ದೊಡ್ಡಬಳ್ಳಾಪುರ: ಮಗನಿಗೆ ಕೋವಿಡ್-19 ದೃಢ ಪಟ್ಟು ಆಸ್ಪತ್ರೆಯಲ್ಲಿದ್ದರು ಸಹ ಅಕ್ಕಪಕ್ಕದವರು ನಿಂಧಿಸಿದ್ದರಿಂದ ಮನನೊಂದ ನಗರದ ಖಾಸ್ ಬಾಗ್ ನಿವಾಸಿ ನಾಗರಾಜ್(52) ಮಂಗಳವಾರ ಮರಕ್ಕೆ ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ.
ಮೃತರ ಮಗಳು ಎಚ್.ಎನ್.ಆಶಾ ನಗರ ಪೊಲೀಸ್ ಠಾಣೆಗೆ ನೀಡುವ ದೂರಿನಲ್ಲಿ,ಖಾಸ್ ಬಾಗ್ ವಾರ್ಡ್ನ ಮುಖಂಡರಾದ ಮುದ್ದಪ್ಪ, ಹನುಮಂತರಾಯಪ್ಪ ಅವರು ನಮ್ಮ ತಂದೆಯ ಮೊಬೈಲ್ಗೆ ಕರೆ ಮಾಡಿ ಇಲ್ಲಿಂದ ಮನೆ ಖಾಲಿಮಾಡಿಕೊಂಡು ಹೋಗಬೇಕು.ನೀವುಗಳು ಇಲ್ಲಿಯೇ ಇದ್ದರೆ ಇತರರಿಗು ಕರೊನಾ ಸೋಂಕು ಹರಡುತ್ತದೆ ಎಂದು ಅವಾಚ್ಚವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಮ್ಮ ತಂದೆಗೆ ಯಾವುದೇ ರೀತಿಯ ಕರೊನಾ ಸೋಂಕು ಇರಲಿಲ್ಲ. ಆದರೆ ನಮ್ಮ ಅಣ್ಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಆತನಿಗೆ ಕೋವಿಡ್-19 ದೃಢಪಟ್ಟಿತ್ತು.ಇದನ್ನೇ ನೆಪ ಮಾಡಿಕೊಂಡು ನಿಂದಿಸಿ ಮನೆ ಖಾಲಿಮಾಡಿಕೊಂಡು ಇಲ್ಲಿಂದ ಬೇರೆ ಕಡೆಗೆ ಹೋಗುವಂತೆ ಒತ್ತಡ ಹೇರಿದ್ದರಿಂದ ಮಾನಸಿಕವಾಗಿ ನೊಂದಿದ್ದರು.
ಸೋಮವಾರ ಮನೆಯಿಂದ ಹೊರ ಹೋದವರು ಹೆಸರಘಟ್ಟ ಸಮೀಪದ ಕೆರೆ ಸಮೀಪ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಹ ನಮ್ಮ ತಂದೆಯವರು ನನಗೆ ಕರೆ ಮಾಡಿದ ಸಂದರ್ಭದಲ್ಲಿ ಹೇಳಿದ್ದಾರೆ. ನಮ್ಮ ತಂದೆಯವರೊಂದಿಗೆ ನಡೆದಿರುವ ಸಂಭಾಷಣೆಯ ಧ್ವನಿ ಮುದ್ರಣವು ಸಹ ಇದೆ. ಹೀಗಾಗಿ ಹನುಮಂತರಾಯಪ್ಪ, ಮುದ್ದಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ದಪ್ಪ ಸ್ಪಷ್ಟನೆ
ನಾಗರಾಜ್ ಅವರ ಮಗನಿಗೆ ಕರೊನಾ ಸೋಂಕು ದೃಢ ಪಟ್ಟ ನಂತರ ಖಾಸ್ಬಾಗ್ ಪ್ರದೇಶದಲ್ಲಿ ನಗರಸಭೆ ಸಿಬ್ಬಂದಿಗೆ ಹೇಳಿ ಔಷಧಿ ಸಿಂಪರಣೆ ಮಾಡಿಸಿದ್ದೇವೆ.
ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಿಸಿದ್ದೇನೆ.ನಾಗರಾಜ್ ಅವರ ಮನೆಯವರಿಗೆ ಯಾರು ಸಹ ಹೊರಗೆ ಬರಬೇಡಿ. ನಿಮಗೆ ಅಗತ್ಯ ಇರುವ ವಸ್ತುಗಳನ್ನು ಕೊಡಿಸುವುದಾಗಿಯು ಹೇಳಿದ್ದೇವೆ. ಕೋವಿಡ್-19 ಲಾಕ್‌ಡೌನ್ ಆರಂಭವಾದಾಗಿನಿಂದಲು ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಜನರಿಗೆ ದಿನಸಿ ಕಿಟ್ಗಳನ್ನು ವಯಕ್ತಿಕವಾಗಿ ಹಾಗೂ ಬಿಜೆಪಿ ಪಕ್ಷದ ವತಿಯಿಂದಲು ಹಂಚಿದ್ದೇವೆ.ಇಷ್ಟೆಲ್ಲಾ ಸೇವೆ ಮಾಡಿಯು ಸಹ ಪೊಲೀಸ್ ಠಾಣೆಗೆ ನಮ್ಮ ವಿರುದ್ಧ ಇಲ್ಲ ಸಲ್ಲದ ದೂರು ನೀಡಲಾಗಿದೆ. ಪೊಲೀಸರು ಸತ್ಯ ಯಾವುದು ಎನ್ನುವುದನ್ನು ತನಿಖೆ ನಡೆಸಲಿ.ನಾಗರಾಜ್ ಅವರ ಕುಟುಂಬದವರು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವು ಇಲ್ಲ ಎಂದು ಮುದ್ದಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.