ ಕಂಪನಿ ವ್ಯವಸ್ಥಾಪಕ ಅಮಿತ್ ಚೌಧರಿ ಘಟಕದ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.