ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕೋವಿಡ್-19 ಸಹಾಯವಾಣಿ ಕೇಂದ್ರವನ್ನು ತೆರೆದು, ಗ್ರಾಮ ಮಟ್ಟದ ಕಾರ್ಯಪಡೆಯನ್ನು ಚುರುಕು ಗೊಳಿಸುವ ಮೂಲಕ ಕೊರೋನಾ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ. ನಾಗರಾಜ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿ ತಾಲೂಕಿನ, ಬೀರಸಂದ್ರ ಗ್ರಾಮದ, ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ “ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವಿದ್ಯುತ್ ಬಿಲ್ ಬಾಕಿ ಇದ್ದು, ತ್ವರಿತವಾಗಿ ಬೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಿ, ರಶೀದಿಯನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸಲು ತಿಳಿಸಿದರಲ್ಲದೆ, ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ ಹಾಗೂ ಜಲ್ ಜೀವನ್ ಮಿಷನ್ ಯೋಜನೆಗಳಡಿ ಕೈಗೊಂಡಿರುವ ವೈಯಕ್ತಿಕ ಶೌಚಾಲಯ, ಘನ ತ್ಯಾಜ್ಯ ಸಂಗ್ರಹಣೆ ಘಟಕ, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಶೌಚಾಲಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ ಅವರು ಮಾತನಾಡಿ ನರೇಗಾ ಯೋಜನೆಯಡಿ, ಗೋಕಟ್ಟೆ ಕಾಮಗಾರಿ, ಬದು ನಿರ್ಮಾಣ ಕಾಮಗಾರಿ, ಕೃಷಿಹೊಂಡ ಕಾಮಗಾರಿ, ಚರಂಡಿ ಕಾಮಗಾರಿ, ಗಿಡ ನೆಡುವ ಕಾಮಗಾರಿ, ನಮ್ಮ ಹೊಲ ನಮ್ಮ ದಾರಿ, ದನಗಳ ಕುಡಿಯುವ ನೀರಿನ ತೊಟ್ಟಿ, ಕಿಚನ್ ಗಾರ್ಡನ್, ಸೊಕ್ ಪಿಟ್, ಶಾಲೆ ಕಂಪೌಂಡ್ ಮತ್ತು ಆಟದ ಮೈದಾನ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಹೆಚ್ಚು ನಿರ್ಮಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರುಗಳು,ತಾಲ್ಲೂಕುಗಳ ಅಭಿಯಂತರರು ಜಿಲ್ಲಾ ಎಸ್.ಬಿ.ಎಂ.ಜಿ. ಸಮಾಲೋಚರುಗಳು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ತಾಲ್ಲೂಕುಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.